ಮತ ಹಾಕದಿದ್ದರೂ ಅಯೋಗ್ಯನನ್ನು ಸಮರ್ಥಿಸಿದಂತೆ
ಮತದಾನ !
ಕ್ಷೇತ್ರದಲ್ಲಿ ಎಲ್ಲ ಅಭ್ಯರ್ಥಿಗಳೂ ಒಳ್ಳೆಯವರಿದ್ದಾರಾ ? ಒಂದುವೇಳೆ ಒಬ್ಬರಾದರೂ ನಮ್ಮ ಮತವನ್ನು ಪಡೆಯುವಷ್ಟು ಯೋಗ್ಯರಿದ್ದಾರಾ? ಅವರಿಗೆ ಆ ಅರ್ಹತೆ ಇದೆಯಾ? ಇಂಥವರನ್ನು ಚುನಾಯಿಸಿ ಕಳುಹಿಸಿ ಅವರಿಂದ ನಮ್ಮ ದೇಶವನ್ನು ಆಳಿಸಿಕೊಳ್ಳಬೇಕೇ? ಇಂಥ ಅಪ್ರಾಮಾಣಿಕರಿಗೆ ಮತ ಹಾಕುವ ಮೂಲಕ ಅವರ ಎಲ್ಲ ಅಕ್ರಮಗಳನ್ನು ಒಪ್ಪಿಕೊಂಡಂತೆ ಅಗುವುದಿಲ್ಲವೇ? ಅವನು ಮತ್ತಷ್ಟು ಅಕ್ರಮಗಳನ್ನು ಎಸಗಲು ನಾವೇ ಅವನಿಗೆ ಅಧಿಕಾರ ಕೊಟ್ಟಂತೆ ಆಗುವುದಿಲ್ಲವೇ ? ...
ಹೀಗೆ ಸಾವಿರಾರು ಪ್ರಶ್ನೆಗಳು ಉದ್ಭವಿಸುವುದು ಸಹಜ. ಒಂದು ಮತವನ್ನು ಹಾಕುವ ಮುನ್ನ ಎಷ್ಟೆಲ್ಲಾ ಯೋಚಿಸುತ್ತೇವೆ. ಅದರ ಬೆನ್ನಿಗೇ ‘ಇಲ್ಲ...ನನ್ನ ಮತ ಅಯೋಗ್ಯರ ಪಾಲಾಗಬಾರದು’ ಎಂದು ನಿರ್ಧರಿಸಿ ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳುತ್ತೇವೆ.
ಯಾರೋ ಒಬ್ಬ ಅಭ್ಯರ್ಥಿ ಗೆಲ್ಲುತ್ತಾನೆ. ನಾವೆಲ್ಲಾ ಎಣಿಸಿದಂತೆಯೇ ಮನೆ-ಆಸ್ತಿ ಮಾಡಿಕೊಳ್ಳುತ್ತಾನೆ. ತನ್ನ ಸಂಸಾರವನ್ನು ಗಟ್ಟಿ ಮಾಡಿಕೊಳ್ಳುತ್ತಾನೆ. ಎಲ್ಲವೂ ನಮ್ಮ ಕಣ್ಣೆದುರಿಗೆ ನಡೆಯುತ್ತದೆ. ನಮಗೆ ...ಸತ್ತು ಹೋಗಲಿ, ಅವನನ್ನು ಏನು ಕೇಳೋದು ? ರಾಜಕೀಯಕ್ಕೆ ಬರೋದೇ ಹಣ ಮಾಡಿಕೊಳ್ಳೋಕೆ,.. ಮೊದಲು ಹಣ ಮಾಡಿಕೊಳ್ಳೋಕೆ ಬರ್‍ತಾರೆ, ನಂತರ ಮಾಡಿದ ಆಸ್ತಿ ಉಳಿಸಿಕೊಳ್ಳೋಕೆ ರಾಜಕೀಯದಲ್ಲಿ ಇರ್ತಾರೆ.
ಹೀಗೆಲ್ಲಾ ಕಾರಣ ಹೇಳಿ ನಮ್ಮನ್ನು ನಾವು ಸಮಾಧಾನ ಪಡಿಸಿಕೊಳ್ಳುತ್ತೇವೆ. ಒಟ್ಟಿನಲ್ಲಿ, ಯಾರು ಏನೇ ಹೇಳಲಿ. ನಾನು ಅವನನ್ನು ನನ್ನ ಮತ ಹಾಕಿ ಸಮರ್ಥಿಸಿಲ್ಲ. ಹಾಗಾಗಿ ಅವನ ತಪ್ಪಿನಲ್ಲಿ ನನ್ನ ಪಾಲುದಾರಿಕೆ ಇಲ್ಲ ಎಂಬುದು ನಾವು ಕಂಡುಕೊಳ್ಳುವ ಸಮಾಧಾನದ ಉತ್ತರ. ಬಹಳ ತಮಾಷೆಯೆಂದರೆ ಅದೇ. ಅಂಥದೊಂದು ಸಮಾಧಾನ ಕಂಡುಕೊಳ್ಳುವುದು.
ರಾಜ್ಯದಲ್ಲಿ ಈ ಬಾರಿಯ ಸಂಸತ್ ಚುನಾವಣೆಯಲ್ಲಿ ಮೊದಲ ಹಂತದ ಮತದಾನದಲ್ಲಿ ಆದದ್ದು ಶೇ. 53 ರಷ್ಟು ಮತದಾನ. ಇದನ್ನು ವಿಶ್ಲೇಷಿಸುವುದಾದರೆ ಕಳೆದ ಸಾಲಿಗಿಂತ ಬಹುತೇಕ ಕ್ಷೇತ್ರಗಳಲ್ಲಿ ಕಡಿಮೆ ಮತದಾನವಾಗಿದೆ. ಕೆಲ ಕ್ಷೇತ್ರಗಳಲ್ಲಿ ಒಂದೆರಡು ಅಂಕಿ ಹೆಚ್ಚಾಗಿರಹುದೇ ಹೊರತು ಉತ್ಸಾಹ ಮೂಡಿಸುವಷ್ಟಲ್ಲ.
ಈ ಇಳಿಕೆಯತ್ತ ಸಾಗುತ್ತಿರುವ ಟ್ರೆಂಡ್ ಹೊಸದೇನಲ್ಲ. ಕಳೆದ ಮೂರು ಚುನಾವಣೆಗಳಿಗಿಂದ ಮತದಾನದ ಪ್ರಮಾಣ ಕಡಿಮೆಯಾಗುತ್ತಿದೆ. ವಿಪರ್ಯಾಸವೆಂದರೆ, ಕೇಂದ್ರ ಚುನಾವಣಾ ಆಯೋಗ ಮುಕ್ತ ಮತದಾನಕ್ಕೆ ಪೂರಕ ವಾತಾವರಣವನ್ನು ಕಲ್ಪಿಸಲು ಪ್ರಯತ್ನಿಸುತ್ತಿದೆ. ಅದು ಬಹುಪಾಲು ಯಶಸ್ವಿಯಾಗಿದೆ. ಆದರೆ ನಾವು ಮಾತ್ರ ಇನ್ನೂ ಹಳೆಯದ್ದನ್ನೇ ಶಪಿಸಿಕೊಂಡು...ಮತದಾನದ ದಿನದಂದು ಸಂಸಾರ ಸಮೇತ ಬೆಳಗ್ಗೆ ಒಂದು ಹೋಟೆಲಿನಲ್ಲಿ ತಿಂಡಿ ತಿಂದು, ಎಲ್ಲಾದರೂ ಸುಮ್ಮನೆ ತಿರುಗಿ..ಹೊರಗೇ ಊಟ ಮುಗಿಸಿ..ರಾತ್ರಿ ಮನೆಗೆ ಬಂದು ಮರುದಿನಕ್ಕೆ ಟಿಫಿನ್ ಕ್ಯಾರಿಯರ್ ಒರೆಸಿ ಇಡುತ್ತೇವೆ. ಇನ್ನು ಕೆಲವರು ಮನೆಯಲ್ಲೇ ಇದ್ದು...ನಿದ್ದೆ ತೆಗೆದು ತಂಪಾದ ಸಂಜೆಯಲ್ಲಿ ಟಿ.ವಿ. ನ್ಯೂಸ್ ನೋಡುತ್ತಾ...ಕೋಡುಬಳೆ ತಿನ್ನುತ್ತಾ...‘ಏನ್ರೀ...ಈ ಸಾರೀನೂ ಕಡಿಮೆನಾ ವೋಟಿಂಗಾ?’ ಎಂದು ಪ್ರಶ್ನೆ ಕೇಳಿಕೊಂಡು ಸುಮ್ಮನಾಗುತ್ತಿದ್ದೇವೆ. ಗಮನವಿಡಬೇಕಾದ ಸಂಗತಿ ನಮಗಿನ್ನೂ ತಿಳಿದಿಲ್ಲ.
ಕಳೆದ ಮೂರ್ನಾಲ್ಕು ಚುನಾವಣೆಗಳಿಂದ ನಮ್ಮಲ್ಲಿ ಮುಕ್ತ ಮತ್ತು ಪಾರದರ್ಶಕ ಚುನಾವಣೆಯತ್ತ ಚುನಾವಣಾ ಆಯೋಗ ಹಲವು ಹೆಜ್ಜೆಗಳನ್ನು ಇಟ್ಟಿದೆ. ಅದೆಲ್ಲವೂ ಜನರು ಬಂದು ಮತ ಹಾಕಲಿ ಎಂಬುದಕ್ಕಾಗಿ. ಆದರೆ, ನಾವೆಲ್ಲಾ ಇನ್ನೂ ಹಳೇ ಕಥೆ ಹೇಳುತ್ತಾ ಕುಳಿತಿದ್ದೇವೆ. ಆ ಮೂಲಕ ಚುನಾವಣಾ ಆಯೋಗ ಕೈಗೊಂಡ ಒಳ್ಳೆಯ ಕ್ರಮಗಳನ್ನು ಬೆಂಬಲಿಸುವುದನ್ನು ಮರೆತಿದ್ದೇವೆ. ಇದರಿಂದಾಗುತ್ತಿರುವ ಪರಿಣಾಮವೇನು ಗೊತ್ತೇ ?
ರಾಜಕೀಯ ಪಕ್ಷಗಳು ‘ಮತದಾನ ಪ್ರಮಾಣ ಕುಸಿತಕ್ಕೆ ಆಯೋಗದ ಬಿಗಿ ಕ್ರಮಗಳು ಕಾರಣ’ ಎಂದು ಹೇಳತೊಡಗಿವೆ. ಇಂಥದೊಂದು ಆರೋಪಕ್ಕೆ ನಾವೇ, ಸಮಾಜ ಒಳ್ಳೆಯದಾಗಬೇಕೆಂದು ಹೇಳುವವರೇ ಕಾರಣವಾಗುತ್ತಿರುವುದು ಎಷ್ಟು ವಿಪರ್ಯಾಸ.
ಸ್ವಲ್ಪ ಹೊತ್ತು ಹಿಂದಕ್ಕೆ ಹೋಗಿ ಬರೋಣ. 1990 ರಿಂದ 19996 ರವರೆಗೆ ಟಿ.ಎನ್. ಶೇಷನ್ ಕೇಂದ್ರ ಮುಖ್ಯ ಚುನಾವಣಾಧಿಕಾರಿಯಾದರು. ಅಲ್ಲಿಂದ ಚುನಾವಣೆ ವ್ಯವಸ್ಥೆಯ ಸುಧಾರಣೆಗೆ ನಾಂದಿ ಹಾಡಿದ್ದು ಅದೇ ಮನುಷ್ಯ. ತಮ್ಮ ನಿವೃತ್ತಿಯ ನಂತರ ಅಧಿಕಾರಕ್ಕಾಗಿ ಮತ್ತೊಂದು ಪಕ್ಷವನ್ನೇ ಸೇರಿದರು...ಇತ್ಯಾದಿ ಎಲ್ಲವೂ ಇಲ್ಲಿ ಚರ್ಚೆಗೆ ಬೇಕಿಲ್ಲ. ಅದರ ವೈರುಧ್ಯವನ್ನು ಬೇರೆ ಯಾವಾಗಲಾದರೂ ಆಲೋಚಿಸೋಣ.
ನಮ್ಮಲ್ಲಿ ಇರುವ ಜನಪ್ರತಿನಿಧಿ ಕಾಯ್ದೆಯ ಲಭ್ಯ ಅವಕಾಶಗಳನ್ನೇ ಕೂಗಿ ಹೇಳಿದ್ದು..ಹೀಗಿದೆ ಎಂದು ಸಾರ್ವಜನಿಕವಾಗಿ ತೋರಿಸಿದ್ದು ಶೇಷನ್. ಅವರು ಕೈಗೊಂಡ ಹಲವು ಕ್ರಮಗಳು ರಾಜಕೀಯ ನಾಯಕರನ್ನು ಕಂಗೆಡಿಸಿತು. ಉದಾಹರಣೆಗೆ, ೧೯೭೧ ರಲ್ಲಿ ಜನಪ್ರತಿನಿಧಿ ಕಾಯ್ದೆಯಡಿಯೇ ಅಭ್ಯರ್ಥಿಳಿಗೆ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿತು. ಆದರೆ ಅದರ ಕಟ್ಟುನಿಟ್ಟಿನ ಪಾಲನೆಗೆ ಚಾಲನೆ ನೀಡಿದ್ದು ಟಿ.ಎನ್. ಶೇಷನ್.
ಅದುವರೆಗೆ ಪ್ರಶ್ನಾತೀತರಾಗಿದ್ದ ನಮ್ಮ ನಾಯಕರನ್ನು ಪ್ರಶ್ನಿಸಬೇಕೆಂಬ ಬಯಕೆಯಿಂದಲೇ ನಮ್ಮ ಹಿರಿಯ ಪೀಳಿಗೆ ಮುದುಕರಾದರು. ಆದರೆ, ಆ ವೃದ್ಧರ ಮಕ್ಕಳಿಗೆ ಪ್ರಶ್ನಿಸುವ ಅವಕಾಶ ಸಿಕ್ಕಿತು. ಅದನ್ನು ದಕ್ಕಿಸಿಕೊಟ್ಟದ್ದು ಶೇಷನ್. ಪ್ರಶ್ನಾತೀತರಾಗಿದ್ದವರನ್ನು ಒಂದು ಗೂಟಕ್ಕೆ ಕಟ್ಟಿ ಹಾಕಿದವರು ಶೇಷನ್. ಬ್ಯಾನರ್, ಬಂಟಿಂಗ್ಸ್‌ಗಳ ಮಿತಬಳಕೆಯಿಂದ ಹಿಡಿದು, ಎಲ್ಲ ರೀತಿಯ ಅತಿರೇಕಗಳಿಗೆ ಕಡಿವಾಣ ಹಾಕಲಾಯಿತು. ಅವರ ವಿರುದ್ಧ ಅತಿಯಾಗಿ ಮಾತನಾಡಿದರು, ಅತಿರೇಕದಿಂದ ವರ್ತಿಸಿದರು, ಎಲ್ಲ ರಾಜಕಾರಣಿಗಳನ್ನೂ ಸಂಶಯದಿಂದ ನೋಡುವಂತೆ ಮಾಡಿದರು...ಹಲವು ಆರೋಪಗಳು ಬಂದವು. ಆದರೆ ಕೆಟ್ಟದ್ದೇ ಕೇಳಿ, ನೋಡಿ ಕಿವುಡಾದ, ಕುರುಡಾದ ಕಿವಿಗೆ-ದೃಷ್ಟಿ ಒಳ್ಳೆಯದತ್ತ ಗಮನಹರಿಸಲು ಸ್ವಲ್ಪ ಅತಿರೇಕಗಳು ಅವಶ್ಯ ಎನಿಸುತ್ತದೆ. ಒಂದುವೇಳೆ ಶೇಷನ್, ಹಾಗೆಲ್ಲಾ ಬೊಬ್ಬೆ ಹಾಕದಿದ್ದರೆ ಯಾರಿಗೂ, ಏನೂ ಗೊತ್ತಾಗುತ್ತಿರಲಿಲ್ಲ. ಜನರೂ ಸಹ ಗಮನಿಸುತ್ತಿರಲಿಲ್ಲ. ಆದರೆ ಆಗ ಉಂಟಾದ ವಾಗ್ವಾದ, ರಾಜಕಾರಣಿಗಳಿಗೆ ಕಡಿವಾಣ ಹಾಕುವ ಎಲ್ಲ ಶೇಷನ್‌ರ ಪ್ರಯತ್ನಕ್ಕೆ ಮಾಧ್ಯಮಗಳೂ ಧ್ವನಿಯಾಗಿದ್ದರಿಂದ ಇಂದು ಚುನಾವಣಾ ವ್ಯವಸ್ಥೆಗೆ, ಅಭ್ಯರ್ಥಿಗಳಿಗೆ, ರಾಜಕೀಯ ಪಕ್ಷಗಳಿಗೆ ಶಿಸ್ತು ಬಂದಿದೆ.
ಹೀಗೆ 1972 ರಿಂದ ಆರಂಭವಾದ ಸುಧಾರಣಾ ಪರ್ವದ ಫಲ ದೊರೆತಿದ್ದು 1994 ರಲ್ಲಿ. ಮಂಡ್ಯದ ನಾಗಮಂಗಲದ ಒಂದು ಉದಾಹರಣೆ ಕೇಳಿ. ೧೯೯೪ ರ ಚುನಾವಣೆಯಲ್ಲಿ ಬ್ಯಾನರ್, ಬಂಟಿಂಗ್ಸ್‌ಗಳ ಅತಿರೇಕವಿತ್ತು. ಒಂದು ವೃತ್ತವಂತೂ ಮುಚ್ಚಿ ಹೋಗುವ ಹಾಗೆ ಈ ಬ್ಯಾನರ್‌ಗಳನ್ನು ಕಟ್ಟಲಾಗಿತ್ತು. ಪತ್ರಿಕೆಯಲ್ಲಿ ಪ್ರಕಟವಾದ ಚಿತ್ರದಿಂದ ಆಯೋಗ, ಅದರ ಬಳಕೆಗೆ ಕಡಿವಾಣ ಹಾಕಿತು. ಎಲ್ಲಿ ಬೇಕಾದರೂ ಗೋಡೆ ಬರಹಗಳನ್ನು ಬರೆಯದಂತೆ ನಿರ್ಬಂಧಿಸಿತು. ಇಷ್ಟಕ್ಕೇ ಮುಗಿಯಲಿಲ್ಲ. ಅಭ್ಯರ್ಥಿಗಳ ಖರ್ಚಿನ ಮೇಲೆ ನಿಗಾ ಇಟ್ಟಿತು ಆಯೋಗ. ಪಕ್ಷಗಳೆಲ್ಲಾ ಇದೇನು, ನಮ್ಮ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದ್ದಾರೆ ಎಂದು ಬೊಬ್ಬೆ ಹಾಕಿದವು. ಶೇಷನ್ ಕಿವಿಗೊಡಲಿಲ್ಲ. ಸುಧಾರಣೆಯ ಬುಲ್ಡೋಜರ್ ನಿಲ್ಲಲಿಲ್ಲ. ಕೋರ್ಟ್‌ಗಳೂ ಸಹಕರಿಸಿದವು, ಅದಕ್ಕಿಂತ ಹೆಚ್ಚಾಗಿ ಜನರು ಅವರ ಬೆಂಬಲಕ್ಕೆ ನಿಂತರು. ಮೂಗಿನ ಮೇಲೆ ಬೆರಳಿಟ್ಟು ‘ಸರಿಯಿದೆ, ಸರಿಯಿದೆ’ ಎಂದು ಸಿಕ್ಕಾ ಹಾಕಿದರು. ಹಾಗಾಗಿ ಕೆಡಲಾರಂಭಿಸಿದ್ದ ಪ್ರಜಾತಂತ್ರದಲ್ಲಿ ಶೇಷನ್ ದೈವಾಂಶ ಸಂಭೂತನಂತೆ, ಸುಧಾರಕನಂತೆ ಕಂಡು ಬಂದರು.
ಆಗ ಶೇಷನ್ ಹೇಳಿದ್ದು ಇಷ್ಟೇ - ‘ನಾನೇನೂ ಹೊಸದನ್ನು ಮಾಡಲಿಲ್ಲ. ಎಲ್ಲವೂ ಕಾಯ್ದೆಯಲ್ಲಿದೆ. ನಾನು ಜಾರಿ ತಂದಿದ್ದೇನೆ, ಅಷ್ಟೇ’ ಎಂದರು. ನಮಗೂ ಆ ಸಂದರ್ಭದಲ್ಲಿ ಬೇಕಾಗಿದ್ದು ಒಬ್ಬ ಅನುಷ್ಠಾನಕನೇ ಹೊರತು ನಿಯಾಮಕನಲ್ಲ.
ಅಂದಿನಿಂದ ಇಲ್ಲಿಯವರೆಗೂ ಸುಧಾರಣೆಯ ಪರಿಕ್ರಮ ನಿಂತಿಲ್ಲ. 1998 ರಲ್ಲಿ ವಿದ್ಯುನ್ಮಾನ ಮತ ಯಂತ್ರ ಬಳಕೆಯ ಪ್ರಯೋಗ ಕೇರಳದಲ್ಲಿ ನಡೆಸಲಾಯಿತು. ತದನಂತರ 1999 ರಲ್ಲಿ ಗೋವಾ ಸೇರಿದಂತೆ ಹಲವೆಡೆ ವಿದ್ಯುನ್ಮಾನ ಮತ ಯಂತ್ರ ಯಶಸ್ವಿಯಾಯಿತು. ೨೦೦೪ ರಲ್ಲಿ ದೇಶಾದ್ಯಂತ ವಿದ್ಯುನ್ಮಾನ ಮತ ಯಂತ್ರದ ಬಳಕೆ ಸಾಧ್ಯವಾಯಿತು. ಅದರ ಪರಿಣಾಮ ಗಣನೀಯ ಪ್ರಮಾಣದಲ್ಲಿ ನಕಲಿ ಮತದಾನ ತಡೆಯಲಾಯಿತು.
2002 ರಲ್ಲಿ ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ತಮ್ಮ ಆಸ್ತಿ ಕುರಿತ ಅಫಿಡವಿಟ್ ಸಲ್ಲಿಸಬೇಕೆಂದು ಆದೇಶ ಹೊರಡಿಸಿದರೂ ರಾಜಕಾರಣಿಗಳು ಕಿಮ್ಮತ್ತು ನೀಡಲಿಲ್ಲ. ಅಷ್ಟರಲ್ಲಿ 2003 ರಲ್ಲಿ ಮತ್ತೆ ಕೋರ್ಟ್, ‘ಅಫಿಡವಿಟ್ ಸಲ್ಲಿಸದಿದ್ದರೆ ನ್ಯಾಯಾಂಗ ಆದೇಶ ಉಲ್ಲಂಘನೆ’ ಎಂದು ಪರಿಗಣಿಸುವುದಾಗಿ ಹೇಳಿತು. ಜತೆಗೆ, ಇಂಥವರ ನಾಮಪತ್ರವನ್ನು ತಿರಸ್ಕೃತಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿತು. 2004 ರಲ್ಲಿ ಅಭ್ಯರ್ಥಿಗಳ ಅಪರಾಧೀಕರಣ ಚರಿತ್ರೆಯನ್ನು ಅಫಿಡವಿಟ್ ನಲ್ಲಿ ತಿಳಿಸುವಂತೆ ಹೇಳಿತು. ಅಲ್ಲಿಗೆ, ನಮ್ಮ ಮತ ಪಡೆಯುವ ಅಭ್ಯರ್ಥಿ ಎಷ್ಟರ ಮಟ್ಟಿಗೆ ಅರ್ಹ, ಯೋಗ್ಯ ಎಂಬುದು ನಿಜವಾಗಲೂ ತಿಳಿದದ್ದು ಆಗಲೇ. ಅಲ್ಲಿಯವರೆಗೂ ಅಪರಾಧ ಎಸಗಿ ಸುದ್ದಿಯಾದವರು ಮಾತ್ರ ನಮ್ಮ ಕಣ್ಣಿಗೆ ಅನರ್ಹರಾಗಿದ್ದರು, ನಯವಂಚಕರಲ್ಲ. ಇವತ್ತು ಸ್ಪರ್ಧಿಸಬೇಕಾದರೆ ಕಾಯ್ದೆಯನ್ನು ಅನಿವಾರ್‍ಯವಾಗಿ ಪಾಲಿಸಲೇಬೇಕಾದ ಸ್ಥಿತಿಯನ್ನು ಆಯೋಗ ನಿರ್ಮಿಸಿದೆ. ನಾವೆಲ್ಲಾ ನಿರ್ಮಿಸಿದ್ದೇವೆ.
ಇದಕ್ಕೆ ಎಲ್ಲರ ಕೊಡುಗೆ ಇದೆ. ಶೇಷನ್ ನಂತರ ಬಂದ ಚುನಾವಣಾ ಆಯುಕ್ತರೂ ನಿಲುವು ಸಡಿಲಿಸಲಿಲ್ಲ. ಜತೆಗೆ ಶಿಸ್ತು ಪಾಲನೆಗೆ ತಮ್ಮ ಅಧಿಕಾರಿ ಸಮೂಹವನ್ನೇ ಸೈನ್ಯವಾಗಿಸಿಕೊಂಡರು. ಒಂದಷ್ಟು ಹುರುಪು ತುಂಬಿ ಕಳುಹಿಸಿದರು. ಹಾಗಾಗಿ ಬಹುಪಾಲು ಅಧಿಕಾರಿಗಳ ರಟ್ಟೆಯಲ್ಲಿ ಶಕ್ತಿ ಬಂತು. ಇಲ್ಲದಿದ್ದರೆ ಸದಾ ಮತಗಟ್ಟೆ ವಶ, ನಕಲಿ ಮತದಾನಕ್ಕೆ ಹೆಸರಾಗಿದ್ದ ಬಿಹಾರದಲ್ಲಿ ೨೦೦೪ ರಲ್ಲಿ ಒಬ್ಬ ಚುನಾವಣಾ ವೀಕ್ಷಕ ಕೆ.ಜಿ. ರಾವ್ ಎಂಬಾತ ಮುಕ್ತ ಮತ್ತು ಪಾರದರ್ಶಕ ಚುನಾವಣೆ ನಡೆಸಲು ಸಾಧ್ಯವಿದ್ದೀತೇ ? ನಮ್ಮದೇ ಆದ ಮೈಸೂರಿನ ಚಾಮುಂಡೇಶ್ವರಿ ಮರು ಚುನಾವಣೆಯಲ್ಲಿ ಅಕ್ರಮಗಳ ಸಂತೆಯನ್ನು ಒಬ್ಬ ರೇಮಂಡ್ ಪೀಟರ್ ಹದ್ದುಬಸ್ತಿಗೆ ತರಲಿಲ್ಲವೇ ? ಮಾಜಿ ಪ್ರಧಾನಿಯಿಂದ ಹಿಡಿದು ಎಲ್ಲ ರಾಜಕೀಯ ನಾಯಕರನ್ನೂ ಬೆರಳಿನ ತುದಿಯಲ್ಲಿ ಆಡಿಸಲು ಸಾಧ್ಯವಾದದ್ದಕ್ಕೆ ನಿಯಮದೊಳಗಿನ ಶಕ್ತಿ ಹಾಗೂ ಜನಶಕ್ತಿಯ ಬೆಂಬಲವೇ ಕಾರಣ.
ಇವತ್ತು ಯಾವ ಹಂತದಲ್ಲಿದ್ದೇವೆ ಎಂದರೆ, ಎಲ್ಲವೂ ಸರಿಯಾದರೆ 2014 ರ ಚುನಾವಣೆಯಲ್ಲಿ ನಾವು ‘ನಕಾರಾತ್ಮಕ ಮತದಾನ’ ಮಾಡಬಹುದೇನೋ ? ಅದೂ ಹಕ್ಕಾಗಬಹುದು. ಚುನಾವಣೆಯಲ್ಲಿ ನಕಾರಾತ್ಮಕ ಮತದಾನವೂ ಒಬ್ಬ ಅಭ್ಯರ್ಥಿಯಾಗಿರುತ್ತದೆ. ಪಕ್ಷಗಳು ನಿಲ್ಲಿಸಿದ ಯಾವೊಬ್ಬ ಅಭ್ಯರ್ಥಿಯೂ ಯೋಗ್ಯನಾಗಿರದಿದ್ದರೆ ನಾವು ನಕಾರಾತ್ಮಕ ಮತದಾನ ಮಾಡಬಹುದು. ಅದಕ್ಕೇ ಹೆಚ್ಚು ಮತ ಪಡೆದ ಅಭ್ಯರ್ಥಿಗಿಂತ ಹೆಚ್ಚು ಮತ ಬಿದ್ದರೆ ಎಲ್ಲ ಅಭ್ಯರ್ಥಿಗಳೂ ಅನರ್ಹಗೊಳ್ಳುತ್ತಾರೆ. ಅವರು ಐದು ವರ್ಷ ಸ್ಪರ್ಧಿಸುವಂತಿಲ್ಲ. ಆಗ ಪಕ್ಷಗಳು ಒಳ್ಳೆಯ ಅಭ್ಯರ್ಥಿಯತ್ತ ಕಣ್ಣಿಡುತ್ತವೆ, ಹಣವಂತಗಿಂತಲೂ ಗುಣವಂತ ಬೇಕು ಎಂದು ಹುಡುಕಾಟ ನಡೆಸಬಹುದು. ಅದಿರಲಿ, ಇಂಥ ಸಂದರ್ಭದಲ್ಲಿ ನಮ್ಮ ಕರ್ತವ್ಯದ ಬಗ್ಗೆ ಆಲೋಚಿಸಿ.
ಬೆಂಗಳೂರು ದಕ್ಷಿಣ ಕ್ಷೇತ್ರ ವಿದ್ಯಾವಂತರ ಕ್ಷೇತ್ರ. ಅಲ್ಲಿ 1998-57.65, 1999-54.13, 2004-49.36, 2008-50 ರಷ್ಟು ಮತದಾನವಾಗಿದೆ. ಇದು ಒಂದರ ಕಥೆಯಲ್ಲ. ಎಲ್ಲ ಕ್ಷೇತ್ರಗಳಲ್ಲೂ ಇದೇ. ಬೀದರ್‌ನಲ್ಲೂ ಇದು ಕ್ರಮವಾಗಿ 51.33, 63.42, 59.42, ಶೇ. 53 ರಷ್ಟಾಗಿದೆ. ಅಲ್ಲಿಗೆ ಮತದಾನ ಪ್ರಮಾಣ ಕುಸಿಯುತ್ತಿದೆ.
ಒಂದೆಡೆ ಮುಕ್ತ ಮತ್ತು ಪಾರದರ್ಶಕ ಚುನಾವಣೆ ನಡೆಯುತ್ತಿಲ್ಲ ಎಂಬ ಕೂಗಿಗೆ ಜನರಿಂದಲೇ ಸಲಹೆ ಪಡೆದು, ಕಾಯ್ದೆಯನ್ನು ಮತ್ತಷ್ಟು ಕಟ್ಟುನಿಟ್ಟಾಗಿ ಹುರಿಗೊಳಿಸಿ ವಾತಾವರಣ ಕಲ್ಪಿಸುತ್ತಿದ್ದರೆ, ಅದನ್ನೇ ಬಯಸುತ್ತಿದ್ದ ನಾವೇ ವ್ಯವಸ್ಥೆಯಿಂದ ವಿಮುಖರಾಗುತ್ತಿದ್ದೇವೆ. ಇದು ಅರ್ಥವಾಗದ ಸಂಗತಿ. ನಕಲಿ ಮತದಾನ ತಡೆಯಲು ಗುರುತಿನ ಚೀಟಿ ನೀಡಲು ಮುಂದಾದರೆ, ಅದನ್ನು ಮಾಡಿಸಿಕೊಳ್ಳಲು ತೋರುವ ಆಸಕ್ತಿಯೂ ಕಡಿಮೆ. ಇದು ಯಾವ ರೀತಿಯ ಹೊಣೆಗಾರಿಕೆ ನಿಭಾವಣೆ.
‘ನೀವು ಗುರುತಿನ ಚೀಟಿ ಪಡೆಯಿರಿ, ಮತದಾನ ಹಾಕಿ’ ಎಂಬ ಜಾಗೃತಿ ಮೂಡಿಸುವ ಹೊಣೆಯೂ ಆಯೋಗ ಕೈಗೆತ್ತಿಕೊಂಡು ಮುಂಚೂಣಿಯಲ್ಲಿದೆ. ಆಯೋಗದ ಸುಧಾರಣಾ ಕ್ರಮಗಳನ್ನು ಬೆಂಬಲಿಸಬೇಕಿದ್ದ ನಾವು, ಮತ ಹಾಕದೇ ನಿರುತ್ಸಾಹಗೊಳಿಸುತ್ತಿದ್ದೇವೆ. ಇದರಿಂದ ಆಗುವ ಅನುಕೂಲ ಯಾರಿಗೆ ಗೊತ್ತೇ ? ನೀವು ಯಾರನ್ನು ಅಯೋಗ್ಯನೆಂದು ದೂರವಿಡುತ್ತಿದ್ದಾರೋ ಅವರಿಗೇ ಹೆಚ್ಚು ಲಾಭ. ‘ಆಯೋಗದ ಕ್ರಮಗಳಿಂದಲೇ ಜನ ಮತದಾನ ಮಾಡಲು ಹೆದರುತ್ತಿದ್ದಾರೆ. ಎಲ್ಲೆಲ್ಲೂ ಪೋಲೀಸರು ನಿಲ್ಲಿಸಿದರೆ ಜನ ನಿರ್ಭಯವಾಗಿ ಹೇಗೆ ಮತವನ್ನು ಚಲಾಯಿಸಿಯಾರು?’ ಎಂದೆಲ್ಲಾ ಮುಖಂಡರು ಟೀಕಿಸುತ್ತಿದ್ದಾರೆ. ಇದನ್ನು ಹುಸಿಗೊಳಿಸಬೇಕಾದರೆ ನಾವೆಲ್ಲಾ ಬಂದು ಮತ ಹಾಕಬೇಕು. ಆ ಮೂಲಕ ಮುಕ್ತ ಮತ್ತು ಪಾರದರ್ಶಕ ಚುನಾವಣೆಗೆ ಕೈಗೊಳ್ಳುತ್ತಿರುವ ಕ್ರಮಗಳಿಗೆ ಸಮ್ಮತಿಯ ಮೊಹರು ಒತ್ತಬೇಕು.
ಕೊನೆಯದೊಂದು ಮಾತಿದು. ಒಂದಂತೂ ಸತ್ಯ. ಚುನಾವಣೆ ಎಂದರೆ ಕುಡುಕರ ಹಾವಳಿ, ಗಲಾಟೆಯ ಹಾವಳಿ, ಕೊಲೆ-ಗಲಭೆಗೆ ಕಾರಣವಾಗುತ್ತಿದ್ದ ಹಳ್ಳಿಗಳಲ್ಲಿ ಶಾಂತಿ ನೆಲೆಸಿದೆ. ಚುನಾವಣೆ ದಿನಗಳಲ್ಲಿ ಬೆಳಗಿನ ಜಾವವಾದರೂ ಹಳ್ಳಿಗಳು ಮಲಗುತ್ತಿರಲಿಲ್ಲ. ಆದರೀಗ ರಾತ್ರಿ ಹತ್ತು ಗಂಟೆಗೇ ತಣ್ಣನೆ ಮಲಗುತ್ತದೆ. ಜನರೂ, ‘ಹೆಂಡ-ಹಣ ಏನೂ ಬೇಡ, ಸೌಲಭ್ಯ ಕಲ್ಪಿಸಿದರೆ ಸಾಕು’ ಎನ್ನುವ ಮಟ್ಟಿಗೆ ಬೆಳೆದಿದ್ದಾರೆ. ಅಲ್ಲಿಗೆ ಹೇಳಿ...ಇದು ಸುಧಾರಣೆಯಲ್ಲವೇ ? ಒಂದು ಒಳ್ಳೆಯ ವಾತಾವರಣ ನಿರ್ಮಾಣವಾಗುತ್ತಿಲ್ಲವೇ? ಅದರ ಬೆಳವಣಿಗೆಗೆ ನಾವೂ ಕಾರಣವಾಗೋದು ಮತ ಹಾಕುವ ಮೂಲಕ. ಅಂದ ಹಾಗೆ, ನಾವು ಮೊದಲು ಮತದಾರರಲ್ಲ ; ಮೊದಲು ನಾಗರಿಕ. ಹಾಗಾಗಿ ನಮ್ಮ ಹಕ್ಕು ಮತದಾನ. ಅದನ್ನು ಚಲಾಯಿಸಲೇ ಬೇಕು. (ವಿಜಯ ಕರ್ನಾಟಕದಲ್ಲಿ ಪ್ರಕಟಿತ)