ಈ ಚುನಾವಣೆಯಲ್ಲಿ ಸೋತರೆ ಬಿಜೆಪಿಗೇ ಲಾಭ
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಏಕಪಕ್ಷೀಯ ಆಡಳಿತವಲ್ಲ, ಅಂಥದೊಂದು ಅನಿವಾರ್ಯತೆಯೇ ಸೃಷ್ಟಿಯಾಗಬಾರದು. ಅದು ಒಳ್ಳೆಯದಲ್ಲ. ಹಾಗಾಗಿ ಈ ಚುನಾವಣೆಯಲ್ಲಿ ಕಡಿಮೆ ಸ್ಥಾನ ಪಡೆದಷ್ಟೂ ಎಲ್ಲರಿಗೂ ಲಾಭ, ಸ್ವತಃ ಬಿಜೆಪಿಗೇ ಲಾಭ.
ಈ ಮಾತು ಹೇಳಿದರೆ ವಿಚಿತ್ರ ಎನಿಸಬಹುದು. ಆದರೆ ನಿಜ. ರಾಜ್ಯದ ರಾಜಕೀಯ ಚರಿತ್ರೆಗೆ ಹಾಗೂ ಬಿಜೆಪಿಗೆ ಒಳ್ಳೆಯದಾಗಬೇಕಾದರೆ ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಬೇಕು.
ಇದು ಯಾವ ಪಕ್ಷದ ಪರವಾಗಿಯೂ ಹೇಳುತ್ತಿಲ್ಲ. ಆದರೆ ಇಂಥದೊಂದು ಅನಿವಾರ್ಯತೆಯ ನಿರ್ಧಾರಕ್ಕೆ ಮತದಾರರೇ ಬರುವಂಥ ಸ್ಥಿತಿ ಇದೆ. ಕಾರಣ ಬಿಜೆಪಿಗೆ ಇನ್ನೂ ಆಡಳಿತ ಎಂಬುದೇ ಅರ್ಥವಾಗಿಲ್ಲ.
ರಾಜ್ಯದ ರಾಜಕೀಯ ರೂಪುಗೊಂಡಿರುವುದು ಮೂರು ಹಂತಗಳಲ್ಲಿ. 1983 ರವರೆಗೆ ಏಕಪಕ್ಷ ಯುಗ, ನಂತರ 2004 ರವರೆಗೆ ದ್ವಿಪಕ್ಷ ಯುಗ, ನಂತರ ಸಮ್ಮಿಶ್ರ ಸರಕಾರಗಳ ಕಾರುಬಾರು. ಮೊದಲ ಹಂತದಲ್ಲಿ ಪರ್ಯಾಯ ಪಕ್ಷಗಳೇ ಇರಲಿಲ್ಲ. ಹಾಗಾಗಿ ಕಾಂಗ್ರೆಸ್‌ನದ್ದೇ ದರಬಾರು. 1983 ರಿಂದ ಕಾಂಗ್ರೆಸ್ಸೇತರ ಪಕ್ಷ ಪ್ರಜ್ವಲಮಾನಕ್ಕೆ ಬಂದಿತು. 1983 ರಲ್ಲಿ 18 ಶಾಸಕರನ್ನು ಹೊಂದಿದ್ದ ಬಿಜೆಪಿ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾಪಕ್ಷಕ್ಕೆ ಬಾಹ್ಯ ಬೆಂಬಲ ನೀಡಿದ ಪರಿಣಾಮ ಕಾಂಗ್ರೆಸ್ಸೇತರ ಪಕ್ಷ ಅಧಿಕಾರ ಹಿಡಿಯಿತು. 1985 ರ ಮಧ್ಯಂತರ ಚುನಾವಣೆಯಲ್ಲಿ ಜನತಾಪಕ್ಷವೇ ಸ್ವಾವಲಂಬಿಯಾಗಿ ಅಧಿಕಾರ ದಕ್ಕಿಸಿಕೊಂಡಿತು.
ಕಾಂಗ್ರೆಸ್ಸೇತರ ಸರಕಾರದ ಪ್ರಯೋಗಕ್ಕೆ ಮೂಲವಾಗಿದ್ದ ಬಿಜೆಪಿ ಆಗ ಎರಡೇ ಸ್ಥಾನ ಪಡೆಯುವಲ್ಲಿ ಸುಸ್ತಾಯಿತು. ೧೯೮೯ ರಲ್ಲೂ ಬಿಜೆಪಿ ಗಳಿಸಿದ್ದು 4. ಆದರೆ ನಿಜವಾಗಿಯೂ ಬಿಜೆಪಿ ಊರ್ಧ್ವಮಾನಕ್ಕೆ ಬಂದದ್ದು 1994 ರಲ್ಲಿ. ಕ್ರಮೇಣ ಮೂರು ಚುನಾವಣೆಗಳಲ್ಲಿ 40, 44 ಹಾಗೂ 79 ಸ್ಥಾನ ಪಡೆದು 2008 ರಲ್ಲಿ 104 ಕ್ಕೇರಿದ್ದು ಸಾಧನೆಯೇ. ಇದಕ್ಕೆ ನಾನಾ ಕಾರಣವಿರಬಹುದು. ಆದರೆ ಈ ವರ್ಷಗಳಲ್ಲಿ ಕಾಂಗ್ರೆಸ್‌ನ ಪ್ರಭಾವ ಕುಸಿಯುತ್ತಾ ಬಂದದ್ದೂ ನಿಜ. ಇದರೊಂದಿಗೆ ಕಾಂಗ್ರೆಸ್ ಅನ್ನು ವಿರೋಧಿಸಿಕೊಂಡೇ ಹುಟ್ಟಿದ್ದ ಜನತಾಪಕ್ಷದಿಂದ ವಿಭಜನೆ ಗೊಂಡು ಹುಟ್ಟಿಕೊಂಡ ಜನತಾದಳ 1994 ರಲ್ಲಿ ಅಧಿಕಾರ ಹಿಡಿಯಿತು. ಕಾಂಗ್ರೆಸ್ ಗೆ ಪರ್ಯಾಯವಾಗಿ ಬಿಂಬಿತವಾಯಿತು. ಅದರೂ 1999 ರಲ್ಲಿ ಕೇವಲ 10 ಸ್ಥಾನಕ್ಕೆ ಖುಷಿಪಟ್ಟು, 2004 ರಲ್ಲಿ 58 ಪಡೆದು ಸಮ್ಮಿಶ್ರ ಸರಕಾರಕ್ಕೆ ಮುನ್ನುಡಿ ಬರೆಯಿತು. ಇದೆ ಅವಕಾಶ ನಂತರ ಬಿಜೆಪಿಗೂ ದೊರೆಯಿತು. ಅದು ಅಧಿಕಾರಕ್ಕೆ ಹತ್ತಿರವಾಗಿದ್ದು ಆಗಲೇ.
ನಂತರ ಆಡಳಿತ ರುಚಿ ಕಂಡ ಬಿಜೆಪಿ ಆಡಳಿತ ಪಕ್ಷವಾಗಲು ತರಬೇತಿ ಪಡೆದುಕೊಂಡಿತೇ ? ಎಂದು ಕೇಳಿದರೆ ಸುತರಾಂ ಇಲ್ಲ ಎನ್ನುವ ಉತ್ತರ ಸಿಗುತ್ತದೆ. ಆ ಉತ್ತರಕ್ಕೆ ಈ ಒಂಬತ್ತು ತಿಂಗಳಲ್ಲಿ ನೀಡಿದ ಆಡಳಿತವೇ ಸಾಕ್ಷಿ. ಸಾಮಾನ್ಯವಾಗಿ ಅಧಿಕಾರ ಹಿಡಿದ ಮೊದಲ ಒಂದಷ್ಟು ದಿನ ‘ಮಧುಚಂದ್ರ’ದ ಕಾಲ ಎನ್ನುತ್ತೇವೆ. ಅಲ್ಲಿಯವರೆಗೆ ಗ್ರೇಸ್ ಅಂಕಗಳನ್ನು ನೀಡಿ ಸುಮ್ಮನಿರಬೇಕು. ಆ ಕಾಲವೆಲ್ಲಾ ಮುಗಿದು ಆರು ತಿಂಗಳಾಗಿವೆ. ಆಡಳಿತದ ಲವಲೇಶವೂ ಕಾಣುತ್ತಿಲ್ಲ. ಯಾವುದೇ ಇಲಾಖೆಯಲ್ಲಿ ಆಡಳಿತ ಇರುವ ಲಕ್ಷಣಗಳೇ ಗೋಚರಿಸುತ್ತಿಲ್ಲ.
ಶಿಕ್ಷಣ ಇಲಾಖೆಯಿಂದ ಹಿಡಿದು ಸಂಸ್ಕೃತಿ ಇಲಾಖೆವರೆಗೆ ದುರ್ಬೀನು ಹಾಕಿ ನೋಡಿದರೂ ಪ್ರಗತಿಯ ಕುರುಹುಗಳೇ ತೋರುತ್ತಿಲ್ಲ. ಆಯವ್ಯಯದಲ್ಲಿ ಕೋಟಿಗಟ್ಟಲೆ ಘೋಷಿಸಿದ್ದೇನೋ ನಿಜ. ಅದರ ಅನುಷ್ಠಾನಗೊಳ್ಳದಿದ್ದರೆ ಘೋಷಿಸಿ ಪ್ರಯೋಜನವೇನು ? ವಿಪರ್‍ಯಾಸದ ಸಂಗತಿಯೆಂದರೆ ಎಲ್ಲೂ ಆಡಳಿತವೆ ಶುರುವಾಗಿಲ್ಲ. ಶಿಕ್ಷಣ ಇಲಾಖೆಯಲ್ಲಿ ಯಾವ ಪರಿಸ್ಥಿತಿ ಇದೆಯೆಂದರೆ, ಸಚಿವರ ಮಾತನ್ನು ಒಬ್ಬ ಅಧೀನ ಅಧಿಕಾರಿ ಕೇಳುವುದಿಲ್ಲ. ಅಷ್ಟೇ ಏಕೆ ? ಯಾವುದಾದರೂ ಕಡತವಿಟ್ಟುಕೊಂಡು ಹೋದರೆ ಕೈ ಬಿಸಿ ಮಾಡದೇ ಯಾವ ಕೆಲಸವೂ ಆಗುವುದಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ, ‘ಸಚಿವರಲ್ಲಾರೀ, ಸಿಎಂ ಬಂದರೂ ಏನೂ ಮಾಡೋಕ್ಕಾಗಲ್ಲ’ ಎಂದು ಹೇಳುವಷ್ಟು ದಾರ್ಷ್ಟ್ಯ ಅಧಿಕಾರಿಗಳಲ್ಲಿ ಬಂದಿದೆ. ಇದು ಒಂದು ಇಲಾಖೆಯ ಉದಾಹರಣೆಯಲ್ಲ ; ಎಲ್ಲ ಕಡೆಯೂ ಇದೇ ಪರಿಸ್ಥಿತಿ.
ಭ್ರಷ್ಟಾಚಾರ ಹಾಗೂ ಅಧಿಕಾರಷಾಹಿಯ ಇಂಥದೊಂದು ನಡವಳಿಕೆ ಬೇರೆ ಸರಕಾರಗಳಿದ್ದಾಗ ಇರಲಿಲ್ಲವೇ ? ಎಂದು ಕೇಳಬಹುದು. ಆದರೆ ಬೇರೆ ಸರಕಾರಗಳಿದ್ದಾಗಲೂ ಇತ್ತು. ಆದರೆ ಈ ಮಟ್ಟಕ್ಕೆ ಅಲ್ಲ. ಕಾಂಗ್ರೆಸ್ ಇದ್ದಾಗ ಅಧಿಕಾರಿಗಳಲ್ಲಿ ಒಂದು ಬಗೆಯ ಅವ್ಯಕ್ತವಾದ ಭಯವಿತ್ತು. ಒಬ್ಬ ಶಾಸಕ ಬಂದು ಗುಡುಗಿದರೆ ಸಾಕು, ಕೆಲಸವಾಗುತ್ತಿತ್ತು. ಅದಕ್ಕೆ ಕಾರಣವಿಷ್ಟೇ, ಕಾಂಗ್ರೆಸ್ ಪಕ್ಷದವರು ತಮ್ಮವರಿಗೇ ಮಾನ್ಯತೆ ಕೊಡುತ್ತಿದ್ದರು. ಹಾಗಾಗಿ ಅಲ್ಲೇನಿದ್ದರೂ ಅಧಿಕಾರಿಗಳು ಮೂರನೆಯವರು. ಈ ಹಿನ್ನೆಲೆಯಲ್ಲೇ ಕಾಂಗ್ರೆಸ್‌ನವರು ದುಡ್ಡು ಪಡೆದಾದರೂ ಕೆಲಸ ಮಾಡಿಕೊಡುತ್ತಾರೆ ಎಂಬ ಮಾತೂ ಚಾಲ್ತಿಗೆ ಬಂದಿತ್ತು. ಇದರ ಮೂಲಕ ನಾನು ಸ್ವಜನಪಕ್ಷಪಾತವನ್ನಾಗಲೀ, ಭ್ರಷ್ಟಾಚಾರವನ್ನಾಗಲೀ ಬೆಂಬಲಿಸುತ್ತಿಲ್ಲ. ಆದರೆ ಅಧಿಕಾರಿಗಳ ಮೇಲೆ ಒಂದಿಷ್ಟು ಹಿಡಿತವನ್ನು ಹೊಂದದಿದ್ದರೆ ಹೇಗೆ ಎಂಬುದು ನನ್ನ ಪ್ರಶ್ನೆ.
ಬಿಜೆಪಿ ಹದಿನೈದು ವರ್ಷಗಳಲ್ಲಿ ರಾಜ್ಯದ ಗ್ರಾಮೀಣ ಭಾಗಗಳಲ್ಲೂ ಬೆಳೆದಿದೆ ಎಂದುಕೊಳ್ಳಬಹುದು. ಆದರೆ ವಾಸ್ತವವಾಗಿ ಅದರ ಬೇರು ಗ್ರಾಮಗಳಲ್ಲಿ ಬಿಟ್ಟಿದ್ದು ೨೦೦೪ ರ ನಂತರ. ಅಂದರೆ ಜೆಡಿಎಸ್ ಜತೆಗೂಡಿ ಸಮ್ಮಿಶ್ರ ಸರಕಾರ ರಚಿಸಿದ ನಂತರದ ಬೆಳವಣಿಗೆಯದು. ಆಗಲೇ ಜನತಾಪಕ್ಷ ಇತ್ಯಾದಿ ಹೆಸರುಗಳಿಂದ ಗ್ರಾಮೀಣ ಭಾಗದಲ್ಲಿ ಬೇರೂರಿದ್ದ (ನಂತರದ ದಿನಗಳಲ್ಲಿ ದಳವಾಗಿ ಮಾರ್ಪಟ್ಟರೂ ಬಹಳಷ್ಟು ಮುಖಂಡರು ಜನತಾಪಕ್ಷದವರೇ ಇದ್ದರು)ಜನತಾ ದಳದೊಂದಿಗೆ ಬಿಜೆಪಿ ಗುರುತಿಸಿಕೊಂಡಿತು. ಅದು ಗ್ರಾಮೀಣ ಭಾಗದಲ್ಲಿ ಬಹಳಷ್ಟು ಕಡೆ ೨೦೦೮ ರ ಚುನಾವಣೆಯಲ್ಲಿ ದ್ವಿತೀಯ ಸ್ಥಾನ ಗಳಿಸುವತ್ತಲೂ ಸಾಧ್ಯವಾಯಿತು.
ಹಾಗಾಗಿ ಇನ್ನೂ ವಿದ್ಯಾವಂತ ಮತ್ತು ನಗರ ಕೇಂದ್ರಿತ ಮತದಾರರನ್ನೇ ಬಿಜೆಪಿ ನಂಬಿಕೊಂಡಿದೆ. ಗ್ರಾಮೀಣದ ಮತದಾರರ ಕೃಪಾಕಟಾಕ್ಷ ಸಿಕ್ಕರೆ ಅದು ಬೋನಸ್. ಆದರೆ ಇವರ ಮತದಾರರಿಗೆ ಒಪ್ಪಿತವಾಗುವ ಆಡಳಿತ ನೀಡುವುದಿರಲಿ, ಆ ದಿಕ್ಕಿನತ್ತ ಒಂದು ಹೆಜ್ಜೆಯನ್ನೂ ಇಟ್ಟಿಲ್ಲ. ಅಂಥ ಶುಭಲಕ್ಷಣಗಳೂ ಗೋಚರಿಸುತ್ತಿಲ್ಲ. ಯಾವುದನ್ನು ಪ್ರಗತಿಗೆ ಪೂರಕವೆನ್ನುವಂತೆ ಪರಿಗಣಿಸಲಾಗುತ್ತದೆಯೋ ಆ ಕ್ಷೇತ್ರದಲ್ಲೆಲ್ಲಾ ಆಡಳಿತ ಕುಸಿದಿದೆ.
ತಣ್ಣಗಿದ್ದ ಸಿಇಟಿ ವಿಷಯವನ್ನು ಮತ್ತಷ್ಟು ಗೊಂದಲವಾಗಿಸಲಾಗುತ್ತಿದೆ. ಕೈಗಾರಿಕೆ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಗತಿಯಿಲ್ಲ. ವಿದ್ಯುತ್ ಸಮಸ್ಯೆಯನ್ನು ನಿಭಾಯಿಸುವುದಿರಲಿ, ಅರ್ಥ ಮಾಡಿಕೊಳ್ಳಲೇ ಸಂಬಂಧಪಟ್ಟ ಸಚಿವರಿಗೆ ಸಾಧ್ಯವಾಗಿಲ್ಲ. ನಗರಾಭಿವೃದ್ಧಿ ಸೇರಿದಂತೆ ಇತರೆ ಕ್ಷೇತ್ರಗಳತ್ತ ಗಮನಹರಿಸಲು ಇನ್ನೂ ಅಪರೇಷನ್ ಕಮಲವೇ ಮುಗಿದಿಲ್ಲ.
ಸರಕಾರ ಉಳಿಸಿಕೊಳ್ಳಬೇಕು ಎಂಬುದು ಎಷ್ಟು ಸತ್ಯವೋ ಭವಿಷ್ಯ ಸದೃಢಗೊಳ್ಳಬೇಕೆಂಬುದೂ ಅಷ್ಟೇ ಸತ್ಯ. ತಮಗೆ ಸಿಕ್ಕ ಅವಧಿ ಪೂರ್ತಿ ಆಪರೇಷನ್ ಕಮಲಕ್ಕೇ ವ್ಯಯಿಸಿಬಿಟ್ಟರೆ, ಮತ್ತೊಂದು ಅವಧಿ ಹೇಗೆ ಸಿಕ್ಕೀತು ಎಂಬುದನ್ನು ಪ್ರಶ್ನಿಸಿಕೊಳ್ಳಬೇಕು. ಕಾರಣವಿಷ್ಟೇ. ಬಿಜೆಪಿಗೆ ಮತ ನೀಡಿರುವ ಮಂದಿ ಒಂದೇ ಅವಧಿಯಲ್ಲಿ ಹಣೆಬರಹವನ್ನು ಅರಿತುಕೊಳ್ಳಲು ಬಯಸುವವರು ಮತ್ತು ಅರಿತುಕೊಳ್ಲಬಲ್ಲವರು. ಆ ಸಂದರ್ಭದಲ್ಲಿ ಪ್ರದರ್ಶನ ನೀರಸವಾಗಿದ್ದರೆ ಮತ್ತೊಂದು ಅವಕಾಶ ಕೊಡಲಾರರು.
ಹೋಗಲಿ, ಇವರ ಆದ್ಯತೆಗಳೇನೇನು ಎಂದಾದರೂ ಹೇಳುತ್ತಿದ್ದಾರೆಯೇ ?ಸಚಿವರುಗಳಿಗೆ ಸರಕಾರದ ಆದ್ಯತೆಗಳನ್ನು, ಗುರಿಗಳನ್ನು ವಿವರಿಸಲಾಗಿದೆಯೇ ? ಯಾವುದೂ ಇಲ್ಲ. ಒಬ್ಬ ಸಚಿವರಂತೂ ಹಬ್ಬಗಳಿಗೆ ಪ್ರಸಾದ ಹಂಚಲಿಕ್ಕೆ ಶುರು ಮಾಡಿದ್ದಾರೆ. ಶಿವರಾತ್ರಿಗೆ ತೀರ್ಥ ಹಂಚಿದರು, ಮತ್ತೊಂದು ಹಬ್ಬಕ್ಕೆ ಖರ್ಜೂರ ಹಂಚಿದರು. ಆ ದೇವಸ್ಥಾನಕ್ಕೆ ಹೋಗಿ ಅರ್ಚನೆ ಮಾಡಿಸಿದರು, ಮತ್ತೊಂದು ಕಡೆ ಹೋಮ ಮಾಡಿಸಿದರು. ಇದನ್ನೆಲ್ಲಾ ನೋಡಿದರೆ, ಹಿಂದೂ ಎಂದುಕೊಳ್ಳುವವನೂ ಸರಕಾರದ ವತಿಯಿಂದ ಇದನ್ನೆಲ್ಲಾ ನಡೆಯಬೇಕೆಂದು ಬಯಸುವುದಿಲ್ಲ. ಜತೆಗೆ, ಹೀಗೆಲ್ಲಾ ಪ್ರಸಾದದ ಮಂತ್ರಕ್ಕೆ ಮತಗಳು ಉದುರಲಾರವು. ಇಂಥದೊಂದು ಅಗ್ಗದ ತಂತ್ರಕ್ಕೆ ಕರ್ನಾಟಕದ ಮತದಾರರು ಬಲಿಯಾಗುವ ಸ್ಥಿತಿಯಿಲ್ಲ. ತಮಿಳುನಾಡಿನಲ್ಲಿ ಟಿವಿ ಕೊಟ್ಟರೆ ಮತ ಕೊಡುತ್ತಾರೆ, ಅಕ್ಕಿ ಕೊಟ್ಟರೆ ಗೆಲ್ಲಿಸಬಹುದು. ಆ ವಾತಾವರಣ ರಾಜ್ಯದಲ್ಲಿಲ್ಲ.
ಮತ್ತೊಬ್ಬ ಸಚಿವರಂತೂ ಈ ವರ್ಷವೇ ಇನ್ನೂ ಸಿಇಟಿ ಆರಂಭವಾಗಿಲ್ಲ. ಮುಂದಿನ ವರ್ಷದ ಬಗ್ಗೆ ಈಗಲೇ ಗೊಂದಲ ಎಬ್ಬಿಸುತ್ತಿದ್ದಾರೆ. ಅದರಲ್ಲೂ ಅದರ ದಿಢೀರ್ ಪರಿಣಾಮಗಳೇನು ? ದೀರ್ಘಾವಧಿಯ ಪರಿಣಾಮಗಳೇನು ? ಯಾವುದನ್ನೂ ಆಲೋಚಿಸುವುದಿಲ್ಲ. ಹೀಗೆ ಬಹುತೇಕ ಸಚಿವರು, ತಮ್ಮ ಇಲಾಖೆಯ ಅಭಿವೃದ್ಧಿ ಕಾರ್ಯಗಳನ್ನು ಬಿಟ್ಟು ವಕ್ತಾರರಾಗಿದ್ದಾರೆ. ಡಾ. ವಿ.ಎಸ್. ಆಚಾರ್ಯರಂಥವರು ಮಂಗಳೂರು ಪಬ್ ಪ್ರಕರಣವನ್ನೇ ಇನ್ನೂ ನಾಜೂಕಾಗಿ ನಿಭಾಯಿಸಬಹುದಿತ್ತು. ಅದ್ಯಾವುದೂ ಮಾಡಲಿಲ್ಲ. ಇದಕ್ಕೆ ಕಾರಣವಿಷ್ಟೇ. ಬಿಜೆಪಿ ಮುಖಂಡರಿಗೆ ಅಕಾಲ ವೃದ್ಧಾಪ್ಯ ಬಂದಿದೆ. ತಮ್ಮದೊಂದೇ ಬೃಹತ್ ಪಕ್ಷವೆಂಬ ಭ್ರಮೆಯೂ ಬಂದಿದೆ. ಸುಮ್ಮ ಸುಮ್ಮನೇ ಪ್ರಯೋಗಕ್ಕೆ ತೊಡಗುತ್ತಿದೆ. ನಮಗೆ ಜನರ ಬೆಂಬಲವಿದೆ ಎಂಬ ಹುಚ್ಚು ಭ್ರಮೆಯಿಂದಲೇ ಆಪರೇಷನ್ ಕಮಲಕ್ಕೆ ತೊಡಗಿರುವುದು.
ಒಂದು ಅಂಶವನ್ನು ಅರ್ಥ ಮಾಡಿಕೊಳ್ಳಬೇಕು. ಬೆಲ್ಲಕ್ಕಷ್ಟೆ ಇರುವೆ ಮುತ್ತುವುದೇ ಹೊರತು, ಕಲ್ಲಿಗಲ್ಲ. ಈಗ ಅಧಿಕಾರವಿದೆ, ಉರಿಯುವ ಮನೆಯಲ್ಲಿ ಹಿರಿದುಕೊಂಡಷ್ಟೇ ಲಾಭ ಎಂದು ಹಿರಿದುಕೊಳ್ಳಲು ಮುಂದಾಗುವ ಮಂದಿ ಬೇಕಾದಷ್ಟಿದ್ದಾರೆ. ಈಗ ಆಪರೇಷನ್ ಕಮಲಕ್ಕೆ ಒಳಗಾಗಿ ಪಕ್ಷದ ಒಳಗೆ ಬಂದವರೆಲ್ಲಾ ಇಂಥವರೇ ಹೊರತು ಮತ್ತ್ಯಾರೂ ಅಲ್ಲ. ಮತ್ತೆ ಅಧಿಕಾರ ಗಳಿಸಲು ಒಂದಿಷ್ಟು ಏನಾದರೂ ಮಾಡಿರಲೇಬೇಕು. ಅಲ್ಲದೇ, ಒಂದುವೇಳೆ ಅಧಿಕಾರ ಕಳೆದುಕೊಂಡರೆ ಪಕ್ಷದ ಬಾವುಟ ಕಟ್ಟುವುದಕ್ಕೂ ಯಾರೂ ಇರುವುದಿಲ್ಲ. ಆ ವಾಸ್ತವ ಆರಿವಾದರೆ ಒಂದಷ್ಟು ಒಳ್ಳೆ ಕೆಲಸಗಳಾಗಬಹುದೇನೋ.
ಇಷ್ಟಕ್ಕೂ 2008 ರಲ್ಲಿ ಬಿಜೆಪಿಗೆ ಒಲಿದು ಬಂದ ಅದೃಷ್ಟ ಪುಕ್ಕಟೆಯಲ್ಲ. ವ್ಯಕ್ತಿಯ ಹಿನ್ನೆಲೆಯಾಗಲೀ, ವರ್ಚಸ್ಸಿನ ಹಿನ್ನೆಲೆಯಾಗಲೀ ಗೆಲುವಿಗೆ ಕಾರಣವಾಗಿರಲಿಲ್ಲ. ಜನರಿಗೂ ಬದಲಾವಣೆ ಬೇಕಿತ್ತು. ಹೊಸ ಅವಕಾಶ ಕೊಟ್ಟು ನೋಡಲು ಪಕ್ಷವೊಂದು ಇತ್ತು. ಹಾಗಾಗಿ ಹೊಸ ಪಕ್ಷವನ್ನು ಆಯ್ಕೆ ಮಾಡಿದರು. ಮುಂದಿನ ಚುನಾವಣೆಯಲ್ಲಿ ಯಾರೂ ಹೊಸಬರಲಿಲ್ಲವೆಂದಾದರೆ, ಹೊಸ ವೈದ್ಯನಿಗಿಂತ ಹಳೇ ರೋಗಿಯೇ ಮೇಲೆಂದು ಜನ ಬದಲಾವಣೆಗೆ ಸಹಿ ಮಾಡಿದರೆ, ಬಿಜೆಪಿ ಇನ್ನೂ ಐವತ್ತು ವರ್ಷ ಬೇಕಾದೀತು ರಾಜ್ಯದಲ್ಲಿ ಆಡಳಿತ ಗಿಟ್ಟಿಸಲು.
ಇನ್ನೂ ವಿರೋಧ ಪಕ್ಷದ ಮನಃಸ್ಥಿತಿಯಲ್ಲೇ ಇರುವ ಬಿಜೆಪಿ, ಲೋಕವನ್ನೇ ಗೆದ್ದವೆಂಬ ಸಂಭ್ರಮದಲ್ಲಿದೆ. ಇಂಥ ಸಂದರ್ಭದಲ್ಲಿ ಮತ್ತೆ ಕಳೆದ ಸಾಲಿಗಿಂತ ಹೆಚ್ಚು ಸಂಸದ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾದರೆ ದೊಡ್ಡ ನಷ್ಟ ಜನರಿಗೂ ಮತ್ತು ರಾಜ್ಯಕ್ಕೂ. ಒಂದಷ್ಟು ಒಳ್ಳೆ ಕೆಲಸ ಮಾಡುವಂತೆ ಬದಲಿಸಬಹುದಾದ ಸಾಧ್ಯತೆ (ಸಂಪೂರ್ಣ ಅಧಿಕಾರಕ್ಕೆ ಹತ್ತಿರವಾಗಿ ಒಂದು ವರ್ಷವಷ್ಟೇ ಆಗಿದೆ)ಯೂ ಮುರುಟಿ ಹೋಗುತ್ತದೆ. ಈಗಾಗಲೇ ಜೆಡಿಎಸ್ ನೊಂದಿಗಿನ ಅವಧಿಯಲ್ಲಿ ತಾವು ಕೊಟ್ಟ ಆಯವ್ಯಯದಿಂದಲೇ ಈಗ ಸಂಪೂರ್ಣ ಅಧಿಕಾರ ಬಂದಿದೆ ಎಂದು ತಿಳಿದಿರುವಂತೆಯೇ, ‘ಒಂಬತ್ತು ತಿಂಗಳ ಸರಕಾರದ ಆಡಳಿತ ಜನರಿಗೆ ಖುಷಿ ನೀಡಿದೆ. ಹಾಗಾಗಿ ಹೆಚ್ಚಿನ ಸ್ಥಾನ ಗೆದ್ದಿದ್ದೇವೆ’ ಎಂದು ಅಂದುಕೊಳ್ಳುವ ಅಪಾಯವಿದೆ. ಅದೂ ಸಂಭವಿಸಿದರೆ, ಮುಂದಿನ ವರ್ಷಗಳಲಿ ಒಂದಿಷ್ಟು ತೀರ್ಥ, ಪ್ರಸಾದ ಸಿಗಬಹುದೇ ಹೊರತು ಮತ್ತೇನೋ ಅಲ್ಲ.
ಇಷ್ಟೇ ಆಗಿದಿದ್ದರೆ ಏನೋ ಅನ್ನಬಹುದಿತ್ತು. ಆದರೆ ಮತ್ತೊಂದು ಪರ್ಯಾಯ ಪಕ್ಷವೆಂಬುದಿಲ್ಲ. ಜೆಡಿಎಸ್‌ನ ಸ್ಥಿತಿ ಅರಿವಾಗಿದೆ. ಒಂದು ಸರಕಾರ ಮಾಡಬಹುದಾದಷ್ಟು ಸ್ಥಾನಗಳನ್ನು ಗೆಲ್ಲಲು ಬೇಕಾದಷ್ಟೇ ಅಭ್ಯರ್ಥಿಗಳು ಅವರಲ್ಲಿಲ್ಲ. 2004 ರ ಚುನಾವಣೆ ಸಂದರ್ಭದಲ್ಲಿ ನಾಯಕರ ದಂಡೇ ಇದ್ದ ಪಕ್ಷ ಇವತ್ತು ನಾವಿಬ್ಬರು-ನಮಗಿಬ್ಬರು ಎನ್ನುವಂಥ ಪರಿಸ್ಥಿತಿಯಲ್ಲಿದೆ. ಹಾಗಾಗಿ ಏಕಪಕ್ಷದ ಸ್ಥಿತಿ ಪ್ರಜಾತಂತ್ರದ ಆರೋಗ್ಯದ ದೃಷ್ಟಿಯಿಂದಲೇ ಒಳ್ಳೆಯದಲ್ಲ.
ಇದೆಲ್ಲಾ ಒಟ್ಟಾಗಿರಿಸಿಕೊಂಡು ನೋಡಿದರೆ, ಬಿಜೆಪಿ ಈ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಸ್ಥಾನ ಪಡೆದಷ್ಟೂ ಒಳ್ಳೆಯದು.
ಆಕಾಶದಲ್ಲಿರುವ ಬಿಜೆಪಿ ಮಂದಿ ವಾಸ್ತವದ ಭೂಲೋಕಕ್ಕೆ ಇಳಿದಾರು. ಆ ಶಕ್ತಿ ಇರುವುದು ನಮ್ಮ ಒಂದೊಂದು ಮತಕ್ಕೆ.
(ವಿಜಯ ಕರ್ನಾಟಕದ ಸಂಪಾದಕೀಯ ಪುಟದಲ್ಲಿ ಪ್ರಕಟಿತ ಲೇಖನ)