ನಮ್ಮಲ್ಲಿ ಸಮೂಹ ಮಾಧ್ಯಮದ ಕಾಲವಿದು. ಹಲವು ತಲೆಮಾರುಗಳನ್ನು ತನ್ನ ದೃಶ್ಯಶಕ್ತಿಯಿಂದಲೇ ಮಣಿಸಲು ಹೊರಟಿರುವ ಸಂದರ್ಭ. ಕೆಲವೊಮ್ಮೆ ರೇಜಿಗೆ ಹುಟ್ಟಿಸುವಂತೆ ಕಂಡು ಬಂದರೂ, ಅಭಿವೃದ್ಧಿಯ ನೆಲೆಯಲ್ಲಿ ತನ್ನದೇ ಪಾತ್ರ ವಹಿಸುತ್ತಾ ಬಂದಿರುವುದನ್ನು ಎಲ್ಲರೂ ಗಮನಿಸಲೇಬೇಕಾದ ವಾಸ್ತವ.
ಇಂದು ಸಮೂಹ ಮಾಧ್ಯಮಗಳಿಂದ ಪ್ರಭಾವಿತಗೊಳ್ಳದ ವ್ಯಕ್ತಿಯೇ ಇಲ್ಲ. ವಿದ್ಯುತ್ ಸಂಪರ್ಕವಿಲ್ಲದ ಹಳ್ಳಿಗಳನ್ನೂ ಇದು ಬಿಟ್ಟಿಲ್ಲ. ಒಂದಲ್ಲ ಒಂದು ವಿಧಾನದಿಂದ ಅಥವಾ ವಿಧದಿಂದ ಪ್ರತಿಯೊಬ್ಬರನ್ನೂ ತಲುಪತ್ತಲೇ ಇವೆ. 1960-70 ರ ದಶಕದಲ್ಲಿ ಭಾರತದಲ್ಲಿ ಸಮೂಹ ಮಾಧ್ಯಮವೆಂದರೆ ಪತ್ರಿಕೆ ಮತ್ತು ರೇಡಿಯೊ. ದೂರದರ್ಶನ ನಮಗಿನ್ನೂ ಅಷ್ಟೊಂದು ಪರಿಚಯವಾಗಿರಲಿಲ್ಲ. ಅದರಲ್ಲೂ ಪ್ರಾದೇಶಿಕ ನೆಲೆಯಲ್ಲಿ ವಿಸ್ತಾರಗೊಂಡಿರಲಿಲ್ಲ. ನಾಲ್ಕು ತಿಂಗಳಿಗೊಮ್ಮೆ ಸರತಿಯಂತೆ ಬರುವ ಕನ್ನಡ ಸಿನಿಮಾ ಬಿಟ್ಟರೆ ಬೇರೆ ಕನ್ನಡವಿರಲಿಲ್ಲ. ಇನ್ನು, ಸಿನಿಮಾ ತನ್ನ ನೆಲೆಯಲ್ಲಿ ಕಾರ್‍ಯ ನಿರ್ವಹಿಸುತ್ತಿದ್ದರೂ, ಅದು ಮನರಂಜನೆಯ ನೆಲೆಯಲ್ಲಷ್ಟೇ ಇತ್ತು. ಪತ್ರಿಕೆಯಲ್ಲಿ ಬರುವುದೆಂದರೆ ಸಾವಿರಾರು ಜನರನ್ನು ಏಕಕಾಲದಲ್ಲಿ ಮುಟ್ಟುವ ಪ್ರಯತ್ನವೆಂದೇ. ಸುದ್ದಿಗಷ್ಟೇ ಮುಖ್ಯವಾಗಿದ್ದ ಪತ್ರಿಕೆಗಳು ಎಂದಿನ ಸುದ್ದಿಯನ್ನು ಹಂಚುತ್ತಲೇ, ಗಾಢವಾಗಿ ಆವರಿಸಿಕೊಳ್ಳತೊಡಗಿದವು.
ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ಪತ್ರಿಕೆಗಳು ಸಾಮೂಹಿಕವಾಗಿ ಜನರ ಮೇಲೆ ಪ್ರಭಾವ ಬೀರಿರುವುದಲ್ಲದೇ, ಚಳವಳಿಗೆ ಶಕ್ತಿ ತುಂಬುವಲ್ಲಿ ಯಶಸ್ವಿಯಾಗಿದ್ದವು. ಕಲ್ಲಚ್ಚಿನಲ್ಲಿ ಸುದ್ದಿಯನ್ನು ಮುದ್ರಿಸಿ ಮಾರಾಟ ಮಾಡುತ್ತಿದ್ದ ದಿನವೂ ಇತ್ತು. ಅವೆಲ್ಲವೂ ಈಗ ಇತಿಹಾಸ. ಅಚ್ಚರಿಯ ಸಂಗತಿಯೆಂದರೆ, ಅಂಥದೊಂದು ಇತಿಹಾಸವನ್ನು ಬೆನ್ನಿಗಿಟ್ಟುಕೊಂಡು ಇಂದಿನ ವರ್ತಮಾನವನ್ನು ನೋಡಿದರೆ ಅಬ್ಬಾ ಎನಿಸುತ್ತದೆ. ಪತ್ರಿಕೆಯಲ್ಲದೇ, ವಿವಿಧ ಸಮೂಹ ಮಾಧ್ಯಮಗಳು ಬೆಳೆದಿರುವ ಬಗೆ ಮತ್ತು ಜನರನ್ನು ಒಳಗೊಂಡಿರುವ ನೆಲೆ ಕಂಡರೆ ಆಶ್ಚರ್ಯ ಎನಿಸುವುದು ನಿಜ. ಆ ಒಳಗೊಳ್ಳುವ ಬಗೆ ಸಕಾರಾತ್ಮಕವಾಗಿಯೋ, ಋಣಾತ್ಮಕವಾಗಿಯೋ ಎಂಬುದನ್ನು ಬೇರೆಯಾಗಿಯೇ ಚರ್ಚಿಸೋಣ.
ಮೊದಲೇ ಹೇಳಿದಂತೆ ದೂರದರ್ಶನವೊಂದೇ ಬಿತ್ತರವಾಗುತ್ತಿದ್ದ ಕಾಲ. ಪತ್ರಿಕೆ, ಟಿವಿ, ರೇಡಿಯೋವಷ್ಟೇ ಮಾಧ್ಯಮಗಳಾಗಿದ್ದವು. ಪತ್ರಿಕೆ ಬಿಟ್ಟರೆ, ರೇಡಿಯೋ ಎಲ್ಲರ ಮನೆಯಲ್ಲೂ ಇತ್ತು. ಸರಕಾರಿ ವ್ಯವಸ್ಥೆಯಲ್ಲಿದ್ದರೂ ಸುದ್ದಿ ಸಮಾಚಾರಕ್ಕೇನೋ ಕೊರತೆಯಿರಲಿಲ್ಲ. ಇಡೀ ವಾರ್ತಾ ಸಂಚಯದಲ್ಲಿ ಒಂದರ ಬದಲಿ ಮೂರು ಬಾರಿ ಆಡಳಿತ ಸರಕಾರದ ಪದಾಧಿಕಾರಿಗಳ ಹೇಳಿಕೆಗಳನ್ನು ಕೇಳಬೇಕಿತ್ತು. ಹಾಗೆಯೇ ದೂರದರ್ಶನದಲ್ಲಿ ನೋಡಬೇಕಿತ್ತು.
1980 ರ ದಶಕದ ಮಧ್ಯಭಾಗದಿಂದಲೇ ಈ ಟಿವಿ ವಾಹಿನಿಗಳ ಶಕೆ ಆರಂಭವಾಯಿತಾದರೂ, ಭರಾಟೆಗೆ ತಲುಪಿದ್ದು ೧೯೯೦ ರ ದಶಕದಲ್ಲೇ. ಅದರಲ್ಲೂ ೧೯೯೫ ರ ನಂತರ ಆಗಿರುವ ಕ್ರಾಂತಿ ಇನ್ನೆಲ್ಲೂ ಆಗಿಲ್ಲ. ಉಪಗ್ರಹ ತಂತ್ರಜ್ಞಾನ ಅಸಾಧ್ಯವಾದ ಕ್ರಾಂತಿಯನ್ನು ಎಸಗಿದ್ದರೆ, ಪತ್ರಿಕೋದ್ಯಮದಲ್ಲಿ ಕಳೆದ ೪೦ ವರ್ಷಗಳಲ್ಲಿ ಹೊಸದೇ ಕ್ರಾಂತಿಯಾಗಿದೆ. ಜತೆಗೆ ಹೊಸ ಬೆಳೆಯನ್ನೂ ತೆಗೆಯಲಾಗಿದೆ. ಏಕ ಅಥವಾ ಸೀಮಿತ ಗುಂಪಿನ ಚಟುವಟಿಕೆಯಾಗಿದ್ದ ಪತ್ರಿಕೋದ್ಯಮ, ಇಂದು ಲಕ್ಷಾಂತರ ಮಂದಿಗೆ ಉದ್ಯೋಗ ಕಲ್ಪಿಸಿರುವ ಉದ್ಯಮ. ಹಾಗೆಯೇ ವಾಹಿನಿಗಳೂ, ಲಕ್ಷಾಂತರ ಮಂದಿಗೆ ನೇರ, ಪರೋಕ್ಷ ಉದ್ಯೋಗ ಕಲ್ಪಿಸಿವೆ. ಇದನ್ನೆಲ್ಲಾ ನೋಡಿದರೆ ಜಾಹೀರಾತು ಜಗತ್ತು ಈ ಸಮೂಹ ಮಾಧ್ಯಮಗಳನ್ನು ಬೆಳೆಸಿರುವುದಲ್ಲದೇ, ತಾವೂ ಬೆಳೆದಿವೆ. ತಮ್ಮ ಕಾರ್‍ಯ ಚಟುವಟಿಕೆಗಳನ್ನು ವಿಸ್ತರಿಸಿಕೊಂಡಿವೆ.
ಇವತ್ತಿನ ಸ್ಥಿತಿ ಹೇಗಿದೆ, ಊಹಿಸಿಕೊಳ್ಳಿ. ಸಮೂಹ ಮಾಧ್ಯಮಗಳ ಪ್ರಭಾವಲಯದಿಂದ ಒಂದಿನಿಂತೂ ಜಾಗ ಉಳಿದಿಲ್ಲ. ಅದರಲ್ಲೂ ನೀವು ಪ್ರಸಿದ್ಧ ವ್ಯಕ್ತಿ (ಸೆಲೆಬ್ರಿಟಿ)ಗಳಾಗಿದ್ದರೆ ಪ್ರತಿ ಕ್ಷಣವೂ ಸಾರ್ವಜನಿಕರದ್ದೇ ಎಂದಂತಾಗಿದೆ. ಅದಕ್ಕೆ ಹಲವು ಕಾರಣಗಳಿರಬಹುದು. ಜತೆಗೆ ಮಾಧ್ಯಮದ ಸುದ್ದಿ ವಲಯಗಳೂ ವಿಸ್ತರಿಸಿಕೊಂಡ ಪರಿಣಾಮ, ವಿಶಿಷ್ಟತೆ ಎನ್ನುವ ನೆಲೆಯಲ್ಲಿ ಪ್ರತಿಯೊಂದಕ್ಕೂ ಒಂದೊಂದು ಅರ್ಥ ಕಲ್ಪಿಸಿದ್ದೇವೆ. ಒಂದು ಸಂದರ್ಭದಲ್ಲಿ ರಾಜಕೀಯ ಮತ್ತು ಸಾಹಿತ್ಯದ ನೆಲೆಯಲ್ಲೇ ಕ್ರೋಢೀಕೃತಗೊಂಡಿದ್ದ ಸುದ್ದಿ ಮೌಲ್ಯವೆನ್ನುವ ಆಯಾಮ ಇಂದು ಆರೋಗ್ಯದಿಂದ ಹಿಡಿದು, ಖಾಸಗಿ ಪಾರ್ಟಿವರೆಗೂ ಬಂದಿದೆ. ಇವೆಲ್ಲವನ್ನೂ ಸೃಷ್ಟಿಸಿದ್ದು ಮತ್ತು ಅಂಥದೊಂದು ಮೌಲ್ಯ ತಂದುಕೊಟ್ಟಿದ್ದು ಮಾರುಕಟ್ಟೆಯ ಶಕ್ತಿಗಳೇ. ವಿಪರ್ಯಾಸದ ಸಂಗತಿಯೆಂದರೆ ಸುದ್ದಿಗಳು ಸರಕಾಗಿರುವುದು. ಅಂದರೆ ಮಾರುಕಟ್ಟೆಯಲ್ಲಿ ಸಂಚಲನ ಉಂಟು ಮಾಡಬಲ್ಲಂಥ ಸುದ್ದಿಗಳು ಬೇಕು. ಹಾಗಾಗಿ ಆಯಾ ಆಸಕ್ತಿಯ ವಲಯಗಳಲೆಲ್ಲಾ ಸಮೂಹ ಮಾಧ್ಯಮಗಳು ಕಾಲಿಟ್ಟಿವೆ.
ಅಂತಾರಾಷ್ಟ್ರೀಯ ಸರಕು ಮಾರುಕಟ್ಟೆಯನ್ನು ದೃಷ್ಟಿಯಲ್ಲಿಟ್ಟುಕೊಂಡ ಸಮೂಹ ಮಾಧ್ಯಮಗಳೂ ಬೇಕಾದಷ್ಟಿವೆ. ಇಲ್ಲಿ ಸಮೂಹ ಮಾಧ್ಯಮಗಳೆಂದರೆ ಬಹಳ ಮುಖ್ಯವಾಗಿ ಟಿವಿ ವಾಹಿನಿಗಳ ಬಗ್ಗೆ ಹೇಳುತ್ತಿದ್ದೇನೆ. ‘ಬ್ರ್ಯಾಂಡಿಂಗ್’ ಪ್ರಪಂಚದ ಅಭಿವೃದ್ಧಿಗಾಗಿಯೇ ಈ ವಾಹಿನಿಗಳು ಇವೆ ಎಂಬಂತೆ ತೋರುತ್ತವೆ. ಇಲ್ಲದಿದ್ದರೆ, ಮನೆಯನ್ನು ಹೇಗೆ ಸ್ವಚ್ಛವಾಗಿಟ್ಟುಕೊಳ್ಳಬೇಕು, ಹೇಗೆ ಕಸ ಗುಡಿಸಬೇಕು ? ಯಾವ ಫ್ಲೋರ್ ಕ್ಲೀನರ್ ಹಾಕಿ ನೆಲ ಒರೆಸಬೇಕು ? ಎಂದೆಲ್ಲಾ ಟಿವಿ ಯಲ್ಲಿ ಹೇಳಿಕೊಡುವಂಥ , ಸಲಹೆ (ಟಿಪ್ಸ್) ನೀಡುವಂಥ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ. ಹಾಗೆಂದು ಪತ್ರಿಕೆಗಳನ್ನೂ ಮಾರುಕಟ್ಟೆಯ ಶಕ್ತಿ ಬಿಟ್ಟಿಲ್ಲ. ಆದರೆ ಪತ್ರಿಕೆಗಳಿಗೆ ದೃಶ್ಯಶಕ್ತಿ ಇಲ್ಲವಾದದ್ದರಿಂದ ಅವುಗಳೇ ಬಚಾವಾಗಿವೆ ಎನ್ನಬೇಕು.
ಸಿನಿಮಾ ಮಾಧ್ಯಮ ಒಂದು ಸಂದರ್ಭದಲ್ಲಿ ಸಮಾಜದ ಮೌಲ್ಯವನ್ನು ಬಿಂಬಿಸುವ ಮಾಧ್ಯಮವಾಗಿತ್ತು. ಇವತ್ತು ಮಾರ್ಗದರ್ಶಿಸುವ ಕೆಲಸ ಮಾಡುತ್ತಿದೆ. ಅಂದರೆ ಯುವ ಜಗತ್ತನ್ನು ನಡೆಸುವ ಮುಂಚೂಣಿ ಪ್ರಭಾವಿ ಸ್ಥಾನದಲ್ಲಿದೆ. ಹಾಗಾಗಿಯೇ ಒಂದಿಷ್ಟು ಆವೇಶ, ಆಕ್ರೋಶಕ್ಕೆ ಸೀಮಿತವಾಗುತ್ತಿದೆ. ಆದರೆ ಹಿಂದೆ ಹಾಗಲ್ಲ ; ಸಮಾಜದ ಮೇಲೆ ಸಕಾರಾತ್ಮಕವಾಗಿಯೇ ಪರಿಣಾಮ ಬೀರುವಂಥ ಕೆಲಸದಲ್ಲಿ ಸಕ್ರಿಯವಾಗಿತ್ತು. ಇವತ್ತಿಗೂ ಆ ನೆಲೆಯ ಕಾರ್ಯ ನಡೆಯುತ್ತಿದ್ದರೂ, ಸಣ್ಣದೊಂದು ತೊರೆಯ ಹಾಗೆಯೇ.
ಈಗ ಸಮೂಹ ಮಾಧ್ಯಮಗಳ ಬಗ್ಗೆ ಜನರ ಮುಂದೆ ಆಯ್ಕೆಗಳಿವೆ. ಇದನ್ನೇ ಒಪ್ಪಿಕೊಳ್ಳಬೇಕೆಂಬ ಅನಿವಾರ್ಯತೆಯೂ ಇಲ್ಲ, ಆಜ್ಞೆಯೂ ಇಲ್ಲ. ಅಯ್ಕೆಗಳ ಪ್ರಪಂಚದಲ್ಲಿ ಒಂದು ನಿರ್ದಿಷ್ಟ ಗುಂಪಿನ ಮೇಲೆಯೇ ಎಲ್ಲರ ನಂಬಿಕೆ ಮತ್ತು ಆಸಕ್ತಿ. ಆ ಹಂತ ಎಲ್ಲಿಗೆ ಮುಟ್ಟುತ್ತದೆಂದರೆ ಪರಸ್ಪರ ಹಿತಾಸಕ್ತಿಗಳನ್ನು ಕಾದುಕೊಳ್ಳಲು ಏನು ಮಾಡಲೂ ಸಿದ್ಧ ಎನ್ನುವಷ್ಟರಮಟ್ಟಿಗೆ. ಕೊಡು-ಕೊಳ್ಳುವಿಕೆ, ವ್ಯಾಪಾರ-ವ್ಯವಹಾರ ಎಲ್ಲವೂ ಆ ಹಂತದಲ್ಲೇ ನಡೆಯುತ್ತದೆ. ಹಾಗಾಗಿ, ತನ್ನ ನಿರ್ದಿಷ್ಟ ಗುಂಪಿನ ಆಸಕ್ತಿ (ಗಿರಾಕಿಗಳೆಂದು ಕರೆಯಬಹುದು)ಯನ್ನು ಕಾಯಲು ಸತ್ಯವನ್ನೂ ತಿರುಚುವಂಥ ಪ್ರಯತ್ನಗಳೂ ನಡೆಯುತ್ತವೆ. ಸುಳ್ಳನ್ನು ಸತ್ಯವೆಂದು ಬಿಂಬಿಸುವ ಯತ್ನವೂ ಚಾಲ್ತಿಯಲ್ಲಿರುತ್ತದೆ. ಅಂಥ ಉದಾಹರಣೆ ಮೂರ್‍ನಾಲ್ಕು ವರ್ಷಗಳಲ್ಲಿ ಬೇಕಾದಷ್ಟು ನಡೆದಿದೆ.
ಆ ಗುಂಪಿನ ನಡವಳಿಕೆಯೇ ಸಮಾಜದ ನಡವಳಿಕೆಯಾಗಬೇಕೆಂಬ ಮಟ್ಟಕ್ಕೆ ಬಿಂಬಿಸುವ ಪ್ರಯತ್ನಗಳಿಗೆ ಬೆನ್ನೆಲುಬಾಗಿ, ಅಭಿವ್ಯಕ್ತಿ ಸ್ವಾತಂತ್ರ್ಯ, ಬದುಕುವ ಸ್ವಾತಂತ್ರ್ಯ, ಸಂವಿಧಾನದಲ್ಲಿನ ಮೂಲಭೂತ ಹಕ್ಕುಗಳ ವ್ಯಾಖ್ಯಾನ, ಮಾನವ ಹಕ್ಕುಗಳ ವ್ಯಾಪ್ತಿ ಎಲ್ಲವೂ ಬಂದು ಬಿಡುತ್ತವೆ. ಒಟ್ಟು ನಾಗರಿಕರ ದನಿಯಿದು ಎನ್ನುತ್ತಾ ಇತ್ಯರ್ಥ ಮಾಡುವ ಧಾಟಿಯಲ್ಲಿ ಸಮೂಹ ಮಾಧ್ಯಮಗಳು ಹೊರಟಿವೆ.
ಇವೆಲ್ಲವನ್ನೂ ನೋಡುವಾಗ ಈ ಸಮೂಹ ಮಾಧ್ಯಮಗಳ ಜಾಲದೊಳಗೆ ನಾವು ಸಿಲುಕಿಕೊಂಡಿದ್ದೇವೆ ಎನಿಸುವುದುಂಟು. ಆದರೆ ನನಗನ್ನಿಸುವುದೊಂದು. ನಾವು ಈಗ ಇದ್ದೂ ಇಲ್ಲದಂತಿರುವುದನ್ನು ಕಲಿಯಬೇಕು. ಅಧ್ಯಾತ್ಮದ ಅರ್ಥದಲ್ಲಿ ಕಮಲದ ಹಾಗೆ. ಕೆಸರಲ್ಲಿದ್ದೂ ಅದನ್ನು ಅಂಟಿಸಿಕೊಳ್ಳದ ಹಾಗೆ. ಅದು ನಮಗಿನ್ನೂ ರೂಢಿಗತವಾಗಿ ಬಂದಿಲ್ಲ. ಸಮೂಹ ಮಾಧ್ಯಮಗಳ ಪ್ರಭಾವಕ್ಕೆ ಅತೀವವಾಗಿ ಒಳಗಾಗಿರುವ ನಮ್ಮ ಯುವ ತಲೆಮಾರು ಸ್ವಲ್ಪ ಸಂಕಷ್ಟ ಪಡುವುದಿದ್ದೇ ಇದೆ. ಆದರೆ ಅವರ ನಂತರದ ತಲೆಮಾರಿಗೆ ಮೇಲೆ ಹೇಳಿದಂತೆ ಇದ್ದೂ ಇಲ್ಲದವರಂತೆ ಬದುಕುವುದು ರೂಢಿಗತ ಅಭ್ಯಾಸವಾಗಿ ಬರುತ್ತದೆ. ಆಗ ಸಮೂಹ ಮಾಧ್ಯಮಗಳ ಸ್ಥಿತಿಯನ್ನು ನೋಡಬೇಕು.
ಇಂಥದೊಂದು ಮಾತು ಹೇಳುತ್ತಿರುವಾಗಲೇ, ಸಮೂಹ ಮಾಧ್ಯಮಗಳು ಅಭಿವೃದ್ಧಿಯ ನೆಲೆಯಲ್ಲಿ ಕೊಡುಗೆ ನೀಡುತ್ತಿರುವುದನ್ನು ಅಲ್ಲಗೆಳೆಯಲಾಗದು. ಮಾಹಿತಿ ಹಕ್ಕು ಎನ್ನುವಂಥ ಪ್ರಬಲ ಕಾಯ್ದೆ ಜಾರಿಯ ಹಿಂದೆ ಮಾಧ್ಯಮಗಳ ಪಾತ್ರವೂ ಇದ್ದೇ ಇದೆ. ಇದರೊಂದಿಗೆ, ಹಲವು ಅಭಿವೃದ್ಧಿ ಕುರಿತಾದ ಮಾಹಿತಿ ವಿನಿಮಯ, ಸಂವಾದ, ಚರ್ಚೆಯಂಥ ಮಾರ್ಗದ ಮೂಲಕ ಜನರೊಂದಿಗೆ ಸಂಪರ್ಕವಿಟ್ಟುಕೊಳ್ಳುವ ಕೆಲಸಗಳು ನಡೆಯುತ್ತಲೇ ಇವೆ. ಆದರೂ, ನಮ್ಮನ್ನು ಅಥವಾ ನಮ್ಮತ್ತ ಇನ್ನೂ ಸ್ವಲ್ಪ ಜಾಸ್ತಿ ನೋಡಿ ಎಂದು ಮಾಧ್ಯಮಗಳನ್ನು ಕೇಳಿಕೊಳ್ಳುವಂಥ ಸ್ಥಿತಿ ನಮ್ಮದು.
ಸಮೂಹ ಮಾಧ್ಯಮಗಳಲ್ಲಿ ಅದರಲ್ಲೂ ದೃಶ್ಯ ಮಾಧ್ಯಮಗಳ ಕಾರ್ಯ ನಿರ್ವಹಣೆ ಬಗ್ಗೆ ಈಗಲೇ ಹತಾಶೆಗೊಳ್ಳುವ ಸ್ಥಿತಿಯಿಲ್ಲ. ಅಲ್ಲದೇ, ಹತಾಶೆಗೊಳ್ಳುವ ಸ್ಥಿತಿ ನಿರ್ಮಿಸಿಕೊಳ್ಳದಂತೆ ನಾವೇ ಎಚ್ಚರವಹಿಸಬೇಕು. ಭಾರತದಲ್ಲಿ ದೃಶ್ಯ ಮಾಧ್ಯಮಗಳು ಇನ್ನೂ ತಾರುಣ್ಯವಾಸ್ಥೆಗೆ ಬರುತ್ತಿವೆಯಷ್ಟೇ. ಹದಿನೈದು ವರ್ಷಗಳಲ್ಲಿ ತನ್ನ ಹಾದಿಯನ್ನು ಸ್ಪಷ್ಟಗೊಳಿಸಿಕೊಳ್ಳುತ್ತಿದ್ದರೂ, ಇನ್ನೂ ಸ್ಪಷ್ಟವಾಗಿಲ್ಲ. ಅಂಥದೊಂದು ನಿಖರತೆ ಬರಲು ವೀಕ್ಷಕರ ಪಾತ್ರವೂ ಅವಶ್ಯ.
‘ಟಿಆರ್‌ಪಿ‘ ರೇಟ್ ಅನ್ನು ನಿಯಂತ್ರಿಸುವ ಶಕ್ತಿ ಇರುವುದೂ ವೀಕ್ಷಕರಲ್ಲೇ. ಆ ರೇಟ್ ಗಾಗಿ ಪೈಪೋಟಿ ನಡೆಸುವ ಸಮೂಹ ಮಾಧ್ಯಮಗಳನ್ನು ನಿಯಂತ್ರಿಸುವ, ಮಾರ್ಗದರ್ಶಿಸುವ ಸೂತ್ರಗಳು ನಮ್ಮ ನಮ್ಮ ಮನೆಗಳಲ್ಲೇ ಇವೆ. ಅದನ್ನು ಕ್ರಿಯಾಶೀಲಗೊಳಿಸಬೇಕಷ್ಟೇ. ಒಂದುವೇಳೆ ಆ ಕಾರ್ಯವನ್ನು ಮಾಡದೇ ಸುಮ್ಮನಿದ್ದರೆ, ಒಂದು ಕ್ರಿಯಾಶೀಲವಾಗಬಲ್ಲ ಮಾಧ್ಯಮಗಳನ್ನು ಹಾಳಾಗಲು ಬಿಟ್ಟ ಅಪರಾಧಿ ಪ್ರಜ್ಞೆಯನ್ನು ನಾವೇ ಹೊತ್ತುಕೊಳ್ಳಬೇಕು. ಆದ ಕಾರಣ ನಾವು ಎಚ್ಚೆತ್ತುಕೊಳ್ಳಬೇಕಾದುದು ಅನಿವಾರ್ಯ.
4 comments:
'ಪ್ರಭಾವಿ' ಮಾಧ್ಯಮಗಳು ಆಗಲೇ ಮಿಡಲ್ ಕ್ಲಾಸ್ ಜನರನ್ನು ಅವರಿಗೆ ಅರಿವೇ ಇಲ್ಲದ೦ತೆ ಮ೦ಕು ಬೂದಿ ಎರಚಿ ಕಣ್ಣು ಕಾಣದ೦ತೆ ಮಾಡಿವೆ..'fact' ಯಾವುದು 'hype' ಯಾವುದು ಗೊತ್ತಾಗೋದು ಕಷ್ಟವಾಗಿದೆ.
ಪ್ರಮೋದ್ ಅವರೇ,
ಒಂದು ಅರ್ಥದಲ್ಲಿ ನೀವು ಹೇಳೋದು ನಿಜವೇ. ಆದರೆ ತಲೆ ಹೋಗುವಂಥದ್ದೇನೋ ಆಗಿಲ್ಲ. ಹಾಗೆ ಅಂದುಕೊಳ್ಳಲೂ ಬೇಕಿಲ್ಲ. ಜತೆಗೆ ಅಪಾಯ ಎನ್ನೋದು ಮುಂದಿನ ದಿನಗಳಲ್ಲಿ ಘಟಿಸೋದು, ಈಗಿನದ್ದಲ್ಲ.
ನೀವು ಹೇಳಿದಂತೆ ಪ್ರಭಾವಿ ಮಾಧ್ಯಮಗಳು ಫ್ಯಾಕ್ಟ್ ಅಥವಾ ಹೈಪ್ ಮಧ್ಯೆ ವ್ಯತ್ಯಾಸವನ್ನು ಇನ್ನೂ ತೆಗೆದುಹಾಕಿಲ್ಲ. ಜತೆಗೆ ಮಾಧ್ಯಮಗಳು ಬಿಂಬಿಸುವುದಷ್ಟೆ ಸುದ್ದಿಯಲ್ಲ ಎಂಬ ಅರಿವೂ ಮೂಡತೊಡಗಿದೆ. ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದ
ಸೊಗಸಾಗಿ ಬರೆದಿದ್ದೀರಿ. ನೀವು ಹೇಳಿದಂತೆ ಮಾದ್ಯಮದ ಪ್ರಯೋಜನ ಸಾಕಷ್ಟು ಇದ್ದರೂ ಇನ್ನೊಂದು ಬದಿಯಲ್ಲಿ ಮಾದ್ಯಮ ನೀವು ಹೇಳಿದ್ದಕ್ಕಿಂತಲೂ ತುಸು ಗಂಭೀರವೇ ಎನಿಸುವಷ್ಟು ಹಾನಿ ಮಾಡುತ್ತಿದೆ. ತಮ್ಮಷ್ಟಕ್ಕೇ ತಾವು ಏನಾದರೂ ಮಾಡಿ "ಓದುಗರು ಕೇಳ್ತಾರೆ","ನೋಡುಗರು ಕೇಳ್ತಾರೆ","ಜನ ಬಯಸ್ತಾರೆ" ಅಂತ ಜನರ ಮೇಲೆ ದೂರು ಹಾಕುವ ಮಾದ್ಯಮಗಳೇ ಹೆಚ್ಚುತ್ತಿರುವುದು ದುರದೃಷ್ಟಕರ. ನೀವೇ ನೋಡಿ, ಹೀಗೆಲ್ಲಾ ಹೇಳುವವರು ಎಲ್ಲಿ, ಯಾರನ್ನು ಕೇಳಿದ್ದಾರೆ ಹೇಳಲಿ ನೋಡೋಣ. ಯಾರನ್ನೂ ಸಮೀಕ್ಷೆ ಮಾಡದೆ ಜನ ಕೇಳ್ತಾರೆ ಅನ್ನುವುದು ತಪ್ಪಲ್ಲವಾ?
ಹೌದು, ರಾಕೇಶ್. ಅದನ್ನೇ ಹೇಳಿದ್ದು, ನಾವು ಎಚ್ಚೆತ್ತುಕೊಳ್ಳಬೇಕಾದ ಸಮಯ. ಯಾಕೆಂದರೆ ತಮ್ಮ ತಮ್ಮ ನೆಲೆಗೆ ಬಳಸಿಕೊಳ್ಳುವ ಸಾಧ್ಯತೆ ಎಲ್ಲ ಸಂದರ್ಭದಲ್ಲೂ ಇದ್ದದ್ದೇ. ಅದು ಇಂದು-ಅಂದಿನ ಪ್ರಶ್ನೆಯಲ್ಲ. ಹಾಗಾಗಿ ನಾವೆಲ್ಲಾ ಸೇರಿಕೊಂಡು ಸಾಮಾಜಿಕ ನೆಲೆಗೆ ಬಳಸಿಕೊಳ್ಳುವ ಅಗತ್ಯವಿದೆ ಎಂಬುದು ನನ್ನ ಅನಿಸಿಕೆ. ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದ.
ನಾವಡ
Post a Comment