ವಿಶ್ವವಿದ್ಯಾಲಯಗಳು ಬ್ಲಾಗ್ ಗಳನ್ನು ಹೀಗೆ ಬಳಸಬೇಕು
ಭಯೋತ್ಪಾದನೆ ನಮ್ಮೆದುರಿನ ಜ್ವಲಂತ ಸಮಸ್ಯೆ. ಅದು ಯಾವ ಜಾತಿ, ಮತವನ್ನೂ ಬಿಡದು. ಮೂಲಭೂತವಾದಿತನಕ್ಕೆ ಯಾವುದರ ಮೇಲೂ ಪ್ರೀತಿ ಇಲ್ಲ. ಇಷ್ಟಾದರೆ ಪರವಾಗಿಲ್ಲ. ಆದರೆ ವಿನಾಕಾರಣ ದ್ವೇಷವಿದೆ. ಇಂದಿನ ಮೂಲಭೂತವಾದಿಗಳು ಯುವಜನರಲ್ಲಿ ಹುಟ್ಟು ಹಾಕುತ್ತಿರುವುದು ವಿನಾಕಾರಣ ಪ್ರೀತಿಯಲ್ಲ ; ದ್ವೇಷವನ್ನು. ಹಾಗಾಗಿ ಭಯೋತ್ಪಾದನೆ ಮನೆ ಬಾಗಿಲಿಗೇ, ಹೆಚ್ಚೆಂದರೆ ಮನೆಯೊಳಗೆ ಬಂದು ಕುಳಿತಿದೆ ಎಂದರೂ ಅಚ್ಚರಿಯಿಲ್ಲ.
ಇಂಥ ಸಂದರ್ಭದಲ್ಲಿ ಸರಕಾರವೊಂದು ಆ ಕುರಿತು ಯುವಜನರಲ್ಲಿ ಜಾಗೃತಿಯ ದೀಪ ಹಚ್ಚುವ ಕೆಲಸ ಆರಂಭಿಸಿದೆ. ಅದಕ್ಕೆ ನಾವು ಮೆಚ್ಚುಗೆ ವ್ಯಕ್ತಪಡಿಸಬೇಕು. ಇಲ್ಲಿ ಸರಕಾರ ಯಾವ ಪಕ್ಷದ್ದು, ಯಾವ ನೆಲೆಯದ್ದು ಎಂದೆಲ್ಲಾ ಚಿಂತಿಸಬೇಕಿಲ್ಲ ಎಂಬುದು ನನ್ನ ಅನಿಸಿಕೆ. ಉನ್ನತ ಶಿಕ್ಷಣ ಸಚಿವರು ಆರಂಭಿಸಿರುವ ಜಾಗೃತಿ ಜಾಥಾಕ್ಕೆ ಎಲ್ಲರೂ ಸ್ಪಂದಿಸಲೇಬೇಕು. ಇಲ್ಲವಾದರೆ ನಮ್ಮ ಮನೆಯಲ್ಲೇ ಭಯೋತ್ಪಾದಕರು ಹುಟ್ಟಿಕೊಳ್ಳುವ ಆತಂಕವಿದೆ. ಇದು ಕೆಲವೊಮ್ಮೆ ತೀರಾ ವಿಷಯದ ವೈಭವೀಕರಣವೆನಿಸಿದರೂ, ಅದು ವಾಸ್ತವದಿಂದ ದೂರವಿಲ್ಲ.
ಸಚಿವರು ನಮ್ಮ ವಿಶ್ವವಿದ್ಯಾಲಯಗಳತ್ತ ಕಣ್ಣು ಹೊರಳಿಸಬೇಕು. ಅಲ್ಲಿರುವ ಜಾತೀಯತೆ, ಸೋಮಾರಿತನ, ಭ್ರಷ್ಟ ವ್ಯವಸ್ಥೆ, ಬೋಧಕ ಸಿಬ್ಬಂದಿಯ ಬೌದ್ಧಿಕ ದಿವಾಳಿತನ-ಹೀಗೆ ಜಡ್ಡುಗಟ್ಟಿದ ವ್ಯವಸ್ಥೆಗೆ ಔಷಧ ಹುಡುಕಬೇಕು. ಕೆಲವೊಮ್ಮೆ ಔಷಧ ಹುಡುಕಲು ಹೋಗಿ ಅಲ್ಲಿಯೇ ಜತೆಗೂಡಿಬಿಡುವ ಸಾಧ್ಯತೆಯೂ ಇರುತ್ತದೆ. ವ್ಯವಸ್ಥೆಯೊಂದಿಗೆ ರಾಜಿ ಆಗುವ ಪ್ರಯತ್ನ ಸರಿಯಲ್ಲ. ಆದರೆ ವಿವಿ ಗಳನ್ನು ಒಂದು ಏಕಸೂತ್ರಕ್ಕೆ ತರುವ ಅಗತ್ಯವಂತೂ ಇದ್ದೇ ಇದೆ.
ಇವತ್ತು ವಿಶ್ವವಿದ್ಯಾಲಯಗಳು ಕೇವಲ ಪದವಿ ನೀಡುವ ಕಾರ್ಖಾನೆಗಳೇ ಹೊರತು ಜ್ಞಾನಕೇಂದ್ರವಾಗಿ ಉಳಿದಿಲ್ಲ. ಪ್ರಾಧ್ಯಾಪಕರ‍್ಯಾರೂ ತಮ್ಮ ಪ್ರಗತಿ (ಶೈಕ್ಷಣಿಕವಾಗಿ ಅಲ್ಲ, ಲೌಕಿಕವಾಗಿ) ಬಗ್ಗೆ ಗಮನಹರಿಸಿದ್ದಾರೆಯೇ ಹೊರತು ವಿದ್ಯಾರ್ಥಿಗಳ ಬಗ್ಗೆಯಂತೂ ಅಲ್ಲ. ಬಹಳಷ್ಟು ವಿವಿ ಗಳಲ್ಲಿ ವಿದ್ಯಾರ್ಥಿಗಳು ಬೋಧಕರನ್ನು ಪಾಠಕ್ಕಾಗಿ ಹುಡುಕಿಕೊಂಡು ಹೋಗುವ ಸ್ಥಿತಿಯಿದೆ. ವಾರಕ್ಕೆ ೧೬ ತರಗತಿಗಳು ತೆಗೆದುಕೊಳ್ಳಬೇಕಾದ ಉಪನ್ಯಾಸಕರು ಕೆಲವೆಡೆ ಮೂರರಿಂದ ನಾಲ್ಕು ತರಗತಿಗಳಿಗೆ ಸೋತು ಹೋಗುತ್ತಿದ್ದಾರೆ. ಇನ್ನು ಪ್ರಾಧ್ಯಾಕರ ಕಥೆ ಕೇಳಲೇಬೇಡಿ. ಸಂಬಂಧಪಟ್ಟ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಇಂಥವರ ವಿರುದ್ಧ ಕ್ರಮ ಕೈಗೊಳ್ಳಲು ಒಂದು ಥರದ ಮುಜುಗರ. ಕಾರಣ, ಅವರೂ ಅಂಥವರ ಮಧ್ಯೆಯೇ ಬೆಳೆದು ಬಂದಿರುತ್ತಾರೆ. ಯಾವುದೋ ಅದೃಷ್ಟದ ಬಾಗಿಲು ತೆರೆದು ಕುಲಪತಿಗಳಾಗಿರುತ್ತಾರೆ. ಹಾಗಾಗಿ ಅವರೂ ಏನೂ ಮಾಡಲಾಗದ ಸ್ಥಿತಿಯಲ್ಲಿರುತ್ತಾರೆ.
ಒಟ್ಟೂ ಇಡೀ ವಿಶ್ವವಿದ್ಯಾಲಯದ ವ್ಯವಸ್ಥೆಗೇ ಸಂವಹನ ಕೊರತೆಯ ಭೂತ ಬಡಿದಿದೆ. ಅದನ್ನೀಗಲೇ ಓಡಿಸದಿದ್ದರೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಈ ವ್ಯವಸ್ಥೆಯನ್ನೇ ಅಪನಂಬಿಕೆಯಿಂದ ನೋಡಬಲ್ಲರು. ಆದ ಕಾರಣ ರಾಜಕಾರಣ ಮಾಡದೇ ಎಚ್ಚೆತ್ತುಕೊಳ್ಳಬೇಕು.
ನಮ್ಮ ಪ್ರಾಧ್ಯಾಪಕರು, ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಸಿಗಬೇಕೆಂದರೆ ದೊಡ್ಡ ಆಂದೋಲನ ಮಾಡಬೇಕಿಲ್ಲ. ಲಭ್ಯವಿರುವ ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಂಡರೆ ಸಾಕು. ನನ್ನ ಅನಿಸಿಕೆಯಲ್ಲಿ ಮಾಹಿತಿ ತಂತ್ರಜ್ಞಾನದ ಸದ್ಬಳಕೆ ಸಂವಹನ ಕೊರತೆಯ ಬಹುಪಾಲನ್ನು ನಿವಾರಿಸಬಲ್ಲದು. ಅದರಲ್ಲೂ ದೂರಶಿಕ್ಷಣ ಜನಪ್ರಿಯವಾಗುತ್ತಿರುವ ಸಂದರ್ಭದಲ್ಲಿ ಎಲ್ಲ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳು ತಮ್ಮ ವಿದ್ಯಾರ್ಥಿಗಳೊಂದಿಗೆ ನಿರಂತರ ಸಂಪರ್ಕ ಸಾಧಿಸಲು ಇದು ಹೆಚ್ಚು ಉಪಯುಕ್ತವಾಗಬಲ್ಲದು.
ಉದಾಹರಣೆ ಹೀಗೆ ಮಾಡಿ ನೋಡಿ. ಇಂದು ಬ್ಲಾಗ್ ಪ್ರಪಂಚ ಬಹು ವಿಸ್ತಾರವಾಗಿ ಬೆಳೆದಿದೆ. ಕನ್ನಡದಲ್ಲೂ ದೊಡ್ಡ ಮಟ್ಟದಲ್ಲಿ ಫಸಲು ನೀಡುವ ಕಾಲ ಕೂಡಿ ಬರುತ್ತಿದೆ. ಇದಕ್ಕೆ ಕಾಸಿಲ್ಲ, ಕಷ್ಟವಿಲ್ಲ. ನಮ್ಮ ಮುಂದೆ ಹರಿದು ಹೋಗುವ ತಂತ್ರಜ್ಞಾನವನ್ನು ನಮ್ಮ ಬೊಗಸೆಯಲ್ಲಿ ತುಂಬಿಸಿಕೊಂಡು ಸದ್ಬಳಕೆ ಮಾಡಿಕೊಳ್ಳುವುದಷ್ಟೆ ಇದು. ಬ್ಲಾಗ್ ಮೂಲಕ ಸಾಧ್ಯವಾಗಬಹುದಾದದ್ದು ಬಹಳಷ್ಟಿದೆ. ಒಂದು ಬ್ಲಾಗ್ ಸಾವಿರಾರು ಮಂದಿಗೆ ಏಕಕಾಲದಲ್ಲಿ ಉಪನ್ಯಾಸಕನಾಗಿ, ಪ್ರಾಧ್ಯಾಪಕನಾಗಿ ಕೆಲಸ ಮಾಡಬಲ್ಲದು. ಆನ್‌ಲೈನ್ ಕಲಿಕೆ ಜನಪ್ರಿಯವಾಗುತ್ತಿರುವ ಹೊತ್ತಿನಲ್ಲಿ ಬ್ಲಾಗ್ ಪ್ರಪಂಚವನ್ನು ಉನ್ನತ ಶಿಕ್ಷಣಕ್ಕೆ ರಚನಾತ್ಮಕವಾಗಿ ಬಳಸಿಕೊಳ್ಳಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಬೇಕು.
ಬ್ಲಾಗ್‌ನಿಂದ ಏನೆಲ್ಲಾ ಆಗಬಹುದೆಂಬ ಕುತೂಹಲ ಸಹಜ. ಒಂದು ವಿವಿ ಯ ಯಾವುದೇ ವಿಭಾಗವನ್ನು ತೆಗೆದುಕೊಳ್ಳಿ. ಅಲ್ಲಿರುವ ಎರಡೂ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳು ಅಂದಾಜು ೬೦ . ಪ್ರಸ್ತುತ ಇರುವ ಪದ್ಧತಿಯಲ್ಲಿ ಪ್ರಾಧ್ಯಾಪಕರು ಕ್ಯಾಂಪಸ್ಸಿನಲ್ಲಿ ಅಥವಾ ಅವರ ಕೋಣೆಯಲ್ಲಿ ಹಾಜರಿದ್ದರೆ ಏನಾದರೂ ಚರ್ಚಿಸಬಹುದು. ಅಂಥ ಅವಕಾಶಗಳೇ ಕಡಿಮೆಯಾಗಿವೆ. ಕಾರಣ, ನಮ್ಮ ಬಹುತೇಕ ಪ್ರಾಧ್ಯಾಪಕರು ತರಗತಿಗೆ ಸರಿಯಾಗಿ ಬಂದು ಮನೆಗೆ ಹೋಗುವವರೇ ಹೆಚ್ಚು. ಅಂಥ ಸಂದರ್ಭದಲ್ಲಿ ವಿದ್ಯಾರ್ಥಿ ತನ್ನ ಪ್ರತಿ ಅನುಮಾನಗಳನ್ನೂ ಬಗೆಹರಿಸಿಕೊಳ್ಳಲು ದೂರವಾಣಿಯನ್ನು ಬಳಸಬೇಕು. ಈ ವಿಧಾನವನ್ನೂ ಟೀಕಿಸುವ ಕೆಲ ಪ್ರಾಧ್ಯಾಪಕರು, ‘ಏನಿದ್ದರೂ ನಿಮ್ಮ ಅನುಮಾನಗಳನ್ನು ತರಗತಿಗಳಲ್ಲಿಯೇ ಬಗೆಹರಿಸಿಕೊಳ್ಳಿ’ ಎನ್ನುತ್ತಾರೆ. ಅದು ಕಷ್ಟ ಸಾಧ್ಯವಾದದ್ದು. ಇದಕ್ಕೆ ಬ್ಲಾಗ್ ನ್ನು ಬಳಸಬಹುದಾದ ಬಗೆ ಹೀಗಿದೆ.
ಪ್ರತಿ ವಿಭಾಗದ್ದೂ ಒಂದು ಬ್ಲಾಗ್ ನ್ನು ರೂಪಿಸಬೇಕು. ಇದು ಅತ್ಯಂತ ಸುಲಭವಾದ ವಿಧಾನ. ಇಂಟರ್‌ನೆಟ್‌ನಲ್ಲಿ ಬ್ಲಾಗ್ ರೂಪಿಸಲು ಬೇಕಾದಷ್ಟು ತಾಣಗಳಿವೆ (ಸೈಟ್). ಐದು ನಿಮಿಷದಲ್ಲಿ ಒಂದು ಬ್ಲಾಗ್ ಸಿದ್ಧ. ಅದರಲ್ಲಿ ಆ ವಿಷಯಕ್ಕೆ ಸಂಬಂಧಿಸಿದ (ಉದಾಹರಣೆಗೆ ಪತ್ರಿಕೋದ್ಯಮ ವಿಭಾಗದದ್ದಾದರೆ ಆ ವಿಷಯದ್ದು) ಲೇಖನಗಳನ್ನು ಬರೆಯಬೇಕು. ವಿಭಾಗದ ಮುಖ್ಯಸ್ಥ ಸೇರಿದಂತೆ ಎಲ್ಲರಿಗೂ ಅದು ಲಭ್ಯ (ಆಕ್ಸೆಸ್) ಇರಬೇಕು. ಪಠ್ಯದ್ದಿರಲಿ, ಪಠ್ಯೇತರವಿರಲಿ, ಪರವಾಗಿಲ್ಲ. ಒಟ್ಟೂ ಆ ವಿಷಯಕ್ಕೆ ಸಂಬಂಧಿಸಿದ್ದು. ಇದನ್ನು ಮತ್ತೆಲ್ಲೋ ಇರುವ ವಿದ್ಯಾರ್ಥಿ ಇಂಟರ್‌ನೆಟ್‌ನಲ್ಲಿ ಆ ಪುಟವನ್ನು ನೋಡು ವ ಮೂಲಕ ತನ್ನ ಅನುಮಾನಗಳನ್ನು ಬಗೆಹರಿಸಿಕೊಳ್ಳುತ್ತಾನೆ. ಒಂದುವೇಳೆ, ಹೊಸ ಅನುಮಾನಗಳಿದ್ದರೆ ಅದರಲ್ಲಿ ‘ಕಾಮೆಂಟ್’ ರೂಪದಲ್ಲಿ ಕೇಳುತ್ತಾನೆ. ಅದಕ್ಕೆ ನಂತರ ಪ್ರಾಧ್ಯಾಪಕ ಉತ್ತರಿಸಬಹುದು. ಇದರಿಂದ ವಿದ್ಯಾರ್ಥಿಗಳು ಪ್ರಾಧ್ಯಾಪಕರನ್ನು ಕಾಯಬೇಕಿಲ್ಲ.
ಅಷ್ಟೇ ಅಲ್ಲ. ಈ ವಿಷಯವನ್ನು ಜಗತ್ತಿನ ಯಾವುದೇ ಭಾಗದಲ್ಲಿ ಇರುವವರಾದರೂ ನೋಡಬಹುದು. ಜತೆಗೆ ಬೇರೆ ಭಾಗದಲ್ಲಿರುವ ತಜ್ಞರೂ ವಿದ್ಯಾರ್ಥಿಯ ಅನುಮಾನಗಳನ್ನು ‘ಕಾಮೆಂಟ್’ ಮೂಲಕವೇ ಬಗೆಹರಿಸಬಹುದು. ಇವತ್ತು, ಉಪಗ್ರಹದ ಮೂಲಕ ನೀಡುತ್ತಿರುವ ಶಿಕ್ಷಣ ಇದೇ ಮಾದರಿಯದ್ದು. ಇದು ವಿದ್ಯಾರ್ಥಿ ಮುಖಿಯಾದ ಶಿಕ್ಷಣ. ಇದಕ್ಕೆ ವಿಶೇಷ ಸೌಲಭ್ಯಗಳೇನೂ ಬೇಕಾಗಿಲ್ಲ. ಇರುವುದನ್ನೇ ಬಳಸಿಕೊಳ್ಳಬೇಕು.
ಎಲ್ಲ ವಿಭಾಗಗಳಲ್ಲೂ ಕಂಪ್ಯೂಟರ್ ಮತ್ತು ಇಂಟರ್‌ನೆಟ್ ಸಂಪರ್ಕ ಇದ್ದೇ ಇದೆ. ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿ ಲಭ್ಯವಿರುವ ಇಂಟರ್‌ನೆಟ್ ಬಳಸಿಕೊಂಡು ಈ ವಿಧಾನದಿಂದ ಪ್ರಯೋಜನ ಪಡೆಯಬಹುದು. ಒಂದುವೇಳೆ ಪ್ರಾಧ್ಯಾಪಕರು, ಮನೆಯಿಂದಲೇ ತಮ್ಮ ಕಂಪ್ಯೂಟರ್ ಮೂಲಕ ಸಮಸ್ಯೆಗಳನ್ನು ಬಗೆಹರಿಸಬಹುದು. ಅದರಲ್ಲೂ ಮಾನವಿಕ ವಿಷಯಗಳಲ್ಲಿ ಈ ವಿಧಾನ ಅತ್ಯಂತ ಪ್ರಯೋಜನಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ.
ಪ್ರಾಧ್ಯಾಪಕರು ತಮ್ಮ ದಿನಚರಿಯಲ್ಲಿ ಕನಿಷ್ಠ ಒಂದು ಗಂಟೆ ಇದಕ್ಕೆ ಮೀಸಲಿಡಬೇಕು. ತಮ್ಮ ವಿಷಯಕ್ಕೆ ಸಂಬಂಧಿಸಿದ ಹೊಸ ಹೊಸ ಸಂಗತಿಗಳತ್ತ ಗಮನಹರಿಸುತ್ತಿರಬೇಕು. ಅದಕ್ಕಿಂತಲೂ ಹೆಚ್ಚಾಗಿ ಪ್ರಾಧ್ಯಾಪಕರು, ಉಪನ್ಯಾಸಕರು ಮನಸ್ಸು ಮಾಡಬೇಕು. ಯಾವುದಾದರೂ ಕುಲಪತಿಗಳೇ ಇಂಥದೊಂದು ಕಾರ್ಯವನ್ನು ಆರಂಭಿಸಬೇಕು. ತಮ್ಮದೊಂದು ಬ್ಲಾಗ್ ಮಾಡಿ, ಅದರಲ್ಲಿ ದೂರು ದುಮ್ಮಾನ, ಸಮಸ್ಯೆಗಳನ್ನು ತಿಳಿದುಕೊಂಡು, ನಿವಾರಿಸಬಹುದು. ಅದು ಉಳಿದವರಿಗೆ ಹಾಕಿಕೊಡುವ ಮಾರ್ಗವೂ ಹೌದು.
ಬ್ಲಾಗ್‌ನ್ನು ದುರುಪಯೋಗ ಪಡಿಸಿಕೊಳ್ಳುವವರಿದ್ದಾರೆ ಎಂಬ ಟೀಕೆ ಇದ್ದೇ ಇದೆ. ನಮ್ಮ ವ್ಯವಸ್ಥೆಯ ಯಾವ ವಿಧಾನದಲ್ಲಿ ಇಂಥದೊಂದು ದುರ್ಬಳಕೆ ಇಲ್ಲ. ಎಲ್ಲದರಲ್ಲೂ ಇದ್ದೇ ಇದೆ. ಆದರೆ ಹಾಗೆ ದುರ್ಬಳಕೆ ಆಗುವ ಪ್ರಮಾಣ ಶೇ. ೨೦ ರಷ್ಟು. ಅದೇ ಕಾರಣಕ್ಕೆ ಶೇ. ೮೦ ರಷ್ಟು ಭಾಗಕ್ಕೆ ಆಗುವ ಪ್ರಯೋಜನವನ್ನು ಕಡೆಗಣಿಸುವುದು ಸರಿಯಲ್ಲ. ಹೀಗೇಯೇ ಲಭ್ಯವಿರುವ ಇಂಟರ್‌ನೆಟ್ ಚಾಟಿಂಗ್ ನ್ನೂ ಆನ್‌ಲೈನ್ ಶಿಕ್ಷಣ ಮಾದರಿಯಲ್ಲಿ ಬಳಸಬಹುದು.
ನನಗನ್ನಿಸುವ ಸಂಗತಿಯೆಂದರೆ ಮಾನ್ಯ ಉನ್ನತ ಶಿಕ್ಷಣ ಸಚಿವರೇ, ಇದರತ್ತ ಗಮನಹರಿಸಿ ಕ್ರಿಯಾಶೀಲವಾಗಬೇಕು. ಎಲ್ಲರಿಗೂ ಇಂಥದೊಂದು ಸಾಧ್ಯತೆಯನ್ನು ಮನವರಿಕೆ ಮಾಡಿಕೊಡಬೇಕು. ತಮ್ಮದೇ ಒಂದು ಬ್ಲಾಗ್ ರೂಪಿಸಿ, ಉನ್ನತ ಶಿಕ್ಷಣದ ಸಮಸ್ಯೆಗಳನ್ನು ತಿಳಿದುಕೊಂಡು ಪರಿಹಾರ ಕಂಡುಹಿಡಿಯುವತ್ತ ಕಾರ್ಯೋನ್ಮುಖರಾದರೆ ಉಳಿದವರಿಗೆ ಹಾಕಿಕೊಡುವ ಮಾರ್ಗವೆನ್ನಬಹುದು. ಅದೂ ಸಹ ಉನ್ನತ ಶಿಕ್ಷಣವನ್ನು ಸಾರ್ವಕಾಲಿಕ, ಸಾರ್ವತ್ರಿಕಗೊಳಿಸುವತ್ತ ಇಡುವ ದಿಟ್ಟ ಹೆಜ್ಜೆಯೇ.