Monday, October 8, 2007

ಹೆಡ್ಡಿಂಗ್ ಇಲ್ಲದ್ದು...


ತೆರೆದ ಅಂಗಡಿ ಮುಂದೆ ನಿಂತವರು ನಾಲ್ಕೇ ಮಂದಿ. ಅಪ್ಪ-ಅಮ್ಮ, ಮಗಳು, ಬಿಟ್ಟರೆ ಅಂಗಡಿಯವ. ಮಗಳಿಗೆ ಹೆಚ್ಚೆಂ ದರೆ ಎಂಟರ ಪ್ರಾಯ. ಅಪ್ಪನಿಗೆ ಮೂವತ್ತೈದರ ಆಸುಪಾಸು. ಅಮ್ಮನ ವಯಸ್ಸು ಹೇಳುವಂತಿಲ್ಲ. ಊಹಿಸಿಕೊಳ್ಳಬೇಕಷ್ಟೇ. ಜಾ ಸ್ತಿ ಎನ್ನಬೇಡಿ, ಅಮ್ಮ ಹಳಬಳಾಗಿಬಿಡಬಹುದು. ಜೇನು ಹಳೆಯದಾದಷ್ಟೂ ರುಚಿಯಂತೆ !ಈ ಅಂಗಡಿಯಲ್ಲಿ ಎಲ್ಲವೂ ಸಿಗುತ್ತದೆ. ಊರ ಶೆಟ್ಟರ ಅಂಗಡಿಯಿದ್ದ ಹಾಗೆ. ಚಿಕ್ಕದೊಂದು ಗುಂಡುಸೂಜಿಯಿಂದ ಹಿಡಿದು ಏನಾದರೂ ಕೇಳಿ, ನಗುಮೊಗದ ಸೇವೆಗೆ ಸದಾ ಸಿದ್ಧ.


ಕೆಲವೊಮ್ಮೆ ಅವನು ಹೇಳಲು ತೊಡಗುವ ಹೆಸರು, ಬ್ರ್ಹಾಂಡ್ ನಮಗೆ ತಿಳಿದಿರದು. ಅವನಿಗೆ ಎಲ್ಲವೂ ತಿಳಿದಿದೆ. ವ್ಯಾಪಾರಸ್ಥ ಎಂದ ಮೇಲೆ ಅದು ಅವನ ಕರ್ತವ್ಯ ಎನ್ನಬಹುದು.ಮರೆತಿದ್ದು ನಿಜ, ಅಂಗಡಿಯವನ ಪ್ರಾಯ ಹೇಳಲಿಲ್ಲ. ಅವನಿಗೆ ಅಜಮಾಸು ಐವತ್ತಾಗಿರಬಹುದು. ಜೀವನದ ಅರ್ಧದಾರಿ ಕ್ರಮಿಸಿದ್ದಾನೆ ಎಂದುಕೊಳ್ಳೋಣ. ಅದರಲ್ಲಿ ಹತ್ತು ವರ್ಷಕ್ಕೊಂದು ಮೈಲುಗಲ್ಲು ಇಟ್ಟುಕೊಂಡರೆ ಮೊದಲ ಮೈಲುಗಲ್ಲು ಬಿಡಿ, ಕೈ ಹಿಡಿದು ನಡೆದದ್ದು. ನಂತರದ್ದು ನಡೆಯಲು ಕಲಿತದ್ದು.

(ಚಿತ್ರ : ಪ್ರವೀಣ್ ಬಣಗಿ)


ಮೂರನೆಯ ಮೈಲುಗಲ್ಲು ಮುಟ್ಟಲು ಎಷ್ಟೊಂದು ಮಂದಿ ಮಾರ್ಗದರ್ಶನವಿತ್ತವರು. ಅಜ್ಜ, ಅಪ್ಪ, ಚಿಕ್ಕಪ್ಪ, ದೊಡ್ಡಪ್ಪ, ಊರ ಹಿರಿಯರು, ಒಬ್ಬರೇ, ಇಬ್ಬರೇ-ಲೆಕ್ಕವಿಟ್ಟುಕೊಂಡದ್ದೇ ಕಡಿಮೆ. ಎಲ್ಲರ ಮುಖಗಳೂ ಜ್ಞಾಪಕ ಚಿತ್ರಶಾಲೆಯಲ್ಲಿ ಅಚ್ಚಾಗಿವೆ. ನೆನಪಿನ ಕೋಣೆಯ ಜಾಗಕ್ಕೆ ತಕ್ಕಂತೆ ಜೋಡಿಸಿಕೊಳ್ಳುವುದು ಯಾರು ಕಲಿತವರು ?ನಿಂತ ನೆಲೆಯ ಮೇಲೆ ಸಿಕ್ಕವರನ್ನೆಲ್ಲಾ ಪರಿಚಯವಾಗುತ್ತಾರೆ. ರಸ್ತೆಯಲ್ಲಿ ನಡೆದು ಹೋಗುವಾಗ ಎಡವಬೇಡ ಎಂದು ಹೇಳುವುದೂ ನಮ್ಮದೊಂದು ಸಂಸ್ಕೃತಿಯಲ್ಲವೇ? ಅದನ್ನೇ ಪಾಲಿಸಿದವರು ಹಲವರು.


ಅಂಥವರೆಲ್ಲಾ ಅಂಗಡಿಯವನ ಚಿತ್ರಶಾಲೆಯಲ್ಲಿ ಅಚ್ಚಾಗಿವೆ. ಒಂದರೆ ಮೇಲೊಂದರಂತೆ ಪೇರಿಸಿಟ್ಟುಕೊಂಡಿದ್ದಾನೆ. ಒಂದನ್ನು ವೀಕ್ಷಿಸಲು ಇನ್ನೊಂದನ್ನು ಪಕ್ಕಕ್ಕೆ ಸರಿಸಿಟ್ಟುಕೊಳ್ಳಬೇಕು. ಇಲ್ಲವೇ ನೆನಪುಗಳ ಫ್ರೇಮ್‌ನಲ್ಲಿ ಸರಣಿ ಸರಣಿಯಾಗಿ ಸುರಿದುಕೊಳ್ಳಬೇಕು. ಇಷ್ಟೆಲ್ಲದರ ನಡುವೆ ಮೂರನೇ ಮೈಲುಗಲ್ಲು ಮುಟ್ಟಿದ್ದೇ ತಿಳಿಯುವುದಿಲ್ಲ. ನಾಲ್ಕನೆಯದ್ದು ಸ್ವಲ್ಪ ತಲೆ ಎತ್ತಿ ನಡೆದದ್ದು. ಸ್ವಲ್ಪ ಸ್ವತಂತ್ರ, ಸ್ವಾಭಿಮಾನ ಎಲ್ಲವೂ ಒಟ್ಟುಗೊಂಡು ಚೆಂದಗೊಂಡಿದ್ದು. ಈಗ ಐದನೆಯದ್ದು ಮುಟ್ಟಿದ್ದಾನೆ.


ಆರನೆಯದ್ದಕ್ಕೆ ಸಜ್ಜುಗೊಳ್ಳುವ ತವಕವೇನೋ ಇದೆ. ಸ್ವಾಭಿಮಾನದಿಂದ ಸ್ವತಂತ್ರವಾಗಿಡಬಹುದಾದ ಹೆಜ್ಜೆಯನ್ನು ಊಹಿಸಿಕೊಳ್ಳುತ್ತಿದ್ದಾನೆ. ಹೇಗಿರಬಹುದು ? ಮೊದಲನೇ ಮೈಲುಗಲ್ಲು ಮುಟ್ಟಲು ಸಜ್ಜಾದಾಗ ಕೈ ಹಿಡಿದು ನಡೆಸಿದ್ದು ಅಮ್ಮ-ಅಪ್ಪ ಮನೆಯವರೆಲ್ಲಾ. ಅದೇ ಮಾದರಿಯೇ ಈಗಲೂ. ಅಲ್ಲಲ್ಲ ಎಂದುಕೊಂಡರೆ ಮತ್ತ್ಯಾವುದು ? ಎರಡ್ಹೆಜ್ಜೆ ಇಟ್ಟಾಗಲೇ ಊರಿಗೇ ಊರೇ ಸಂಭ್ರಮ ಪಟ್ಟ ಕ್ಷಣವದು. ಆ ಹೆಜ್ಜೆಯಲ್ಲಿನ ನಂಬಿಕೆಯೇ ಈಗ ಆರನೇ ಮೈಲುಗಲ್ಲುವರೆಗೆ ನಡೆಸಿದೆ. ಈಗಲೂ ಅಷ್ಟೇ.


ಅಂಗಡಿಯವ ನಿಂತ ಕ್ಷಣಗಳೆಲ್ಲಾ ಹಳೆಯದ್ದರ "ಛಾಯಾಪ್ರತಿ’ಯನ್ನು ಒರೆಸಿ ನೋಡುತ್ತಾನೆ. ಹೆಜ್ಜೆಯಲ್ಲಿನ ವಿಶ್ವಾಸದ ಬೆಳಕು ಅಷ್ಟು ದೂರಕ್ಕೆ ಹಾಯುತ್ತದೆ. ಕತ್ತಲ ದಾರಿ ದೂರ...ಎಂಟರ ಪ್ರಾಯದ ಮಗುವನ್ನು ಕಂಡು ಅನಿಸಿದ್ದೂ ಅಂಗಡಿಯವನಿಗೆ ಅದೇ. ಈತ ಜ್ಞಾಪಕಚಿತ್ರಶಾಲೆಗೆ ಹೊಕ್ಕಾಗ ಈ ಅಪ್ಪ-ಅಮ್ಮ-ಮಗಳೂ ಸಹ ಅಚ್ಚಾಗಿ ಹೋದರು. ಈ ಕ್ಷಣದಲ್ಲಿ ಮತ್ತೊಂದು ಅಂಗಡಿಯವನ ಚಿತ್ರಶಾಲೆಯ ಮುಂದೆ.
[ ... ]

Thursday, October 4, 2007

ನೋವಿನ ಸೆರೆ


ಣ್ಣನೆಯ ವಿಷಾದ.

ಕಾರು ಗುದ್ದಿದ ರಭಸಕ್ಕೆ ಅವನು ಅಷ್ಟು ದೂರ ದಬಕ್ಕನೆ ಬಿದ್ದ. ಕಾರೂ ಕೊಂಚ ಮುಂದಕ್ಕೆ ಹೋಗಿ ಗಕ್ಕನೆ ನಿಂತಿತು. ಕೆಲ ಕ್ಷಣ. ಮರುಕ್ಷಣವೇ ಮಂಗಮಾಯ. ಕತ್ತಲೆಯಲ್ಲಿ ಕರಗಿ ಹೋಗಿದ್ದು ತಿಳಿಯಲೇ ಇಲ್ಲ. ತಾರಸಿಯ ಮೇಲೆ ನಿಂತಿದ್ದ ನಾನು ನೋಡುತ್ತಲೇ ಇದ್ದೆ. ಅವನ ಮುಖದಲ್ಲಿ ಯಾವ ಚಲನೆಯೂ ಕಾಣಲಿಲ್ಲ. ರಸ್ತೆ ದೀಪ ಸಹ ಕೊಂಚ ಮಂಕೆನಿಸುತ್ತಿತ್ತು. ವಿಷಾದ ರಾಗಕ್ಕೆ ಬರೆದ ಮುನ್ನುಡಿಯಂತಿತ್ತು. ಮುಖವೂ ಸ್ಪಷ್ಟವಾಗಿ ತೋರುತ್ತಿರಲಿಲ್ಲ. ನಾನೂ ಸಹ ಯಾಂತ್ರಿಕವಾಗಿ ರಸ್ತೆ ಮೇಲೆ ಬಿದ್ದ ಅವನನ್ನೇ ದಿಟ್ಟಿಸುತ್ತಿದ್ದೆ. ಯಾವುದೋ ದ್ರವ ಅವನಿದ್ದ ಭಾಗವನ್ನು ಆವರಿಸುತ್ತಿತ್ತು. ರಕ್ತದ ಬಣ್ಣ ನನಗೆ ತೋರಲಿಲ್ಲ. ಆದರೂ ರಕ್ತ ಎಂದುಕೊಂಡೆ. ತಲೆಭಾಗದ ಹಿಂದೆಯೂ ವ್ಯಾಪಿಸಿತು. ಕೆಲ ಕ್ಷಣದಲ್ಲೇ ರಕ್ತದ ಕೆಂಪೂ ರಸ್ತೆಯ ಬಣ್ಣಕ್ಕೆ ತಿರುಗಿಕೊಂಡಿತು.


ಆ ಕ್ಷಣದಲ್ಲಿ ಅಲ್ಲಿ ಅದೊಂದೇ ಚಲನಶೀಲ. ನಾನು ಸುಮ್ಮನೆ ನಿಂತಿದ್ದೆ ; ನನಗೇ ತೋಚದೇ. ಕೆಲವೇ ಕ್ಷಣ. ಕೈ ಮೆಲ್ಲಗೆ ಅಲುಗಾಡತೊಡಗಿತು. ನಂತರ ಅವನ ತೋಳು, ತಲೆ...ಬಹಳ ನೋವಿನಿಂದ ತಲೆ ಎತ್ತಿ ನನ್ನತ್ತ ದಿಟ್ಟಿಸಿದ.ಹೆಗಲ ಮೇಲಿದ್ದ ಕ್ಯಾಮೆರಾ ಕೈಗೆ ಬಂತು. ಲೆನ್ಸ್‌ನ ಮುಖಕ್ಕೆ ಮರೆ ಮಾಡಿಕೊಂಡು ಕ್ಲಿಕ್ಕಿಸಿದೆ. ಅದೊಂದು ಅದ್ಭುತ ಲೈವ್ ಫೋಟೋಗ್ರಾಫ್ ! ಪಾಕಿಸ್ತಾನದ ಅಮೀರ್ ಸಲೀಂನ ಸಣ್ಣ ಕಥೆಯ ಅನುವಾದ. (ಚಿತ್ರ : ಪ್ರವೀಣ್ ಬಣಗಿ)
[ ... ]

ಬಿಂಬಗಳು

ಸ್ಸು ನಿಲ್ದಾಣದಲ್ಲಿ ನಿಂತವನ ಕಾಲು ಸೋತಿದೆ. ಅರ್ಧ ಗಂಟೆಯಿಂದ ಬಸ್ಸೇ ಇಲ್ಲ. ಕೂರಲೂ ಕಲ್ಲು ಬೆಂಚಿಲ್ಲ. ನೋಡುವ ದೃಶ್ಯಗಳನ್ನೇ ಎಷ್ಟೆಂದು ನೋಡುವುದು ಅನಿಸಿಬಿಟ್ಟಿದೆ. ಸಂಚಾರ ವ್ಯವಸ್ಥೆ ಬಗ್ಗೆಯೇ ಹಿಡಿಶಾಪ ಹಾಕುತ್ತಾ ನಿಂತಿದ್ದಾನೆ. ಮುಖದಲ್ಲಿ ಅಸಹನೆ ಮಡುಗಟ್ಟಿದೆ. ಯಾವುದೇ ಕ್ಷಣದಲ್ಲಿ ಸಿಡಿದು ಬಿಡಬಹುದು. ಅದಕ್ಕೆ ಈ ಕ್ಷಣ, ಇನ್ನೆರಡು ಕ್ಷಣದ ನಂತರದ ಕ್ಷಣ ಎಂಬ ಭೇದವಿಲ್ಲ. ಕೈಯಲ್ಲಿ ಹಿಡಿದ ಚಿಕ್ಕ ಕೈ ಚೀಲವೂ ಭಾರ ಎನಿಸುತ್ತಿದೆ. ಅದರೊಳಗೇನೂ ಇಲ್ಲ, ಹೆಚ್ಚೆಂದರೆ ಅಕ್ಕನ ಮಗುವಿಗೊಂದು ಬಿಸ್ಕತ್ ಪೊಟ್ಟಣ, ಅವನ ತಮ್ಮನಿಗೊಂದು ಚಿಕ್ಕ ಲಾಲಿಪಪ್, ಬಂದಾಗಲೆಲ್ಲಾ ಸದಾ ಕಾಡುವ ಪಕ್ಕದ ಮನೆಯ ನಿಮ್ಮಿಗೊಂದು ಪುಟ್ಟ ಬಣ್ಣದ ಪೆನ್ಸಿಲ್ ಬಾಕ್ಸ್, ಅಕ್ಕನಿಗೆ ಅಮ್ಮ ಕಳಿಸಿಕೊಟ್ಟ ಜೀವಲಸಿನ ಕಾಯಿ...ಇಷ್ಟೇಯೇ ?ಎರಡು ದಿನ ನಂತರ ಕೊಯ್ಯೋಣ ಎಂದು ಬಿಟ್ಟಿದ್ದ ಬಾಳೆಗೊನೆ ಮೊನ್ನೆ ಗಾಳಿಗೆ ಉರುಳಿತು. "ಹೋಗೋದ್ ಹೋಗ್ತೀಯಾ, ನಾಲ್ಕು ಚಿಪ್ಪು ಹಣ್ಣು ತಗೊಂಡು ಹೋಗ್’ ಎಂದು ಅಮ್ಮ ಕಳಿಸಿದ್ದಾಳೆ. ಒಟ್ಟೂ ಪುಟ್ಟ ಕೈ ಚೀಲದಲ್ಲಿ ಎಷ್ಟೊಂದು ಮಂದಿ !
*
ಹೇಳಿದ ಟೈಮ್‌ಗೆ ನೀನು ಬರೋದೆ ಇಲ್ಲ ಎಂಬ ದೂರು ಸದಾ ಇವನ ಮೇಲೆ. ಅದಕ್ಕಾಗಿ ಇವತ್ತು ಸ್ವಲ್ಪ ಬೇಗನೇ ನಿಲ್ದಾಣಕ್ಕೆ ಬಂದ. ಆದರೂ ಬಸ್ಸು ಬರಲಿಲ್ಲವೇ? ಮಧ್ಯಾಹ್ನ ೩ ರ ನಂತರ ನಿಲ್ದಾಣದಲ್ಲಿ ಇದೇ ತಕರಾರು. ಬರುವ ಬಸ್ಸು ಸಮಯಕ್ಕೆ ಸರಿಯಾಗಿ ಬರುವುದಿಲ್ಲ, ಬಂದ ಬಸ್ಸೂ ಕೂಡಲೇ ಹೊರಡುವುದಿಲ್ಲ. ಮನಸ್ಸಿನೊಳಗೆ ಬೇಸರವೋ ಬೇಸರ. ಅವಳ ಆರೋಪ ಇವತ್ತೂ ನಿಜವಾಯಿತಲ್ಲ ಎಂಬ ಆತಂಕ ಈತನದ್ದು. ಅಂತೂ ಬಸ್ಸು ಬಂತು. ಯಾಕೋ ಚಾಲಕನಿಗೆ ನಿಲ್ದಾಣದಲ್ಲಿದ್ದ ರಾಶಿ ಜನ ಕಂಡು ಅಸಹನೆ ಉಕ್ಕಿ ಹರಿಯಿತು. ಅದಕ್ಕೇ ಬಸ್ ತನ್ನ ಫ್ಲಾಟ್‌ಫಾರ್ಮಿಗಿಂತ ಒಂದಷ್ಟು ದೂರ ಹೋಗಿ ನಿಂತಿತು. ರಾಶಿಯ ನಡುವೆ ತೂರಿಕೊಂಡ. ನಂಬರ್ರೇ ನೋಡಲಿಲ್ಲ !*ಅತ್ತಿಂದಿತ್ತ ಶತಪಥ ಹಾಕುತ್ತಿರುವ ಈಕೆಯ ಸಮಸ್ಯೆ ಏನೆಂದು ತಿಳಿಯುತ್ತಿಲ್ಲ. ಅರ್ಧ ಗಂಟೆಯಿಂದ ಆ ಫ್ಲಾಟ್‌ಫಾರ್ಮ್‌ನಲ್ಲಿ ನಾಲ್ಕೈದು ಬಸ್ ಬಂದಿರಬಹುದು. ೧೮, ೧೫, ೩, ೬ ಹೀಗೆ. ಯಾವುದರ ಕಡೆಗೂ ತಲೆ ಎತ್ತಿ ಸಹ ನೋಡಲಿಲ್ಲ. ಪಕ್ಕದಲ್ಲೇ ಇದ್ದ ಟಿಸಿ ಬಳಿ ಹೋಗಿ ತಮ್ಮೂರಿನ ಬಸ್ ನಂಬ್ರವನ್ನೂ ಕೇಳಲಿಲ್ಲ. ಸುಮ್ಮನೆ ಮುಖ ಗಂಟಿಕ್ಕಿಕೊಂಡು ಚಡಪಡಿಸುತ್ತಿದ್ದಾಳೆ. ಮುಂಗಾರು ಮಳೆ ಸುರಿಯುವ ಕ್ಷಣದಲ್ಲೂ ಅವಳ ಮುಖ ಕೆಂಪಗೆ. ಇಷ್ಟೊತ್ತಿಗಾಗಲೇ ಅವನು ಬರಬೇಕಿತ್ತು.ಈಗ ಬಂದ ಬಸ್ ಕಂಡು ಕೊಂಚ ಉಲ್ಲಸಿತಳಾದಳು. ಇಳಿಯುವವರನ್ನೇ ಸ್ಕ್ಯಾನ್ ಮಾಡತೊಡಗಿದಳು. ಹೆಗಲ ಮೇಲೆ ಪಾಟೀಚೀಲ ಹಾಕಿಕೊಂಡ ಜೀವ ನೋಡಿ "ಬಾರೇ, ಎಷ್ಟ್ಹೊತ್ತು ? ಮಳೆ ಶುರು ಆಗೋದರೊಳಗೆ ಮನೆ ಸೇರ್‍ಕೊಳ್ಳೋಣ’ ಎಂದವಳೇ ಕೈ ಹಿಡಿದು ನಡೆಯತೊಡಗಿದಳು. ಅಷ್ಟರಲ್ಲೇ ಮುಗಿಲು ಕಟ್ಟಿ ಮಳೆ ಹನಿಯಾಗಿ ಉದುರಿಯೇ ಬಿಡಬೇಕೇ ?
*
ಇವರಿಗೆ ಬಿಡಿ ಯಾವ ಆತಂಕವೂ ಇಲ್ಲ. ಬಂದವನೇ ಬಸ್ಸನ್ನು ಲಂಗರು ಹಾಕಿದ. ಒಮ್ಮೆ ದೀರ್ಘ ನಿಟ್ಟುಸಿರುಬಿಟ್ಟು ಕೆಳಗಿಳಿದು, ಸಹೋದ್ಯೋಗಿಗಳ ಕುಶಲ ಸಮಾಚಾರ ವಿಚಾರಿಸಿ iತ್ತೆ ಏರಿ ಕುಳಿತ. ಇಂಜಿನ್ ಸ್ಟಾರ್ಟ್ ಮಾಡಲೇಕೋ ಮನಸ್ಸಿಲ್ಲ. ಆಗಲೇ ಜನರೆಲ್ಲಾ ಹತ್ತಿ ಹತ್ತು ನಿಮಿಷಗಳಾಗಿವೆ. ಎಲ್ಲರ ಮುಖದಲ್ಲೂ ಧಾವಂತ. ಆಗತಾನೇ ಬಂದ ಮತ್ತೊಬ್ಬ ಎಲ್ಲರೂ ಇಳಿಯುವ ಸ್ಥಳವನ್ನು ಕೇಳತೊಡಗಿದ. ಹಣ ನೀಡಿ ಟಿಕೇಟನ್ನೂ ಕೊಟ್ಟ. ಆದರೂ ಬಸ್ಸು ಹೊರಡಲಿಲ್ಲ. ಸಿಟ್ಟು ಬಂದವನೊಬ್ಬ "ಏನಪ್ಪಾ, ಎಷ್ಟೂ ಹೊತ್ತಂತ ನಿಲ್ಲಿಸ್ತೀಯಾ, ಬಸ್ಸಿಗೂ ಬೇಸರವಾಗೋದಿಲ್ವೇ?’ ಎಂದ. ಅದೇ ಹೊತ್ತಿಗೆ ಆರಂಭವಾದ ಉಳಿದವರ ಗುಣುಗುಣು ಆತನ ಮಾತಿಗೆ ಮೊಹರು ಒತ್ತಿದಂತಿತ್ತು. ಡ್ರೈವರ್‌ಗೂ ನಿಜವೆನಿಸಿತು. ಇಂಜಿನ್ ಸ್ಟಾರ್ಟ್ ಆಯಿತು. ಬಸ್ಸು ಮುಂದಕ್ಕೆ ಚಲಿಸಿತು.
*
ನಿಲ್ದಾಣದೊಳಗಿನ ಹೋಟೆಲ್‌ನೊಳಗೆ ಮಾಣಿಯೊಬ್ಬ ಕುಳಿತಿದ್ದ. ಗಲ್ಲ ಪೆಟ್ಟಿಗೆಯ ಮಹಾಶಯ ಕೊಟ್ಟ ಟಿಕೇಟಿಗೆಲ್ಲಾ ಈತನಿಗೆ ತಿಂಡಿ ಕೊಡುವುದೊಂದೇ ಕೆಲಸ. ದೋಸೆಭಟ್ಟ, ಕಾಫಿಭಟ್ಟ, ತಿಂಡಿ ಭಟ್ಟ, ಪ್ಲೇಟು ತೊಳೆಯುವ ಮಕ್ಕಳೆಲ್ಲರೂ ಇವನೊಬ್ಬನನ್ನು ಸುಧಾರಿಸಿದರೆ ಸಾಕು. ಆದರೆ ಇವನೋ ಊರಿಗೆ ಬಂದವರನ್ನೆಲ್ಲಾ ಸುಧಾರಿಸಬೇಕು. ದೋಸೆ ತಣ್ಣಗಾದದ್ದಕ್ಕೆ ಕಾರಣ ಹೇಳಬೇಕು. ಕಾಫಿ ಸ್ಟ್ರಾಂಗ್ ಆಗಿದ್ದಕ್ಕೆ ವಿವರಣೆ ನೀಡಿ ಸಾಗಹಾಕಬೇಕು. ಎಲ್ಲ ಸದ್ದಿಲ್ಲದೇ ನಡೆಯುವಾಗ ಒಂದು ಅನೌನ್ಸ್‌ಮೆಂಟ್ "ಕಳೆದು ಹೋದ ಇಂಥವರೊಬ್ಬರು ಸಿಕ್ಕಿದ್ದಾರೆ. ಇವರ ಪೈಕಿ ಯಾರಾದರೂ ಇದ್ದರೆ ಕಂಟ್ರೋಲ್‌ರೂಂಗೆ ಬನ್ನಿ’. ಆಗತಾನೇ ಬಿಸಿ ಮಸಾಲೆ ದೋಸೆಗೆ ಆರ್‍ಡರ್‌ ಕೊಟ್ಟವ "ಇನ್ನೊಂದು ಹಾಕಿ, ಬರ್‍ತೀನಿ’ ಎಂದವನೇ ಅತ್ತಲೇ ಹೋದ. ಇನ್ನೂ ಬಂದಿಲ್ಲ. ಮಾಣಿಗೆ ದೋಸೆ ಹೇಳಿ ಕಳೆದುಹೋದವರನ್ನು ಹುಡುಕುತ್ತಿದ್ದಾನೆ !
*
[ ... ]

ಸುತ್ತಿಗೆ ಪೆಟ್ಟು

ಮನೆ ಮುಂದೆ ಹೊಸ ಟ್ರಕ್ ನಿಂತಿತ್ತು. ತನ್ನ ಹೊಸ ಟ್ರಕ್‌ನ ಸೊಬಗು ನೋಡಲು ಹೊರಗೆ ಬಂದ ಆತ ತಬ್ಬಿಬ್ಬಾದ. ಮೂರು ವರ್ಷದ ಅವನ ಮಗ ಖುಷಿಯಿಂದ ಸುತ್ತಿಗೆ ಹಿಡಿದು ಟ್ರಕ್‌ನ ಮೇಲೆ ಸವಾರಿ ನಡೆಸಿದ್ದ. ಅವನ ಕೈಯಲ್ಲಿದ್ದ ಮೊಳೆಗಳೆಲ್ಲಾ ಟ್ರಕ್‌ಗೆ ಅಲಂಕಾರಗೊಳ್ಳುತ್ತಿದ್ದವು. ಕ್ರೋಧಕ್ಕೊಳಗಾದ ಆತ ಮಗನನ್ನು ದೂರಕ್ಕೆಳೆದ. ಸಿಟ್ಟು ತಡೆಯಲಾಗಲಿಲ್ಲ. ಅದೇ ಸುತ್ತಿಗೆಯಿಂದ ಎರಡೂ ಕೈಗಳನ್ನು ಕುಟ್ಟಿ ಬಿಟ್ಟ.

ಅಪ್ಪ ಸಹಜ ಸ್ಥಿತಿಗೆ ಮರಳಿದಾಗ ತಪ್ಪಿನ ಅರಿವಾಯಿತು. ರಕ್ತ ಸೋರುತ್ತಿದ್ದ ಮಗನ ಕೈ ಕಂಡು ಕಂಗಾಲಾದ. ಕೂಡಲೇ ಆಸ್ಪತ್ರೆಯತ್ತ ಮಗನೊಂದಿಗೆ ಧಾವಿಸಿದ. ಡಾಕ್ಟರ್ ಮೂಳೆಯನ್ನು ಸರಿಪಡಿಸಲು ಯತ್ನಿಸಿದರು. ಆದರೆ ಕಷ್ಟ. ಎರಡೂ ಕೈಗಳನ್ನು ಬ್ಯಾಂಡೇಜಿನಿಂದ ಕಟ್ಟಿದರು. ಸ್ವಲ್ಪ ಹೊತ್ತಿನ ಮೇಲೆ ಮಗುವಿಗೆ ಎಚ್ಚರವಾಯಿತು.

ಬ್ಯಾಂಡೇಜಿನಿಂದ ಬಿಗಿದ ತನ್ನ ಕೈಯನ್ನು ಕಂಡು ವ್ಯಥೆ ಪಟ್ಟ. ಬಗ್ಗಿಸಲಾರದ ಬೆರಳುಗಳು. ತೀರದ ನೋವು. ಎದುರಿದ್ದ ಅಪ್ಪನಿಗೆ ಕೈ ಮುಗಿದು "ಅಪ್ಪ, ನಿನ್ನ ಟ್ರಕ್‌ನ್ನು ಹಾಳು ಮಾಡಿದ್ದಕ್ಕೆ ಕ್ಷಮಿಸು’ ಎಂದ. ಅಪ್ಪನ ಕ್ಷಮಿಸಿದ್ದೇನೆ ಎಂಬಂತೆ ಮುಗುಳ್ನಕ್ಕ.

"ನನ್ನ ಬೆರಳುಗಳು ಮೊದಲಿನಿಂತೆಯೇ ಆಗುವವೇ ಅಪ್ಪಾ?’ ಎಂದು ಮಗು ಮುಗ್ಧತೆಯಿಂದಲೇ ಪ್ರಶ್ನಿಸಿದ. ಅಪ್ಪ ಮನೆಗೆ ಹೋದವನೇ ನೇಣು ಹಾಕಿಕೊಂಡ.

ಇಂಗ್ಲಿಷ್ ಕಥೆಯೊಂದರ ಅನುವಾದ

[ ... ]