Thursday, June 4, 2009

ವಿಶ್ವವಿದ್ಯಾಲಯಗಳು ಬ್ಲಾಗ್ ಗಳನ್ನು ಹೀಗೆ ಬಳಸಬೇಕು

ಭಯೋತ್ಪಾದನೆ ನಮ್ಮೆದುರಿನ ಜ್ವಲಂತ ಸಮಸ್ಯೆ. ಅದು ಯಾವ ಜಾತಿ, ಮತವನ್ನೂ ಬಿಡದು. ಮೂಲಭೂತವಾದಿತನಕ್ಕೆ ಯಾವುದರ ಮೇಲೂ ಪ್ರೀತಿ ಇಲ್ಲ. ಇಷ್ಟಾದರೆ ಪರವಾಗಿಲ್ಲ. ಆದರೆ ವಿನಾಕಾರಣ ದ್ವೇಷವಿದೆ. ಇಂದಿನ ಮೂಲಭೂತವಾದಿಗಳು ಯುವಜನರಲ್ಲಿ ಹುಟ್ಟು ಹಾಕುತ್ತಿರುವುದು ವಿನಾಕಾರಣ ಪ್ರೀತಿಯಲ್ಲ ; ದ್ವೇಷವನ್ನು. ಹಾಗಾಗಿ ಭಯೋತ್ಪಾದನೆ ಮನೆ ಬಾಗಿಲಿಗೇ, ಹೆಚ್ಚೆಂದರೆ ಮನೆಯೊಳಗೆ ಬಂದು ಕುಳಿತಿದೆ ಎಂದರೂ ಅಚ್ಚರಿಯಿಲ್ಲ.
 
ಇಂಥ ಸಂದರ್ಭದಲ್ಲಿ ಸರಕಾರವೊಂದು ಆ ಕುರಿತು ಯುವಜನರಲ್ಲಿ ಜಾಗೃತಿಯ ದೀಪ ಹಚ್ಚುವ ಕೆಲಸ ಆರಂಭಿಸಿದೆ. ಅದಕ್ಕೆ ನಾವು ಮೆಚ್ಚುಗೆ ವ್ಯಕ್ತಪಡಿಸಬೇಕು. ಇಲ್ಲಿ ಸರಕಾರ ಯಾವ ಪಕ್ಷದ್ದು, ಯಾವ ನೆಲೆಯದ್ದು ಎಂದೆಲ್ಲಾ ಚಿಂತಿಸಬೇಕಿಲ್ಲ ಎಂಬುದು ನನ್ನ ಅನಿಸಿಕೆ. ಉನ್ನತ ಶಿಕ್ಷಣ ಸಚಿವರು ಆರಂಭಿಸಿರುವ ಜಾಗೃತಿ ಜಾಥಾಕ್ಕೆ ಎಲ್ಲರೂ ಸ್ಪಂದಿಸಲೇಬೇಕು. ಇಲ್ಲವಾದರೆ ನಮ್ಮ ಮನೆಯಲ್ಲೇ ಭಯೋತ್ಪಾದಕರು ಹುಟ್ಟಿಕೊಳ್ಳುವ ಆತಂಕವಿದೆ. ಇದು ಕೆಲವೊಮ್ಮೆ ತೀರಾ ವಿಷಯದ ವೈಭವೀಕರಣವೆನಿಸಿದರೂ, ಅದು ವಾಸ್ತವದಿಂದ ದೂರವಿಲ್ಲ.

ಸಚಿವರು ನಮ್ಮ ವಿಶ್ವವಿದ್ಯಾಲಯಗಳತ್ತ ಕಣ್ಣು ಹೊರಳಿಸಬೇಕು. ಅಲ್ಲಿರುವ ಜಾತೀಯತೆ, ಸೋಮಾರಿತನ, ಭ್ರಷ್ಟ ವ್ಯವಸ್ಥೆ, ಬೋಧಕ ಸಿಬ್ಬಂದಿಯ ಬೌದ್ಧಿಕ ದಿವಾಳಿತನ-ಹೀಗೆ ಜಡ್ಡುಗಟ್ಟಿದ ವ್ಯವಸ್ಥೆಗೆ ಔಷಧ ಹುಡುಕಬೇಕು. ಕೆಲವೊಮ್ಮೆ ಔಷಧ ಹುಡುಕಲು ಹೋಗಿ ಅಲ್ಲಿಯೇ ಜತೆಗೂಡಿಬಿಡುವ ಸಾಧ್ಯತೆಯೂ ಇರುತ್ತದೆ. ವ್ಯವಸ್ಥೆಯೊಂದಿಗೆ  ರಾಜಿ ಆಗುವ ಪ್ರಯತ್ನ ಸರಿಯಲ್ಲ. ಆದರೆ ವಿವಿ ಗಳನ್ನು ಒಂದು ಏಕಸೂತ್ರಕ್ಕೆ ತರುವ ಅಗತ್ಯವಂತೂ ಇದ್ದೇ ಇದೆ. 

ಇವತ್ತು ವಿಶ್ವವಿದ್ಯಾಲಯಗಳು ಕೇವಲ ಪದವಿ ನೀಡುವ ಕಾರ್ಖಾನೆಗಳೇ ಹೊರತು ಜ್ಞಾನಕೇಂದ್ರವಾಗಿ ಉಳಿದಿಲ್ಲ. ಪ್ರಾಧ್ಯಾಪಕರ‍್ಯಾರೂ ತಮ್ಮ ಪ್ರಗತಿ (ಶೈಕ್ಷಣಿಕವಾಗಿ ಅಲ್ಲ, ಲೌಕಿಕವಾಗಿ) ಬಗ್ಗೆ ಗಮನಹರಿಸಿದ್ದಾರೆಯೇ ಹೊರತು ವಿದ್ಯಾರ್ಥಿಗಳ ಬಗ್ಗೆಯಂತೂ ಅಲ್ಲ. ಬಹಳಷ್ಟು ವಿವಿ ಗಳಲ್ಲಿ ವಿದ್ಯಾರ್ಥಿಗಳು ಬೋಧಕರನ್ನು ಪಾಠಕ್ಕಾಗಿ ಹುಡುಕಿಕೊಂಡು ಹೋಗುವ ಸ್ಥಿತಿಯಿದೆ. ವಾರಕ್ಕೆ ೧೬ ತರಗತಿಗಳು ತೆಗೆದುಕೊಳ್ಳಬೇಕಾದ ಉಪನ್ಯಾಸಕರು ಕೆಲವೆಡೆ ಮೂರರಿಂದ ನಾಲ್ಕು ತರಗತಿಗಳಿಗೆ ಸೋತು ಹೋಗುತ್ತಿದ್ದಾರೆ. ಇನ್ನು ಪ್ರಾಧ್ಯಾಕರ ಕಥೆ ಕೇಳಲೇಬೇಡಿ. ಸಂಬಂಧಪಟ್ಟ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಇಂಥವರ ವಿರುದ್ಧ ಕ್ರಮ ಕೈಗೊಳ್ಳಲು ಒಂದು ಥರದ ಮುಜುಗರ. ಕಾರಣ, ಅವರೂ ಅಂಥವರ ಮಧ್ಯೆಯೇ ಬೆಳೆದು ಬಂದಿರುತ್ತಾರೆ. ಯಾವುದೋ ಅದೃಷ್ಟದ ಬಾಗಿಲು ತೆರೆದು ಕುಲಪತಿಗಳಾಗಿರುತ್ತಾರೆ. ಹಾಗಾಗಿ ಅವರೂ ಏನೂ ಮಾಡಲಾಗದ ಸ್ಥಿತಿಯಲ್ಲಿರುತ್ತಾರೆ.

ಒಟ್ಟೂ ಇಡೀ ವಿಶ್ವವಿದ್ಯಾಲಯದ ವ್ಯವಸ್ಥೆಗೇ ಸಂವಹನ ಕೊರತೆಯ ಭೂತ ಬಡಿದಿದೆ. ಅದನ್ನೀಗಲೇ ಓಡಿಸದಿದ್ದರೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಈ ವ್ಯವಸ್ಥೆಯನ್ನೇ ಅಪನಂಬಿಕೆಯಿಂದ ನೋಡಬಲ್ಲರು. ಆದ ಕಾರಣ ರಾಜಕಾರಣ ಮಾಡದೇ ಎಚ್ಚೆತ್ತುಕೊಳ್ಳಬೇಕು. 

ನಮ್ಮ ಪ್ರಾಧ್ಯಾಪಕರು, ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಸಿಗಬೇಕೆಂದರೆ ದೊಡ್ಡ ಆಂದೋಲನ ಮಾಡಬೇಕಿಲ್ಲ. ಲಭ್ಯವಿರುವ ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಂಡರೆ ಸಾಕು. ನನ್ನ ಅನಿಸಿಕೆಯಲ್ಲಿ ಮಾಹಿತಿ ತಂತ್ರಜ್ಞಾನದ ಸದ್ಬಳಕೆ ಸಂವಹನ ಕೊರತೆಯ ಬಹುಪಾಲನ್ನು ನಿವಾರಿಸಬಲ್ಲದು. ಅದರಲ್ಲೂ ದೂರಶಿಕ್ಷಣ ಜನಪ್ರಿಯವಾಗುತ್ತಿರುವ ಸಂದರ್ಭದಲ್ಲಿ ಎಲ್ಲ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳು  ತಮ್ಮ ವಿದ್ಯಾರ್ಥಿಗಳೊಂದಿಗೆ ನಿರಂತರ ಸಂಪರ್ಕ ಸಾಧಿಸಲು ಇದು ಹೆಚ್ಚು ಉಪಯುಕ್ತವಾಗಬಲ್ಲದು.
ಉದಾಹರಣೆ ಹೀಗೆ ಮಾಡಿ ನೋಡಿ. ಇಂದು ಬ್ಲಾಗ್ ಪ್ರಪಂಚ ಬಹು ವಿಸ್ತಾರವಾಗಿ ಬೆಳೆದಿದೆ. ಕನ್ನಡದಲ್ಲೂ ದೊಡ್ಡ ಮಟ್ಟದಲ್ಲಿ ಫಸಲು ನೀಡುವ ಕಾಲ ಕೂಡಿ ಬರುತ್ತಿದೆ. ಇದಕ್ಕೆ ಕಾಸಿಲ್ಲ, ಕಷ್ಟವಿಲ್ಲ. ನಮ್ಮ ಮುಂದೆ ಹರಿದು ಹೋಗುವ ತಂತ್ರಜ್ಞಾನವನ್ನು ನಮ್ಮ ಬೊಗಸೆಯಲ್ಲಿ ತುಂಬಿಸಿಕೊಂಡು ಸದ್ಬಳಕೆ ಮಾಡಿಕೊಳ್ಳುವುದಷ್ಟೆ ಇದು. ಬ್ಲಾಗ್ ಮೂಲಕ ಸಾಧ್ಯವಾಗಬಹುದಾದದ್ದು ಬಹಳಷ್ಟಿದೆ. ಒಂದು ಬ್ಲಾಗ್ ಸಾವಿರಾರು ಮಂದಿಗೆ ಏಕಕಾಲದಲ್ಲಿ ಉಪನ್ಯಾಸಕನಾಗಿ, ಪ್ರಾಧ್ಯಾಪಕನಾಗಿ ಕೆಲಸ ಮಾಡಬಲ್ಲದು. ಆನ್‌ಲೈನ್ ಕಲಿಕೆ ಜನಪ್ರಿಯವಾಗುತ್ತಿರುವ ಹೊತ್ತಿನಲ್ಲಿ ಬ್ಲಾಗ್ ಪ್ರಪಂಚವನ್ನು ಉನ್ನತ ಶಿಕ್ಷಣಕ್ಕೆ ರಚನಾತ್ಮಕವಾಗಿ ಬಳಸಿಕೊಳ್ಳಲು ಉನ್ನತ ಶಿಕ್ಷಣ ಇಲಾಖೆ  ನಿರ್ಧರಿಸಬೇಕು.

ಬ್ಲಾಗ್‌ನಿಂದ ಏನೆಲ್ಲಾ ಆಗಬಹುದೆಂಬ ಕುತೂಹಲ ಸಹಜ. ಒಂದು ವಿವಿ ಯ ಯಾವುದೇ ವಿಭಾಗವನ್ನು ತೆಗೆದುಕೊಳ್ಳಿ. ಅಲ್ಲಿರುವ ಎರಡೂ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳು ಅಂದಾಜು ೬೦ . ಪ್ರಸ್ತುತ ಇರುವ ಪದ್ಧತಿಯಲ್ಲಿ ಪ್ರಾಧ್ಯಾಪಕರು ಕ್ಯಾಂಪಸ್ಸಿನಲ್ಲಿ ಅಥವಾ ಅವರ ಕೋಣೆಯಲ್ಲಿ ಹಾಜರಿದ್ದರೆ ಏನಾದರೂ ಚರ್ಚಿಸಬಹುದು. ಅಂಥ ಅವಕಾಶಗಳೇ ಕಡಿಮೆಯಾಗಿವೆ. ಕಾರಣ, ನಮ್ಮ ಬಹುತೇಕ ಪ್ರಾಧ್ಯಾಪಕರು ತರಗತಿಗೆ ಸರಿಯಾಗಿ ಬಂದು ಮನೆಗೆ ಹೋಗುವವರೇ ಹೆಚ್ಚು. ಅಂಥ ಸಂದರ್ಭದಲ್ಲಿ ವಿದ್ಯಾರ್ಥಿ ತನ್ನ ಪ್ರತಿ ಅನುಮಾನಗಳನ್ನೂ ಬಗೆಹರಿಸಿಕೊಳ್ಳಲು ದೂರವಾಣಿಯನ್ನು ಬಳಸಬೇಕು. ಈ ವಿಧಾನವನ್ನೂ ಟೀಕಿಸುವ ಕೆಲ ಪ್ರಾಧ್ಯಾಪಕರು, ‘ಏನಿದ್ದರೂ ನಿಮ್ಮ ಅನುಮಾನಗಳನ್ನು ತರಗತಿಗಳಲ್ಲಿಯೇ ಬಗೆಹರಿಸಿಕೊಳ್ಳಿ’ ಎನ್ನುತ್ತಾರೆ. ಅದು ಕಷ್ಟ ಸಾಧ್ಯವಾದದ್ದು. ಇದಕ್ಕೆ ಬ್ಲಾಗ್ ನ್ನು ಬಳಸಬಹುದಾದ ಬಗೆ ಹೀಗಿದೆ.

ಪ್ರತಿ ವಿಭಾಗದ್ದೂ ಒಂದು ಬ್ಲಾಗ್ ನ್ನು ರೂಪಿಸಬೇಕು. ಇದು ಅತ್ಯಂತ ಸುಲಭವಾದ ವಿಧಾನ. ಇಂಟರ್‌ನೆಟ್‌ನಲ್ಲಿ ಬ್ಲಾಗ್ ರೂಪಿಸಲು ಬೇಕಾದಷ್ಟು ತಾಣಗಳಿವೆ (ಸೈಟ್). ಐದು ನಿಮಿಷದಲ್ಲಿ ಒಂದು ಬ್ಲಾಗ್ ಸಿದ್ಧ. ಅದರಲ್ಲಿ ಆ ವಿಷಯಕ್ಕೆ ಸಂಬಂಧಿಸಿದ (ಉದಾಹರಣೆಗೆ ಪತ್ರಿಕೋದ್ಯಮ ವಿಭಾಗದದ್ದಾದರೆ ಆ ವಿಷಯದ್ದು) ಲೇಖನಗಳನ್ನು ಬರೆಯಬೇಕು. ವಿಭಾಗದ ಮುಖ್ಯಸ್ಥ ಸೇರಿದಂತೆ ಎಲ್ಲರಿಗೂ ಅದು ಲಭ್ಯ (ಆಕ್ಸೆಸ್) ಇರಬೇಕು. ಪಠ್ಯದ್ದಿರಲಿ, ಪಠ್ಯೇತರವಿರಲಿ, ಪರವಾಗಿಲ್ಲ. ಒಟ್ಟೂ ಆ ವಿಷಯಕ್ಕೆ ಸಂಬಂಧಿಸಿದ್ದು. ಇದನ್ನು ಮತ್ತೆಲ್ಲೋ ಇರುವ ವಿದ್ಯಾರ್ಥಿ ಇಂಟರ್‌ನೆಟ್‌ನಲ್ಲಿ ಆ ಪುಟವನ್ನು ನೋಡು ವ ಮೂಲಕ ತನ್ನ ಅನುಮಾನಗಳನ್ನು ಬಗೆಹರಿಸಿಕೊಳ್ಳುತ್ತಾನೆ. ಒಂದುವೇಳೆ, ಹೊಸ ಅನುಮಾನಗಳಿದ್ದರೆ ಅದರಲ್ಲಿ ‘ಕಾಮೆಂಟ್’ ರೂಪದಲ್ಲಿ ಕೇಳುತ್ತಾನೆ. ಅದಕ್ಕೆ ನಂತರ ಪ್ರಾಧ್ಯಾಪಕ ಉತ್ತರಿಸಬಹುದು. ಇದರಿಂದ ವಿದ್ಯಾರ್ಥಿಗಳು ಪ್ರಾಧ್ಯಾಪಕರನ್ನು ಕಾಯಬೇಕಿಲ್ಲ.

ಅಷ್ಟೇ ಅಲ್ಲ. ಈ ವಿಷಯವನ್ನು ಜಗತ್ತಿನ ಯಾವುದೇ ಭಾಗದಲ್ಲಿ ಇರುವವರಾದರೂ ನೋಡಬಹುದು. ಜತೆಗೆ ಬೇರೆ ಭಾಗದಲ್ಲಿರುವ ತಜ್ಞರೂ ವಿದ್ಯಾರ್ಥಿಯ ಅನುಮಾನಗಳನ್ನು ‘ಕಾಮೆಂಟ್’ ಮೂಲಕವೇ ಬಗೆಹರಿಸಬಹುದು. ಇವತ್ತು, ಉಪಗ್ರಹದ ಮೂಲಕ ನೀಡುತ್ತಿರುವ ಶಿಕ್ಷಣ ಇದೇ ಮಾದರಿಯದ್ದು. ಇದು ವಿದ್ಯಾರ್ಥಿ ಮುಖಿಯಾದ ಶಿಕ್ಷಣ. ಇದಕ್ಕೆ ವಿಶೇಷ ಸೌಲಭ್ಯಗಳೇನೂ ಬೇಕಾಗಿಲ್ಲ. ಇರುವುದನ್ನೇ ಬಳಸಿಕೊಳ್ಳಬೇಕು.

ಎಲ್ಲ ವಿಭಾಗಗಳಲ್ಲೂ ಕಂಪ್ಯೂಟರ್ ಮತ್ತು ಇಂಟರ್‌ನೆಟ್ ಸಂಪರ್ಕ ಇದ್ದೇ ಇದೆ. ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿ ಲಭ್ಯವಿರುವ ಇಂಟರ್‌ನೆಟ್ ಬಳಸಿಕೊಂಡು ಈ ವಿಧಾನದಿಂದ ಪ್ರಯೋಜನ ಪಡೆಯಬಹುದು. ಒಂದುವೇಳೆ ಪ್ರಾಧ್ಯಾಪಕರು, ಮನೆಯಿಂದಲೇ ತಮ್ಮ ಕಂಪ್ಯೂಟರ್ ಮೂಲಕ ಸಮಸ್ಯೆಗಳನ್ನು ಬಗೆಹರಿಸಬಹುದು. ಅದರಲ್ಲೂ ಮಾನವಿಕ ವಿಷಯಗಳಲ್ಲಿ ಈ ವಿಧಾನ ಅತ್ಯಂತ ಪ್ರಯೋಜನಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ.

ಪ್ರಾಧ್ಯಾಪಕರು ತಮ್ಮ ದಿನಚರಿಯಲ್ಲಿ ಕನಿಷ್ಠ ಒಂದು ಗಂಟೆ ಇದಕ್ಕೆ ಮೀಸಲಿಡಬೇಕು. ತಮ್ಮ ವಿಷಯಕ್ಕೆ ಸಂಬಂಧಿಸಿದ ಹೊಸ ಹೊಸ ಸಂಗತಿಗಳತ್ತ ಗಮನಹರಿಸುತ್ತಿರಬೇಕು. ಅದಕ್ಕಿಂತಲೂ ಹೆಚ್ಚಾಗಿ ಪ್ರಾಧ್ಯಾಪಕರು, ಉಪನ್ಯಾಸಕರು ಮನಸ್ಸು ಮಾಡಬೇಕು. ಯಾವುದಾದರೂ ಕುಲಪತಿಗಳೇ ಇಂಥದೊಂದು ಕಾರ್ಯವನ್ನು ಆರಂಭಿಸಬೇಕು. ತಮ್ಮದೊಂದು ಬ್ಲಾಗ್ ಮಾಡಿ, ಅದರಲ್ಲಿ ದೂರು ದುಮ್ಮಾನ, ಸಮಸ್ಯೆಗಳನ್ನು ತಿಳಿದುಕೊಂಡು, ನಿವಾರಿಸಬಹುದು. ಅದು ಉಳಿದವರಿಗೆ ಹಾಕಿಕೊಡುವ ಮಾರ್ಗವೂ ಹೌದು. 
ಬ್ಲಾಗ್‌ನ್ನು ದುರುಪಯೋಗ ಪಡಿಸಿಕೊಳ್ಳುವವರಿದ್ದಾರೆ ಎಂಬ ಟೀಕೆ ಇದ್ದೇ ಇದೆ. ನಮ್ಮ ವ್ಯವಸ್ಥೆಯ ಯಾವ ವಿಧಾನದಲ್ಲಿ ಇಂಥದೊಂದು ದುರ್ಬಳಕೆ ಇಲ್ಲ. ಎಲ್ಲದರಲ್ಲೂ ಇದ್ದೇ ಇದೆ. ಆದರೆ ಹಾಗೆ ದುರ್ಬಳಕೆ ಆಗುವ ಪ್ರಮಾಣ ಶೇ. ೨೦ ರಷ್ಟು. ಅದೇ ಕಾರಣಕ್ಕೆ ಶೇ. ೮೦ ರಷ್ಟು ಭಾಗಕ್ಕೆ ಆಗುವ ಪ್ರಯೋಜನವನ್ನು ಕಡೆಗಣಿಸುವುದು ಸರಿಯಲ್ಲ. ಹೀಗೇಯೇ ಲಭ್ಯವಿರುವ ಇಂಟರ್‌ನೆಟ್ ಚಾಟಿಂಗ್ ನ್ನೂ ಆನ್‌ಲೈನ್ ಶಿಕ್ಷಣ ಮಾದರಿಯಲ್ಲಿ ಬಳಸಬಹುದು. 

ನನಗನ್ನಿಸುವ ಸಂಗತಿಯೆಂದರೆ ಮಾನ್ಯ ಉನ್ನತ ಶಿಕ್ಷಣ ಸಚಿವರೇ, ಇದರತ್ತ ಗಮನಹರಿಸಿ ಕ್ರಿಯಾಶೀಲವಾಗಬೇಕು. ಎಲ್ಲರಿಗೂ ಇಂಥದೊಂದು ಸಾಧ್ಯತೆಯನ್ನು ಮನವರಿಕೆ ಮಾಡಿಕೊಡಬೇಕು. ತಮ್ಮದೇ ಒಂದು ಬ್ಲಾಗ್ ರೂಪಿಸಿ, ಉನ್ನತ ಶಿಕ್ಷಣದ ಸಮಸ್ಯೆಗಳನ್ನು ತಿಳಿದುಕೊಂಡು ಪರಿಹಾರ ಕಂಡುಹಿಡಿಯುವತ್ತ ಕಾರ್ಯೋನ್ಮುಖರಾದರೆ ಉಳಿದವರಿಗೆ ಹಾಕಿಕೊಡುವ ಮಾರ್ಗವೆನ್ನಬಹುದು. ಅದೂ ಸಹ ಉನ್ನತ ಶಿಕ್ಷಣವನ್ನು ಸಾರ್ವಕಾಲಿಕ, ಸಾರ್ವತ್ರಿಕಗೊಳಿಸುವತ್ತ ಇಡುವ ದಿಟ್ಟ ಹೆಜ್ಜೆಯೇ.

Friday, May 1, 2009

ಮತ ಹಾಕದಿದ್ದರೂ ಅಯೋಗ್ಯನನ್ನು ಸಮರ್ಥಿಸಿದಂತೆ

ಮತದಾನ !
ಕ್ಷೇತ್ರದಲ್ಲಿ ಎಲ್ಲ ಅಭ್ಯರ್ಥಿಗಳೂ ಒಳ್ಳೆಯವರಿದ್ದಾರಾ ? ಒಂದುವೇಳೆ ಒಬ್ಬರಾದರೂ ನಮ್ಮ ಮತವನ್ನು ಪಡೆಯುವಷ್ಟು ಯೋಗ್ಯರಿದ್ದಾರಾ? ಅವರಿಗೆ ಆ ಅರ್ಹತೆ ಇದೆಯಾ? ಇಂಥವರನ್ನು ಚುನಾಯಿಸಿ ಕಳುಹಿಸಿ ಅವರಿಂದ ನಮ್ಮ ದೇಶವನ್ನು ಆಳಿಸಿಕೊಳ್ಳಬೇಕೇ? ಇಂಥ ಅಪ್ರಾಮಾಣಿಕರಿಗೆ ಮತ ಹಾಕುವ ಮೂಲಕ ಅವರ ಎಲ್ಲ ಅಕ್ರಮಗಳನ್ನು ಒಪ್ಪಿಕೊಂಡಂತೆ ಅಗುವುದಿಲ್ಲವೇ? ಅವನು ಮತ್ತಷ್ಟು ಅಕ್ರಮಗಳನ್ನು ಎಸಗಲು ನಾವೇ ಅವನಿಗೆ ಅಧಿಕಾರ ಕೊಟ್ಟಂತೆ ಆಗುವುದಿಲ್ಲವೇ ? ...
ಹೀಗೆ ಸಾವಿರಾರು ಪ್ರಶ್ನೆಗಳು ಉದ್ಭವಿಸುವುದು ಸಹಜ. ಒಂದು ಮತವನ್ನು ಹಾಕುವ ಮುನ್ನ ಎಷ್ಟೆಲ್ಲಾ ಯೋಚಿಸುತ್ತೇವೆ. ಅದರ ಬೆನ್ನಿಗೇ ‘ಇಲ್ಲ...ನನ್ನ ಮತ ಅಯೋಗ್ಯರ ಪಾಲಾಗಬಾರದು’ ಎಂದು ನಿರ್ಧರಿಸಿ ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳುತ್ತೇವೆ. 
ಯಾರೋ ಒಬ್ಬ ಅಭ್ಯರ್ಥಿ ಗೆಲ್ಲುತ್ತಾನೆ. ನಾವೆಲ್ಲಾ ಎಣಿಸಿದಂತೆಯೇ ಮನೆ-ಆಸ್ತಿ ಮಾಡಿಕೊಳ್ಳುತ್ತಾನೆ. ತನ್ನ ಸಂಸಾರವನ್ನು ಗಟ್ಟಿ ಮಾಡಿಕೊಳ್ಳುತ್ತಾನೆ. ಎಲ್ಲವೂ ನಮ್ಮ ಕಣ್ಣೆದುರಿಗೆ ನಡೆಯುತ್ತದೆ. ನಮಗೆ ...ಸತ್ತು ಹೋಗಲಿ, ಅವನನ್ನು ಏನು ಕೇಳೋದು ? ರಾಜಕೀಯಕ್ಕೆ ಬರೋದೇ ಹಣ ಮಾಡಿಕೊಳ್ಳೋಕೆ,.. ಮೊದಲು ಹಣ ಮಾಡಿಕೊಳ್ಳೋಕೆ ಬರ್‍ತಾರೆ, ನಂತರ ಮಾಡಿದ ಆಸ್ತಿ ಉಳಿಸಿಕೊಳ್ಳೋಕೆ ರಾಜಕೀಯದಲ್ಲಿ ಇರ್ತಾರೆ.

ಹೀಗೆಲ್ಲಾ ಕಾರಣ ಹೇಳಿ ನಮ್ಮನ್ನು ನಾವು ಸಮಾಧಾನ ಪಡಿಸಿಕೊಳ್ಳುತ್ತೇವೆ. ಒಟ್ಟಿನಲ್ಲಿ, ಯಾರು ಏನೇ ಹೇಳಲಿ. ನಾನು ಅವನನ್ನು ನನ್ನ ಮತ ಹಾಕಿ ಸಮರ್ಥಿಸಿಲ್ಲ. ಹಾಗಾಗಿ ಅವನ ತಪ್ಪಿನಲ್ಲಿ ನನ್ನ ಪಾಲುದಾರಿಕೆ ಇಲ್ಲ ಎಂಬುದು ನಾವು ಕಂಡುಕೊಳ್ಳುವ ಸಮಾಧಾನದ ಉತ್ತರ. ಬಹಳ ತಮಾಷೆಯೆಂದರೆ ಅದೇ. ಅಂಥದೊಂದು ಸಮಾಧಾನ ಕಂಡುಕೊಳ್ಳುವುದು. 

ರಾಜ್ಯದಲ್ಲಿ ಈ ಬಾರಿಯ ಸಂಸತ್ ಚುನಾವಣೆಯಲ್ಲಿ ಮೊದಲ ಹಂತದ ಮತದಾನದಲ್ಲಿ ಆದದ್ದು ಶೇ. 53 ರಷ್ಟು ಮತದಾನ. ಇದನ್ನು ವಿಶ್ಲೇಷಿಸುವುದಾದರೆ  ಕಳೆದ ಸಾಲಿಗಿಂತ ಬಹುತೇಕ ಕ್ಷೇತ್ರಗಳಲ್ಲಿ ಕಡಿಮೆ ಮತದಾನವಾಗಿದೆ. ಕೆಲ ಕ್ಷೇತ್ರಗಳಲ್ಲಿ ಒಂದೆರಡು ಅಂಕಿ ಹೆಚ್ಚಾಗಿರಹುದೇ ಹೊರತು ಉತ್ಸಾಹ ಮೂಡಿಸುವಷ್ಟಲ್ಲ.

ಈ ಇಳಿಕೆಯತ್ತ ಸಾಗುತ್ತಿರುವ ಟ್ರೆಂಡ್ ಹೊಸದೇನಲ್ಲ. ಕಳೆದ ಮೂರು ಚುನಾವಣೆಗಳಿಗಿಂದ ಮತದಾನದ ಪ್ರಮಾಣ ಕಡಿಮೆಯಾಗುತ್ತಿದೆ. ವಿಪರ್ಯಾಸವೆಂದರೆ, ಕೇಂದ್ರ ಚುನಾವಣಾ ಆಯೋಗ ಮುಕ್ತ ಮತದಾನಕ್ಕೆ ಪೂರಕ ವಾತಾವರಣವನ್ನು ಕಲ್ಪಿಸಲು ಪ್ರಯತ್ನಿಸುತ್ತಿದೆ. ಅದು ಬಹುಪಾಲು ಯಶಸ್ವಿಯಾಗಿದೆ. ಆದರೆ ನಾವು ಮಾತ್ರ ಇನ್ನೂ ಹಳೆಯದ್ದನ್ನೇ ಶಪಿಸಿಕೊಂಡು...ಮತದಾನದ ದಿನದಂದು ಸಂಸಾರ ಸಮೇತ ಬೆಳಗ್ಗೆ ಒಂದು ಹೋಟೆಲಿನಲ್ಲಿ ತಿಂಡಿ ತಿಂದು, ಎಲ್ಲಾದರೂ ಸುಮ್ಮನೆ ತಿರುಗಿ..ಹೊರಗೇ ಊಟ ಮುಗಿಸಿ..ರಾತ್ರಿ ಮನೆಗೆ ಬಂದು ಮರುದಿನಕ್ಕೆ ಟಿಫಿನ್ ಕ್ಯಾರಿಯರ್ ಒರೆಸಿ ಇಡುತ್ತೇವೆ. ಇನ್ನು ಕೆಲವರು ಮನೆಯಲ್ಲೇ ಇದ್ದು...ನಿದ್ದೆ ತೆಗೆದು ತಂಪಾದ ಸಂಜೆಯಲ್ಲಿ ಟಿ.ವಿ. ನ್ಯೂಸ್ ನೋಡುತ್ತಾ...ಕೋಡುಬಳೆ ತಿನ್ನುತ್ತಾ...‘ಏನ್ರೀ...ಈ ಸಾರೀನೂ ಕಡಿಮೆನಾ ವೋಟಿಂಗಾ?’ ಎಂದು ಪ್ರಶ್ನೆ ಕೇಳಿಕೊಂಡು ಸುಮ್ಮನಾಗುತ್ತಿದ್ದೇವೆ. ಗಮನವಿಡಬೇಕಾದ ಸಂಗತಿ ನಮಗಿನ್ನೂ ತಿಳಿದಿಲ್ಲ. 

ಕಳೆದ ಮೂರ್ನಾಲ್ಕು ಚುನಾವಣೆಗಳಿಂದ ನಮ್ಮಲ್ಲಿ ಮುಕ್ತ ಮತ್ತು ಪಾರದರ್ಶಕ ಚುನಾವಣೆಯತ್ತ ಚುನಾವಣಾ ಆಯೋಗ ಹಲವು ಹೆಜ್ಜೆಗಳನ್ನು ಇಟ್ಟಿದೆ. ಅದೆಲ್ಲವೂ ಜನರು ಬಂದು ಮತ ಹಾಕಲಿ ಎಂಬುದಕ್ಕಾಗಿ. ಆದರೆ, ನಾವೆಲ್ಲಾ ಇನ್ನೂ ಹಳೇ ಕಥೆ ಹೇಳುತ್ತಾ ಕುಳಿತಿದ್ದೇವೆ. ಆ ಮೂಲಕ ಚುನಾವಣಾ ಆಯೋಗ ಕೈಗೊಂಡ ಒಳ್ಳೆಯ ಕ್ರಮಗಳನ್ನು ಬೆಂಬಲಿಸುವುದನ್ನು ಮರೆತಿದ್ದೇವೆ. ಇದರಿಂದಾಗುತ್ತಿರುವ ಪರಿಣಾಮವೇನು ಗೊತ್ತೇ ?

ರಾಜಕೀಯ ಪಕ್ಷಗಳು ‘ಮತದಾನ ಪ್ರಮಾಣ ಕುಸಿತಕ್ಕೆ ಆಯೋಗದ ಬಿಗಿ ಕ್ರಮಗಳು ಕಾರಣ’ ಎಂದು ಹೇಳತೊಡಗಿವೆ. ಇಂಥದೊಂದು ಆರೋಪಕ್ಕೆ ನಾವೇ, ಸಮಾಜ ಒಳ್ಳೆಯದಾಗಬೇಕೆಂದು ಹೇಳುವವರೇ ಕಾರಣವಾಗುತ್ತಿರುವುದು ಎಷ್ಟು ವಿಪರ್ಯಾಸ. 

ಸ್ವಲ್ಪ ಹೊತ್ತು ಹಿಂದಕ್ಕೆ ಹೋಗಿ ಬರೋಣ. 1990 ರಿಂದ 19996 ರವರೆಗೆ ಟಿ.ಎನ್. ಶೇಷನ್ ಕೇಂದ್ರ ಮುಖ್ಯ ಚುನಾವಣಾಧಿಕಾರಿಯಾದರು. ಅಲ್ಲಿಂದ ಚುನಾವಣೆ ವ್ಯವಸ್ಥೆಯ ಸುಧಾರಣೆಗೆ ನಾಂದಿ ಹಾಡಿದ್ದು ಅದೇ ಮನುಷ್ಯ. ತಮ್ಮ ನಿವೃತ್ತಿಯ ನಂತರ ಅಧಿಕಾರಕ್ಕಾಗಿ ಮತ್ತೊಂದು ಪಕ್ಷವನ್ನೇ ಸೇರಿದರು...ಇತ್ಯಾದಿ ಎಲ್ಲವೂ ಇಲ್ಲಿ ಚರ್ಚೆಗೆ ಬೇಕಿಲ್ಲ. ಅದರ ವೈರುಧ್ಯವನ್ನು ಬೇರೆ ಯಾವಾಗಲಾದರೂ ಆಲೋಚಿಸೋಣ. 

ನಮ್ಮಲ್ಲಿ ಇರುವ ಜನಪ್ರತಿನಿಧಿ ಕಾಯ್ದೆಯ ಲಭ್ಯ ಅವಕಾಶಗಳನ್ನೇ ಕೂಗಿ ಹೇಳಿದ್ದು..ಹೀಗಿದೆ ಎಂದು ಸಾರ್ವಜನಿಕವಾಗಿ ತೋರಿಸಿದ್ದು ಶೇಷನ್. ಅವರು ಕೈಗೊಂಡ ಹಲವು ಕ್ರಮಗಳು ರಾಜಕೀಯ ನಾಯಕರನ್ನು ಕಂಗೆಡಿಸಿತು. ಉದಾಹರಣೆಗೆ, ೧೯೭೧ ರಲ್ಲಿ ಜನಪ್ರತಿನಿಧಿ ಕಾಯ್ದೆಯಡಿಯೇ ಅಭ್ಯರ್ಥಿಳಿಗೆ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿತು. ಆದರೆ ಅದರ ಕಟ್ಟುನಿಟ್ಟಿನ ಪಾಲನೆಗೆ ಚಾಲನೆ ನೀಡಿದ್ದು ಟಿ.ಎನ್. ಶೇಷನ್. 

ಅದುವರೆಗೆ ಪ್ರಶ್ನಾತೀತರಾಗಿದ್ದ ನಮ್ಮ ನಾಯಕರನ್ನು ಪ್ರಶ್ನಿಸಬೇಕೆಂಬ ಬಯಕೆಯಿಂದಲೇ ನಮ್ಮ ಹಿರಿಯ ಪೀಳಿಗೆ ಮುದುಕರಾದರು. ಆದರೆ, ಆ ವೃದ್ಧರ ಮಕ್ಕಳಿಗೆ ಪ್ರಶ್ನಿಸುವ ಅವಕಾಶ ಸಿಕ್ಕಿತು. ಅದನ್ನು ದಕ್ಕಿಸಿಕೊಟ್ಟದ್ದು ಶೇಷನ್. ಪ್ರಶ್ನಾತೀತರಾಗಿದ್ದವರನ್ನು  ಒಂದು ಗೂಟಕ್ಕೆ ಕಟ್ಟಿ ಹಾಕಿದವರು ಶೇಷನ್. ಬ್ಯಾನರ್, ಬಂಟಿಂಗ್ಸ್‌ಗಳ ಮಿತಬಳಕೆಯಿಂದ ಹಿಡಿದು, ಎಲ್ಲ ರೀತಿಯ ಅತಿರೇಕಗಳಿಗೆ ಕಡಿವಾಣ ಹಾಕಲಾಯಿತು.  ಅವರ ವಿರುದ್ಧ ಅತಿಯಾಗಿ ಮಾತನಾಡಿದರು, ಅತಿರೇಕದಿಂದ ವರ್ತಿಸಿದರು, ಎಲ್ಲ ರಾಜಕಾರಣಿಗಳನ್ನೂ ಸಂಶಯದಿಂದ ನೋಡುವಂತೆ ಮಾಡಿದರು...ಹಲವು ಆರೋಪಗಳು ಬಂದವು. ಆದರೆ ಕೆಟ್ಟದ್ದೇ ಕೇಳಿ, ನೋಡಿ ಕಿವುಡಾದ, ಕುರುಡಾದ ಕಿವಿಗೆ-ದೃಷ್ಟಿ ಒಳ್ಳೆಯದತ್ತ ಗಮನಹರಿಸಲು ಸ್ವಲ್ಪ ಅತಿರೇಕಗಳು ಅವಶ್ಯ ಎನಿಸುತ್ತದೆ. ಒಂದುವೇಳೆ ಶೇಷನ್, ಹಾಗೆಲ್ಲಾ ಬೊಬ್ಬೆ ಹಾಕದಿದ್ದರೆ ಯಾರಿಗೂ, ಏನೂ ಗೊತ್ತಾಗುತ್ತಿರಲಿಲ್ಲ. ಜನರೂ ಸಹ ಗಮನಿಸುತ್ತಿರಲಿಲ್ಲ. ಆದರೆ ಆಗ ಉಂಟಾದ ವಾಗ್ವಾದ, ರಾಜಕಾರಣಿಗಳಿಗೆ ಕಡಿವಾಣ ಹಾಕುವ ಎಲ್ಲ ಶೇಷನ್‌ರ ಪ್ರಯತ್ನಕ್ಕೆ ಮಾಧ್ಯಮಗಳೂ ಧ್ವನಿಯಾಗಿದ್ದರಿಂದ ಇಂದು ಚುನಾವಣಾ ವ್ಯವಸ್ಥೆಗೆ, ಅಭ್ಯರ್ಥಿಗಳಿಗೆ, ರಾಜಕೀಯ ಪಕ್ಷಗಳಿಗೆ ಶಿಸ್ತು ಬಂದಿದೆ. 

ಹೀಗೆ 1972 ರಿಂದ ಆರಂಭವಾದ ಸುಧಾರಣಾ ಪರ್ವದ ಫಲ ದೊರೆತಿದ್ದು 1994 ರಲ್ಲಿ. ಮಂಡ್ಯದ ನಾಗಮಂಗಲದ ಒಂದು ಉದಾಹರಣೆ ಕೇಳಿ. ೧೯೯೪ ರ ಚುನಾವಣೆಯಲ್ಲಿ ಬ್ಯಾನರ್, ಬಂಟಿಂಗ್ಸ್‌ಗಳ ಅತಿರೇಕವಿತ್ತು. ಒಂದು ವೃತ್ತವಂತೂ ಮುಚ್ಚಿ ಹೋಗುವ ಹಾಗೆ ಈ ಬ್ಯಾನರ್‌ಗಳನ್ನು ಕಟ್ಟಲಾಗಿತ್ತು. ಪತ್ರಿಕೆಯಲ್ಲಿ ಪ್ರಕಟವಾದ ಚಿತ್ರದಿಂದ ಆಯೋಗ, ಅದರ ಬಳಕೆಗೆ ಕಡಿವಾಣ ಹಾಕಿತು. ಎಲ್ಲಿ ಬೇಕಾದರೂ ಗೋಡೆ ಬರಹಗಳನ್ನು ಬರೆಯದಂತೆ ನಿರ್ಬಂಧಿಸಿತು. ಇಷ್ಟಕ್ಕೇ ಮುಗಿಯಲಿಲ್ಲ. ಅಭ್ಯರ್ಥಿಗಳ ಖರ್ಚಿನ ಮೇಲೆ ನಿಗಾ ಇಟ್ಟಿತು ಆಯೋಗ.  ಪಕ್ಷಗಳೆಲ್ಲಾ ಇದೇನು, ನಮ್ಮ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದ್ದಾರೆ ಎಂದು ಬೊಬ್ಬೆ ಹಾಕಿದವು. ಶೇಷನ್ ಕಿವಿಗೊಡಲಿಲ್ಲ. ಸುಧಾರಣೆಯ ಬುಲ್ಡೋಜರ್ ನಿಲ್ಲಲಿಲ್ಲ. ಕೋರ್ಟ್‌ಗಳೂ ಸಹಕರಿಸಿದವು, ಅದಕ್ಕಿಂತ ಹೆಚ್ಚಾಗಿ ಜನರು ಅವರ ಬೆಂಬಲಕ್ಕೆ ನಿಂತರು. ಮೂಗಿನ ಮೇಲೆ ಬೆರಳಿಟ್ಟು ‘ಸರಿಯಿದೆ, ಸರಿಯಿದೆ’ ಎಂದು ಸಿಕ್ಕಾ ಹಾಕಿದರು. ಹಾಗಾಗಿ ಕೆಡಲಾರಂಭಿಸಿದ್ದ ಪ್ರಜಾತಂತ್ರದಲ್ಲಿ ಶೇಷನ್ ದೈವಾಂಶ ಸಂಭೂತನಂತೆ, ಸುಧಾರಕನಂತೆ ಕಂಡು ಬಂದರು.

ಆಗ ಶೇಷನ್ ಹೇಳಿದ್ದು ಇಷ್ಟೇ - ‘ನಾನೇನೂ ಹೊಸದನ್ನು ಮಾಡಲಿಲ್ಲ. ಎಲ್ಲವೂ ಕಾಯ್ದೆಯಲ್ಲಿದೆ. ನಾನು ಜಾರಿ ತಂದಿದ್ದೇನೆ, ಅಷ್ಟೇ’ ಎಂದರು. ನಮಗೂ ಆ ಸಂದರ್ಭದಲ್ಲಿ ಬೇಕಾಗಿದ್ದು ಒಬ್ಬ ಅನುಷ್ಠಾನಕನೇ ಹೊರತು ನಿಯಾಮಕನಲ್ಲ.
ಅಂದಿನಿಂದ ಇಲ್ಲಿಯವರೆಗೂ ಸುಧಾರಣೆಯ ಪರಿಕ್ರಮ ನಿಂತಿಲ್ಲ. 1998 ರಲ್ಲಿ ವಿದ್ಯುನ್ಮಾನ ಮತ ಯಂತ್ರ ಬಳಕೆಯ ಪ್ರಯೋಗ ಕೇರಳದಲ್ಲಿ ನಡೆಸಲಾಯಿತು. ತದನಂತರ 1999 ರಲ್ಲಿ ಗೋವಾ ಸೇರಿದಂತೆ ಹಲವೆಡೆ ವಿದ್ಯುನ್ಮಾನ ಮತ ಯಂತ್ರ ಯಶಸ್ವಿಯಾಯಿತು. ೨೦೦೪ ರಲ್ಲಿ ದೇಶಾದ್ಯಂತ ವಿದ್ಯುನ್ಮಾನ ಮತ ಯಂತ್ರದ ಬಳಕೆ ಸಾಧ್ಯವಾಯಿತು. ಅದರ ಪರಿಣಾಮ ಗಣನೀಯ ಪ್ರಮಾಣದಲ್ಲಿ ನಕಲಿ ಮತದಾನ ತಡೆಯಲಾಯಿತು.
 
2002 ರಲ್ಲಿ ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ತಮ್ಮ ಆಸ್ತಿ ಕುರಿತ ಅಫಿಡವಿಟ್ ಸಲ್ಲಿಸಬೇಕೆಂದು ಆದೇಶ ಹೊರಡಿಸಿದರೂ ರಾಜಕಾರಣಿಗಳು ಕಿಮ್ಮತ್ತು ನೀಡಲಿಲ್ಲ. ಅಷ್ಟರಲ್ಲಿ 2003 ರಲ್ಲಿ ಮತ್ತೆ ಕೋರ್ಟ್, ‘ಅಫಿಡವಿಟ್ ಸಲ್ಲಿಸದಿದ್ದರೆ ನ್ಯಾಯಾಂಗ ಆದೇಶ ಉಲ್ಲಂಘನೆ’ ಎಂದು ಪರಿಗಣಿಸುವುದಾಗಿ ಹೇಳಿತು. ಜತೆಗೆ, ಇಂಥವರ ನಾಮಪತ್ರವನ್ನು ತಿರಸ್ಕೃತಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿತು. 2004 ರಲ್ಲಿ ಅಭ್ಯರ್ಥಿಗಳ ಅಪರಾಧೀಕರಣ ಚರಿತ್ರೆಯನ್ನು ಅಫಿಡವಿಟ್ ನಲ್ಲಿ ತಿಳಿಸುವಂತೆ ಹೇಳಿತು. ಅಲ್ಲಿಗೆ, ನಮ್ಮ ಮತ ಪಡೆಯುವ ಅಭ್ಯರ್ಥಿ ಎಷ್ಟರ ಮಟ್ಟಿಗೆ ಅರ್ಹ, ಯೋಗ್ಯ ಎಂಬುದು ನಿಜವಾಗಲೂ ತಿಳಿದದ್ದು ಆಗಲೇ. ಅಲ್ಲಿಯವರೆಗೂ ಅಪರಾಧ ಎಸಗಿ ಸುದ್ದಿಯಾದವರು ಮಾತ್ರ ನಮ್ಮ ಕಣ್ಣಿಗೆ ಅನರ್ಹರಾಗಿದ್ದರು, ನಯವಂಚಕರಲ್ಲ. ಇವತ್ತು ಸ್ಪರ್ಧಿಸಬೇಕಾದರೆ ಕಾಯ್ದೆಯನ್ನು ಅನಿವಾರ್‍ಯವಾಗಿ ಪಾಲಿಸಲೇಬೇಕಾದ ಸ್ಥಿತಿಯನ್ನು ಆಯೋಗ ನಿರ್ಮಿಸಿದೆ. ನಾವೆಲ್ಲಾ ನಿರ್ಮಿಸಿದ್ದೇವೆ. 

ಇದಕ್ಕೆ ಎಲ್ಲರ ಕೊಡುಗೆ ಇದೆ. ಶೇಷನ್ ನಂತರ ಬಂದ ಚುನಾವಣಾ ಆಯುಕ್ತರೂ ನಿಲುವು ಸಡಿಲಿಸಲಿಲ್ಲ. ಜತೆಗೆ ಶಿಸ್ತು ಪಾಲನೆಗೆ ತಮ್ಮ ಅಧಿಕಾರಿ ಸಮೂಹವನ್ನೇ ಸೈನ್ಯವಾಗಿಸಿಕೊಂಡರು. ಒಂದಷ್ಟು ಹುರುಪು ತುಂಬಿ ಕಳುಹಿಸಿದರು. ಹಾಗಾಗಿ ಬಹುಪಾಲು ಅಧಿಕಾರಿಗಳ ರಟ್ಟೆಯಲ್ಲಿ ಶಕ್ತಿ ಬಂತು. ಇಲ್ಲದಿದ್ದರೆ ಸದಾ ಮತಗಟ್ಟೆ ವಶ, ನಕಲಿ ಮತದಾನಕ್ಕೆ ಹೆಸರಾಗಿದ್ದ ಬಿಹಾರದಲ್ಲಿ  ೨೦೦೪ ರಲ್ಲಿ ಒಬ್ಬ ಚುನಾವಣಾ ವೀಕ್ಷಕ ಕೆ.ಜಿ. ರಾವ್ ಎಂಬಾತ ಮುಕ್ತ ಮತ್ತು ಪಾರದರ್ಶಕ ಚುನಾವಣೆ ನಡೆಸಲು ಸಾಧ್ಯವಿದ್ದೀತೇ ? ನಮ್ಮದೇ ಆದ ಮೈಸೂರಿನ ಚಾಮುಂಡೇಶ್ವರಿ ಮರು ಚುನಾವಣೆಯಲ್ಲಿ ಅಕ್ರಮಗಳ ಸಂತೆಯನ್ನು ಒಬ್ಬ ರೇಮಂಡ್ ಪೀಟರ್  ಹದ್ದುಬಸ್ತಿಗೆ ತರಲಿಲ್ಲವೇ ? ಮಾಜಿ ಪ್ರಧಾನಿಯಿಂದ ಹಿಡಿದು ಎಲ್ಲ ರಾಜಕೀಯ ನಾಯಕರನ್ನೂ ಬೆರಳಿನ ತುದಿಯಲ್ಲಿ ಆಡಿಸಲು ಸಾಧ್ಯವಾದದ್ದಕ್ಕೆ ನಿಯಮದೊಳಗಿನ ಶಕ್ತಿ ಹಾಗೂ ಜನಶಕ್ತಿಯ ಬೆಂಬಲವೇ ಕಾರಣ. 

ಇವತ್ತು ಯಾವ ಹಂತದಲ್ಲಿದ್ದೇವೆ ಎಂದರೆ, ಎಲ್ಲವೂ ಸರಿಯಾದರೆ 2014 ರ ಚುನಾವಣೆಯಲ್ಲಿ ನಾವು ‘ನಕಾರಾತ್ಮಕ ಮತದಾನ’ ಮಾಡಬಹುದೇನೋ ? ಅದೂ ಹಕ್ಕಾಗಬಹುದು. ಚುನಾವಣೆಯಲ್ಲಿ ನಕಾರಾತ್ಮಕ ಮತದಾನವೂ ಒಬ್ಬ ಅಭ್ಯರ್ಥಿಯಾಗಿರುತ್ತದೆ. ಪಕ್ಷಗಳು ನಿಲ್ಲಿಸಿದ ಯಾವೊಬ್ಬ ಅಭ್ಯರ್ಥಿಯೂ ಯೋಗ್ಯನಾಗಿರದಿದ್ದರೆ ನಾವು ನಕಾರಾತ್ಮಕ ಮತದಾನ ಮಾಡಬಹುದು. ಅದಕ್ಕೇ ಹೆಚ್ಚು ಮತ ಪಡೆದ ಅಭ್ಯರ್ಥಿಗಿಂತ ಹೆಚ್ಚು ಮತ ಬಿದ್ದರೆ ಎಲ್ಲ ಅಭ್ಯರ್ಥಿಗಳೂ ಅನರ್ಹಗೊಳ್ಳುತ್ತಾರೆ. ಅವರು ಐದು ವರ್ಷ ಸ್ಪರ್ಧಿಸುವಂತಿಲ್ಲ. ಆಗ ಪಕ್ಷಗಳು ಒಳ್ಳೆಯ ಅಭ್ಯರ್ಥಿಯತ್ತ ಕಣ್ಣಿಡುತ್ತವೆ, ಹಣವಂತಗಿಂತಲೂ ಗುಣವಂತ ಬೇಕು ಎಂದು ಹುಡುಕಾಟ ನಡೆಸಬಹುದು. ಅದಿರಲಿ, ಇಂಥ ಸಂದರ್ಭದಲ್ಲಿ ನಮ್ಮ ಕರ್ತವ್ಯದ ಬಗ್ಗೆ ಆಲೋಚಿಸಿ.
 
ಬೆಂಗಳೂರು ದಕ್ಷಿಣ ಕ್ಷೇತ್ರ ವಿದ್ಯಾವಂತರ ಕ್ಷೇತ್ರ. ಅಲ್ಲಿ 1998-57.65, 1999-54.13, 2004-49.36, 2008-50 ರಷ್ಟು ಮತದಾನವಾಗಿದೆ. ಇದು ಒಂದರ ಕಥೆಯಲ್ಲ. ಎಲ್ಲ ಕ್ಷೇತ್ರಗಳಲ್ಲೂ ಇದೇ. ಬೀದರ್‌ನಲ್ಲೂ ಇದು ಕ್ರಮವಾಗಿ 51.33, 63.42, 59.42, ಶೇ. 53 ರಷ್ಟಾಗಿದೆ. ಅಲ್ಲಿಗೆ ಮತದಾನ ಪ್ರಮಾಣ ಕುಸಿಯುತ್ತಿದೆ. 

ಒಂದೆಡೆ ಮುಕ್ತ ಮತ್ತು ಪಾರದರ್ಶಕ ಚುನಾವಣೆ ನಡೆಯುತ್ತಿಲ್ಲ ಎಂಬ ಕೂಗಿಗೆ ಜನರಿಂದಲೇ ಸಲಹೆ ಪಡೆದು, ಕಾಯ್ದೆಯನ್ನು ಮತ್ತಷ್ಟು ಕಟ್ಟುನಿಟ್ಟಾಗಿ ಹುರಿಗೊಳಿಸಿ ವಾತಾವರಣ ಕಲ್ಪಿಸುತ್ತಿದ್ದರೆ, ಅದನ್ನೇ ಬಯಸುತ್ತಿದ್ದ ನಾವೇ ವ್ಯವಸ್ಥೆಯಿಂದ ವಿಮುಖರಾಗುತ್ತಿದ್ದೇವೆ. ಇದು ಅರ್ಥವಾಗದ ಸಂಗತಿ. ನಕಲಿ ಮತದಾನ ತಡೆಯಲು ಗುರುತಿನ ಚೀಟಿ ನೀಡಲು ಮುಂದಾದರೆ, ಅದನ್ನು ಮಾಡಿಸಿಕೊಳ್ಳಲು ತೋರುವ ಆಸಕ್ತಿಯೂ ಕಡಿಮೆ. ಇದು ಯಾವ ರೀತಿಯ ಹೊಣೆಗಾರಿಕೆ ನಿಭಾವಣೆ. 

‘ನೀವು ಗುರುತಿನ ಚೀಟಿ ಪಡೆಯಿರಿ, ಮತದಾನ ಹಾಕಿ’ ಎಂಬ ಜಾಗೃತಿ ಮೂಡಿಸುವ ಹೊಣೆಯೂ ಆಯೋಗ ಕೈಗೆತ್ತಿಕೊಂಡು ಮುಂಚೂಣಿಯಲ್ಲಿದೆ. ಆಯೋಗದ ಸುಧಾರಣಾ ಕ್ರಮಗಳನ್ನು ಬೆಂಬಲಿಸಬೇಕಿದ್ದ ನಾವು, ಮತ ಹಾಕದೇ ನಿರುತ್ಸಾಹಗೊಳಿಸುತ್ತಿದ್ದೇವೆ. ಇದರಿಂದ ಆಗುವ ಅನುಕೂಲ ಯಾರಿಗೆ ಗೊತ್ತೇ ? ನೀವು ಯಾರನ್ನು ಅಯೋಗ್ಯನೆಂದು ದೂರವಿಡುತ್ತಿದ್ದಾರೋ ಅವರಿಗೇ ಹೆಚ್ಚು ಲಾಭ. ‘ಆಯೋಗದ ಕ್ರಮಗಳಿಂದಲೇ ಜನ ಮತದಾನ ಮಾಡಲು ಹೆದರುತ್ತಿದ್ದಾರೆ. ಎಲ್ಲೆಲ್ಲೂ ಪೋಲೀಸರು ನಿಲ್ಲಿಸಿದರೆ ಜನ ನಿರ್ಭಯವಾಗಿ ಹೇಗೆ ಮತವನ್ನು ಚಲಾಯಿಸಿಯಾರು?’ ಎಂದೆಲ್ಲಾ ಮುಖಂಡರು ಟೀಕಿಸುತ್ತಿದ್ದಾರೆ. ಇದನ್ನು ಹುಸಿಗೊಳಿಸಬೇಕಾದರೆ ನಾವೆಲ್ಲಾ ಬಂದು ಮತ ಹಾಕಬೇಕು. ಆ ಮೂಲಕ ಮುಕ್ತ ಮತ್ತು ಪಾರದರ್ಶಕ ಚುನಾವಣೆಗೆ ಕೈಗೊಳ್ಳುತ್ತಿರುವ ಕ್ರಮಗಳಿಗೆ ಸಮ್ಮತಿಯ ಮೊಹರು ಒತ್ತಬೇಕು.

ಕೊನೆಯದೊಂದು ಮಾತಿದು. ಒಂದಂತೂ ಸತ್ಯ. ಚುನಾವಣೆ ಎಂದರೆ ಕುಡುಕರ ಹಾವಳಿ, ಗಲಾಟೆಯ ಹಾವಳಿ, ಕೊಲೆ-ಗಲಭೆಗೆ ಕಾರಣವಾಗುತ್ತಿದ್ದ ಹಳ್ಳಿಗಳಲ್ಲಿ ಶಾಂತಿ ನೆಲೆಸಿದೆ. ಚುನಾವಣೆ ದಿನಗಳಲ್ಲಿ ಬೆಳಗಿನ ಜಾವವಾದರೂ ಹಳ್ಳಿಗಳು ಮಲಗುತ್ತಿರಲಿಲ್ಲ. ಆದರೀಗ ರಾತ್ರಿ ಹತ್ತು ಗಂಟೆಗೇ ತಣ್ಣನೆ ಮಲಗುತ್ತದೆ. ಜನರೂ, ‘ಹೆಂಡ-ಹಣ ಏನೂ ಬೇಡ, ಸೌಲಭ್ಯ ಕಲ್ಪಿಸಿದರೆ ಸಾಕು’ ಎನ್ನುವ ಮಟ್ಟಿಗೆ ಬೆಳೆದಿದ್ದಾರೆ. ಅಲ್ಲಿಗೆ ಹೇಳಿ...ಇದು ಸುಧಾರಣೆಯಲ್ಲವೇ ? ಒಂದು ಒಳ್ಳೆಯ ವಾತಾವರಣ ನಿರ್ಮಾಣವಾಗುತ್ತಿಲ್ಲವೇ? ಅದರ ಬೆಳವಣಿಗೆಗೆ ನಾವೂ ಕಾರಣವಾಗೋದು ಮತ ಹಾಕುವ ಮೂಲಕ. ಅಂದ ಹಾಗೆ, ನಾವು ಮೊದಲು ಮತದಾರರಲ್ಲ ; ಮೊದಲು ನಾಗರಿಕ. ಹಾಗಾಗಿ ನಮ್ಮ ಹಕ್ಕು ಮತದಾನ. ಅದನ್ನು ಚಲಾಯಿಸಲೇ ಬೇಕು. (ವಿಜಯ ಕರ್ನಾಟಕದಲ್ಲಿ ಪ್ರಕಟಿತ)

Saturday, April 18, 2009

ಈ ಚುನಾವಣೆಯಲ್ಲಿ ಸೋತರೆ ಬಿಜೆಪಿಗೇ ಲಾಭ

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಏಕಪಕ್ಷೀಯ ಆಡಳಿತವಲ್ಲ,  ಅಂಥದೊಂದು ಅನಿವಾರ್ಯತೆಯೇ ಸೃಷ್ಟಿಯಾಗಬಾರದು. ಅದು ಒಳ್ಳೆಯದಲ್ಲ. ಹಾಗಾಗಿ ಈ ಚುನಾವಣೆಯಲ್ಲಿ ಕಡಿಮೆ ಸ್ಥಾನ ಪಡೆದಷ್ಟೂ ಎಲ್ಲರಿಗೂ ಲಾಭ, ಸ್ವತಃ ಬಿಜೆಪಿಗೇ ಲಾಭ.
ಈ ಮಾತು ಹೇಳಿದರೆ ವಿಚಿತ್ರ ಎನಿಸಬಹುದು. ಆದರೆ ನಿಜ. ರಾಜ್ಯದ ರಾಜಕೀಯ ಚರಿತ್ರೆಗೆ ಹಾಗೂ ಬಿಜೆಪಿಗೆ ಒಳ್ಳೆಯದಾಗಬೇಕಾದರೆ ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಬೇಕು. 

ಇದು ಯಾವ ಪಕ್ಷದ ಪರವಾಗಿಯೂ ಹೇಳುತ್ತಿಲ್ಲ. ಆದರೆ ಇಂಥದೊಂದು ಅನಿವಾರ್ಯತೆಯ ನಿರ್ಧಾರಕ್ಕೆ ಮತದಾರರೇ ಬರುವಂಥ ಸ್ಥಿತಿ ಇದೆ. ಕಾರಣ ಬಿಜೆಪಿಗೆ ಇನ್ನೂ ಆಡಳಿತ ಎಂಬುದೇ ಅರ್ಥವಾಗಿಲ್ಲ. 

ರಾಜ್ಯದ ರಾಜಕೀಯ ರೂಪುಗೊಂಡಿರುವುದು ಮೂರು ಹಂತಗಳಲ್ಲಿ. 1983 ರವರೆಗೆ ಏಕಪಕ್ಷ ಯುಗ, ನಂತರ 2004 ರವರೆಗೆ ದ್ವಿಪಕ್ಷ ಯುಗ, ನಂತರ ಸಮ್ಮಿಶ್ರ ಸರಕಾರಗಳ ಕಾರುಬಾರು. ಮೊದಲ ಹಂತದಲ್ಲಿ ಪರ್ಯಾಯ ಪಕ್ಷಗಳೇ ಇರಲಿಲ್ಲ. ಹಾಗಾಗಿ ಕಾಂಗ್ರೆಸ್‌ನದ್ದೇ ದರಬಾರು. 1983 ರಿಂದ ಕಾಂಗ್ರೆಸ್ಸೇತರ ಪಕ್ಷ ಪ್ರಜ್ವಲಮಾನಕ್ಕೆ ಬಂದಿತು. 1983 ರಲ್ಲಿ 18 ಶಾಸಕರನ್ನು ಹೊಂದಿದ್ದ ಬಿಜೆಪಿ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾಪಕ್ಷಕ್ಕೆ ಬಾಹ್ಯ ಬೆಂಬಲ ನೀಡಿದ ಪರಿಣಾಮ ಕಾಂಗ್ರೆಸ್ಸೇತರ ಪಕ್ಷ ಅಧಿಕಾರ ಹಿಡಿಯಿತು. 1985 ರ ಮಧ್ಯಂತರ ಚುನಾವಣೆಯಲ್ಲಿ ಜನತಾಪಕ್ಷವೇ ಸ್ವಾವಲಂಬಿಯಾಗಿ ಅಧಿಕಾರ ದಕ್ಕಿಸಿಕೊಂಡಿತು. 

ಕಾಂಗ್ರೆಸ್ಸೇತರ ಸರಕಾರದ ಪ್ರಯೋಗಕ್ಕೆ ಮೂಲವಾಗಿದ್ದ ಬಿಜೆಪಿ ಆಗ ಎರಡೇ ಸ್ಥಾನ ಪಡೆಯುವಲ್ಲಿ ಸುಸ್ತಾಯಿತು. ೧೯೮೯ ರಲ್ಲೂ ಬಿಜೆಪಿ ಗಳಿಸಿದ್ದು 4. ಆದರೆ  ನಿಜವಾಗಿಯೂ ಬಿಜೆಪಿ ಊರ್ಧ್ವಮಾನಕ್ಕೆ ಬಂದದ್ದು 1994 ರಲ್ಲಿ. ಕ್ರಮೇಣ ಮೂರು ಚುನಾವಣೆಗಳಲ್ಲಿ 40, 44 ಹಾಗೂ 79 ಸ್ಥಾನ ಪಡೆದು 2008 ರಲ್ಲಿ 104 ಕ್ಕೇರಿದ್ದು ಸಾಧನೆಯೇ. ಇದಕ್ಕೆ ನಾನಾ ಕಾರಣವಿರಬಹುದು. ಆದರೆ ಈ ವರ್ಷಗಳಲ್ಲಿ ಕಾಂಗ್ರೆಸ್‌ನ ಪ್ರಭಾವ ಕುಸಿಯುತ್ತಾ ಬಂದದ್ದೂ ನಿಜ. ಇದರೊಂದಿಗೆ ಕಾಂಗ್ರೆಸ್ ಅನ್ನು ವಿರೋಧಿಸಿಕೊಂಡೇ ಹುಟ್ಟಿದ್ದ ಜನತಾಪಕ್ಷದಿಂದ ವಿಭಜನೆ ಗೊಂಡು ಹುಟ್ಟಿಕೊಂಡ ಜನತಾದಳ 1994 ರಲ್ಲಿ ಅಧಿಕಾರ ಹಿಡಿಯಿತು. ಕಾಂಗ್ರೆಸ್ ಗೆ ಪರ್ಯಾಯವಾಗಿ ಬಿಂಬಿತವಾಯಿತು. ಅದರೂ 1999 ರಲ್ಲಿ ಕೇವಲ 10 ಸ್ಥಾನಕ್ಕೆ ಖುಷಿಪಟ್ಟು, 2004 ರಲ್ಲಿ 58 ಪಡೆದು ಸಮ್ಮಿಶ್ರ ಸರಕಾರಕ್ಕೆ ಮುನ್ನುಡಿ ಬರೆಯಿತು. ಇದೆ ಅವಕಾಶ ನಂತರ ಬಿಜೆಪಿಗೂ ದೊರೆಯಿತು. ಅದು ಅಧಿಕಾರಕ್ಕೆ ಹತ್ತಿರವಾಗಿದ್ದು ಆಗಲೇ. 
ನಂತರ ಆಡಳಿತ ರುಚಿ ಕಂಡ ಬಿಜೆಪಿ ಆಡಳಿತ ಪಕ್ಷವಾಗಲು ತರಬೇತಿ ಪಡೆದುಕೊಂಡಿತೇ ? ಎಂದು ಕೇಳಿದರೆ ಸುತರಾಂ ಇಲ್ಲ ಎನ್ನುವ ಉತ್ತರ ಸಿಗುತ್ತದೆ. ಆ ಉತ್ತರಕ್ಕೆ ಈ ಒಂಬತ್ತು ತಿಂಗಳಲ್ಲಿ ನೀಡಿದ ಆಡಳಿತವೇ ಸಾಕ್ಷಿ. ಸಾಮಾನ್ಯವಾಗಿ  ಅಧಿಕಾರ ಹಿಡಿದ ಮೊದಲ ಒಂದಷ್ಟು ದಿನ  ‘ಮಧುಚಂದ್ರ’ದ ಕಾಲ ಎನ್ನುತ್ತೇವೆ. ಅಲ್ಲಿಯವರೆಗೆ ಗ್ರೇಸ್ ಅಂಕಗಳನ್ನು ನೀಡಿ ಸುಮ್ಮನಿರಬೇಕು. ಆ ಕಾಲವೆಲ್ಲಾ ಮುಗಿದು ಆರು ತಿಂಗಳಾಗಿವೆ. ಆಡಳಿತದ ಲವಲೇಶವೂ ಕಾಣುತ್ತಿಲ್ಲ. ಯಾವುದೇ ಇಲಾಖೆಯಲ್ಲಿ ಆಡಳಿತ ಇರುವ ಲಕ್ಷಣಗಳೇ ಗೋಚರಿಸುತ್ತಿಲ್ಲ. 

ಶಿಕ್ಷಣ ಇಲಾಖೆಯಿಂದ ಹಿಡಿದು ಸಂಸ್ಕೃತಿ ಇಲಾಖೆವರೆಗೆ ದುರ್ಬೀನು ಹಾಕಿ ನೋಡಿದರೂ ಪ್ರಗತಿಯ ಕುರುಹುಗಳೇ ತೋರುತ್ತಿಲ್ಲ. ಆಯವ್ಯಯದಲ್ಲಿ ಕೋಟಿಗಟ್ಟಲೆ ಘೋಷಿಸಿದ್ದೇನೋ ನಿಜ. ಅದರ ಅನುಷ್ಠಾನಗೊಳ್ಳದಿದ್ದರೆ ಘೋಷಿಸಿ ಪ್ರಯೋಜನವೇನು ? ವಿಪರ್‍ಯಾಸದ ಸಂಗತಿಯೆಂದರೆ ಎಲ್ಲೂ ಆಡಳಿತವೆ ಶುರುವಾಗಿಲ್ಲ. ಶಿಕ್ಷಣ ಇಲಾಖೆಯಲ್ಲಿ ಯಾವ ಪರಿಸ್ಥಿತಿ ಇದೆಯೆಂದರೆ, ಸಚಿವರ ಮಾತನ್ನು ಒಬ್ಬ  ಅಧೀನ ಅಧಿಕಾರಿ ಕೇಳುವುದಿಲ್ಲ. ಅಷ್ಟೇ ಏಕೆ ? ಯಾವುದಾದರೂ ಕಡತವಿಟ್ಟುಕೊಂಡು ಹೋದರೆ ಕೈ ಬಿಸಿ ಮಾಡದೇ ಯಾವ ಕೆಲಸವೂ ಆಗುವುದಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ, ‘ಸಚಿವರಲ್ಲಾರೀ, ಸಿಎಂ ಬಂದರೂ ಏನೂ ಮಾಡೋಕ್ಕಾಗಲ್ಲ’ ಎಂದು ಹೇಳುವಷ್ಟು ದಾರ್ಷ್ಟ್ಯ ಅಧಿಕಾರಿಗಳಲ್ಲಿ ಬಂದಿದೆ. ಇದು ಒಂದು ಇಲಾಖೆಯ ಉದಾಹರಣೆಯಲ್ಲ ; ಎಲ್ಲ ಕಡೆಯೂ ಇದೇ ಪರಿಸ್ಥಿತಿ. 

ಭ್ರಷ್ಟಾಚಾರ ಹಾಗೂ ಅಧಿಕಾರಷಾಹಿಯ ಇಂಥದೊಂದು ನಡವಳಿಕೆ ಬೇರೆ ಸರಕಾರಗಳಿದ್ದಾಗ ಇರಲಿಲ್ಲವೇ ? ಎಂದು ಕೇಳಬಹುದು. ಆದರೆ ಬೇರೆ ಸರಕಾರಗಳಿದ್ದಾಗಲೂ ಇತ್ತು. ಆದರೆ ಈ ಮಟ್ಟಕ್ಕೆ ಅಲ್ಲ. ಕಾಂಗ್ರೆಸ್ ಇದ್ದಾಗ ಅಧಿಕಾರಿಗಳಲ್ಲಿ ಒಂದು ಬಗೆಯ ಅವ್ಯಕ್ತವಾದ ಭಯವಿತ್ತು. ಒಬ್ಬ ಶಾಸಕ ಬಂದು ಗುಡುಗಿದರೆ ಸಾಕು, ಕೆಲಸವಾಗುತ್ತಿತ್ತು. ಅದಕ್ಕೆ ಕಾರಣವಿಷ್ಟೇ, ಕಾಂಗ್ರೆಸ್ ಪಕ್ಷದವರು ತಮ್ಮವರಿಗೇ ಮಾನ್ಯತೆ ಕೊಡುತ್ತಿದ್ದರು. ಹಾಗಾಗಿ ಅಲ್ಲೇನಿದ್ದರೂ ಅಧಿಕಾರಿಗಳು ಮೂರನೆಯವರು. ಈ ಹಿನ್ನೆಲೆಯಲ್ಲೇ ಕಾಂಗ್ರೆಸ್‌ನವರು ದುಡ್ಡು ಪಡೆದಾದರೂ ಕೆಲಸ ಮಾಡಿಕೊಡುತ್ತಾರೆ ಎಂಬ ಮಾತೂ ಚಾಲ್ತಿಗೆ ಬಂದಿತ್ತು. ಇದರ ಮೂಲಕ ನಾನು ಸ್ವಜನಪಕ್ಷಪಾತವನ್ನಾಗಲೀ, ಭ್ರಷ್ಟಾಚಾರವನ್ನಾಗಲೀ ಬೆಂಬಲಿಸುತ್ತಿಲ್ಲ. ಆದರೆ ಅಧಿಕಾರಿಗಳ ಮೇಲೆ ಒಂದಿಷ್ಟು ಹಿಡಿತವನ್ನು ಹೊಂದದಿದ್ದರೆ ಹೇಗೆ ಎಂಬುದು ನನ್ನ ಪ್ರಶ್ನೆ. 

ಬಿಜೆಪಿ ಹದಿನೈದು ವರ್ಷಗಳಲ್ಲಿ ರಾಜ್ಯದ ಗ್ರಾಮೀಣ ಭಾಗಗಳಲ್ಲೂ ಬೆಳೆದಿದೆ ಎಂದುಕೊಳ್ಳಬಹುದು. ಆದರೆ ವಾಸ್ತವವಾಗಿ ಅದರ ಬೇರು ಗ್ರಾಮಗಳಲ್ಲಿ ಬಿಟ್ಟಿದ್ದು ೨೦೦೪ ರ ನಂತರ. ಅಂದರೆ ಜೆಡಿಎಸ್ ಜತೆಗೂಡಿ ಸಮ್ಮಿಶ್ರ ಸರಕಾರ ರಚಿಸಿದ ನಂತರದ ಬೆಳವಣಿಗೆಯದು. ಆಗಲೇ ಜನತಾಪಕ್ಷ ಇತ್ಯಾದಿ ಹೆಸರುಗಳಿಂದ ಗ್ರಾಮೀಣ ಭಾಗದಲ್ಲಿ ಬೇರೂರಿದ್ದ (ನಂತರದ ದಿನಗಳಲ್ಲಿ ದಳವಾಗಿ ಮಾರ್ಪಟ್ಟರೂ ಬಹಳಷ್ಟು ಮುಖಂಡರು ಜನತಾಪಕ್ಷದವರೇ ಇದ್ದರು)ಜನತಾ ದಳದೊಂದಿಗೆ ಬಿಜೆಪಿ ಗುರುತಿಸಿಕೊಂಡಿತು. ಅದು ಗ್ರಾಮೀಣ ಭಾಗದಲ್ಲಿ ಬಹಳಷ್ಟು ಕಡೆ ೨೦೦೮ ರ ಚುನಾವಣೆಯಲ್ಲಿ ದ್ವಿತೀಯ ಸ್ಥಾನ ಗಳಿಸುವತ್ತಲೂ ಸಾಧ್ಯವಾಯಿತು. 
ಹಾಗಾಗಿ ಇನ್ನೂ ವಿದ್ಯಾವಂತ ಮತ್ತು ನಗರ ಕೇಂದ್ರಿತ ಮತದಾರರನ್ನೇ ಬಿಜೆಪಿ ನಂಬಿಕೊಂಡಿದೆ. ಗ್ರಾಮೀಣದ ಮತದಾರರ ಕೃಪಾಕಟಾಕ್ಷ ಸಿಕ್ಕರೆ ಅದು ಬೋನಸ್. ಆದರೆ ಇವರ ಮತದಾರರಿಗೆ ಒಪ್ಪಿತವಾಗುವ ಆಡಳಿತ ನೀಡುವುದಿರಲಿ, ಆ ದಿಕ್ಕಿನತ್ತ ಒಂದು ಹೆಜ್ಜೆಯನ್ನೂ ಇಟ್ಟಿಲ್ಲ. ಅಂಥ ಶುಭಲಕ್ಷಣಗಳೂ ಗೋಚರಿಸುತ್ತಿಲ್ಲ. ಯಾವುದನ್ನು ಪ್ರಗತಿಗೆ ಪೂರಕವೆನ್ನುವಂತೆ ಪರಿಗಣಿಸಲಾಗುತ್ತದೆಯೋ ಆ ಕ್ಷೇತ್ರದಲ್ಲೆಲ್ಲಾ ಆಡಳಿತ ಕುಸಿದಿದೆ.

ತಣ್ಣಗಿದ್ದ ಸಿಇಟಿ ವಿಷಯವನ್ನು ಮತ್ತಷ್ಟು ಗೊಂದಲವಾಗಿಸಲಾಗುತ್ತಿದೆ. ಕೈಗಾರಿಕೆ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಗತಿಯಿಲ್ಲ. ವಿದ್ಯುತ್ ಸಮಸ್ಯೆಯನ್ನು ನಿಭಾಯಿಸುವುದಿರಲಿ, ಅರ್ಥ ಮಾಡಿಕೊಳ್ಳಲೇ ಸಂಬಂಧಪಟ್ಟ ಸಚಿವರಿಗೆ ಸಾಧ್ಯವಾಗಿಲ್ಲ. ನಗರಾಭಿವೃದ್ಧಿ ಸೇರಿದಂತೆ ಇತರೆ ಕ್ಷೇತ್ರಗಳತ್ತ ಗಮನಹರಿಸಲು ಇನ್ನೂ ಅಪರೇಷನ್ ಕಮಲವೇ ಮುಗಿದಿಲ್ಲ. 

ಸರಕಾರ ಉಳಿಸಿಕೊಳ್ಳಬೇಕು ಎಂಬುದು ಎಷ್ಟು ಸತ್ಯವೋ ಭವಿಷ್ಯ ಸದೃಢಗೊಳ್ಳಬೇಕೆಂಬುದೂ ಅಷ್ಟೇ ಸತ್ಯ. ತಮಗೆ ಸಿಕ್ಕ ಅವಧಿ ಪೂರ್ತಿ ಆಪರೇಷನ್ ಕಮಲಕ್ಕೇ ವ್ಯಯಿಸಿಬಿಟ್ಟರೆ, ಮತ್ತೊಂದು ಅವಧಿ ಹೇಗೆ ಸಿಕ್ಕೀತು ಎಂಬುದನ್ನು ಪ್ರಶ್ನಿಸಿಕೊಳ್ಳಬೇಕು. ಕಾರಣವಿಷ್ಟೇ. ಬಿಜೆಪಿಗೆ ಮತ ನೀಡಿರುವ ಮಂದಿ ಒಂದೇ ಅವಧಿಯಲ್ಲಿ ಹಣೆಬರಹವನ್ನು ಅರಿತುಕೊಳ್ಳಲು ಬಯಸುವವರು ಮತ್ತು ಅರಿತುಕೊಳ್ಲಬಲ್ಲವರು. ಆ ಸಂದರ್ಭದಲ್ಲಿ ಪ್ರದರ್ಶನ ನೀರಸವಾಗಿದ್ದರೆ ಮತ್ತೊಂದು ಅವಕಾಶ ಕೊಡಲಾರರು.

ಹೋಗಲಿ, ಇವರ  ಆದ್ಯತೆಗಳೇನೇನು ಎಂದಾದರೂ ಹೇಳುತ್ತಿದ್ದಾರೆಯೇ ?ಸಚಿವರುಗಳಿಗೆ ಸರಕಾರದ ಆದ್ಯತೆಗಳನ್ನು, ಗುರಿಗಳನ್ನು ವಿವರಿಸಲಾಗಿದೆಯೇ ? ಯಾವುದೂ ಇಲ್ಲ. ಒಬ್ಬ ಸಚಿವರಂತೂ ಹಬ್ಬಗಳಿಗೆ ಪ್ರಸಾದ ಹಂಚಲಿಕ್ಕೆ ಶುರು ಮಾಡಿದ್ದಾರೆ. ಶಿವರಾತ್ರಿಗೆ ತೀರ್ಥ ಹಂಚಿದರು, ಮತ್ತೊಂದು ಹಬ್ಬಕ್ಕೆ ಖರ್ಜೂರ ಹಂಚಿದರು. ಆ ದೇವಸ್ಥಾನಕ್ಕೆ ಹೋಗಿ ಅರ್ಚನೆ ಮಾಡಿಸಿದರು, ಮತ್ತೊಂದು ಕಡೆ ಹೋಮ ಮಾಡಿಸಿದರು. ಇದನ್ನೆಲ್ಲಾ ನೋಡಿದರೆ, ಹಿಂದೂ ಎಂದುಕೊಳ್ಳುವವನೂ ಸರಕಾರದ ವತಿಯಿಂದ ಇದನ್ನೆಲ್ಲಾ ನಡೆಯಬೇಕೆಂದು ಬಯಸುವುದಿಲ್ಲ. ಜತೆಗೆ, ಹೀಗೆಲ್ಲಾ ಪ್ರಸಾದದ ಮಂತ್ರಕ್ಕೆ ಮತಗಳು ಉದುರಲಾರವು. ಇಂಥದೊಂದು ಅಗ್ಗದ ತಂತ್ರಕ್ಕೆ ಕರ್ನಾಟಕದ ಮತದಾರರು ಬಲಿಯಾಗುವ ಸ್ಥಿತಿಯಿಲ್ಲ. ತಮಿಳುನಾಡಿನಲ್ಲಿ ಟಿವಿ ಕೊಟ್ಟರೆ ಮತ ಕೊಡುತ್ತಾರೆ, ಅಕ್ಕಿ ಕೊಟ್ಟರೆ ಗೆಲ್ಲಿಸಬಹುದು. ಆ ವಾತಾವರಣ ರಾಜ್ಯದಲ್ಲಿಲ್ಲ.

ಮತ್ತೊಬ್ಬ ಸಚಿವರಂತೂ ಈ ವರ್ಷವೇ ಇನ್ನೂ ಸಿಇಟಿ ಆರಂಭವಾಗಿಲ್ಲ. ಮುಂದಿನ ವರ್ಷದ ಬಗ್ಗೆ ಈಗಲೇ ಗೊಂದಲ ಎಬ್ಬಿಸುತ್ತಿದ್ದಾರೆ. ಅದರಲ್ಲೂ ಅದರ ದಿಢೀರ್ ಪರಿಣಾಮಗಳೇನು ? ದೀರ್ಘಾವಧಿಯ ಪರಿಣಾಮಗಳೇನು ? ಯಾವುದನ್ನೂ ಆಲೋಚಿಸುವುದಿಲ್ಲ. ಹೀಗೆ ಬಹುತೇಕ ಸಚಿವರು, ತಮ್ಮ ಇಲಾಖೆಯ ಅಭಿವೃದ್ಧಿ ಕಾರ್ಯಗಳನ್ನು ಬಿಟ್ಟು ವಕ್ತಾರರಾಗಿದ್ದಾರೆ. ಡಾ. ವಿ.ಎಸ್. ಆಚಾರ್ಯರಂಥವರು ಮಂಗಳೂರು ಪಬ್ ಪ್ರಕರಣವನ್ನೇ ಇನ್ನೂ ನಾಜೂಕಾಗಿ ನಿಭಾಯಿಸಬಹುದಿತ್ತು. ಅದ್ಯಾವುದೂ ಮಾಡಲಿಲ್ಲ. ಇದಕ್ಕೆ ಕಾರಣವಿಷ್ಟೇ. ಬಿಜೆಪಿ ಮುಖಂಡರಿಗೆ ಅಕಾಲ ವೃದ್ಧಾಪ್ಯ ಬಂದಿದೆ. ತಮ್ಮದೊಂದೇ ಬೃಹತ್ ಪಕ್ಷವೆಂಬ ಭ್ರಮೆಯೂ ಬಂದಿದೆ. ಸುಮ್ಮ ಸುಮ್ಮನೇ ಪ್ರಯೋಗಕ್ಕೆ ತೊಡಗುತ್ತಿದೆ. ನಮಗೆ ಜನರ ಬೆಂಬಲವಿದೆ ಎಂಬ ಹುಚ್ಚು ಭ್ರಮೆಯಿಂದಲೇ ಆಪರೇಷನ್ ಕಮಲಕ್ಕೆ ತೊಡಗಿರುವುದು. 

ಒಂದು ಅಂಶವನ್ನು ಅರ್ಥ ಮಾಡಿಕೊಳ್ಳಬೇಕು. ಬೆಲ್ಲಕ್ಕಷ್ಟೆ ಇರುವೆ ಮುತ್ತುವುದೇ ಹೊರತು, ಕಲ್ಲಿಗಲ್ಲ. ಈಗ ಅಧಿಕಾರವಿದೆ, ಉರಿಯುವ ಮನೆಯಲ್ಲಿ ಹಿರಿದುಕೊಂಡಷ್ಟೇ ಲಾಭ ಎಂದು ಹಿರಿದುಕೊಳ್ಳಲು ಮುಂದಾಗುವ ಮಂದಿ ಬೇಕಾದಷ್ಟಿದ್ದಾರೆ. ಈಗ ಆಪರೇಷನ್ ಕಮಲಕ್ಕೆ ಒಳಗಾಗಿ ಪಕ್ಷದ ಒಳಗೆ ಬಂದವರೆಲ್ಲಾ ಇಂಥವರೇ ಹೊರತು ಮತ್ತ್ಯಾರೂ ಅಲ್ಲ. ಮತ್ತೆ ಅಧಿಕಾರ ಗಳಿಸಲು ಒಂದಿಷ್ಟು ಏನಾದರೂ ಮಾಡಿರಲೇಬೇಕು. ಅಲ್ಲದೇ, ಒಂದುವೇಳೆ ಅಧಿಕಾರ ಕಳೆದುಕೊಂಡರೆ ಪಕ್ಷದ ಬಾವುಟ ಕಟ್ಟುವುದಕ್ಕೂ ಯಾರೂ ಇರುವುದಿಲ್ಲ. ಆ ವಾಸ್ತವ ಆರಿವಾದರೆ ಒಂದಷ್ಟು ಒಳ್ಳೆ ಕೆಲಸಗಳಾಗಬಹುದೇನೋ. 

ಇಷ್ಟಕ್ಕೂ 2008 ರಲ್ಲಿ ಬಿಜೆಪಿಗೆ ಒಲಿದು ಬಂದ ಅದೃಷ್ಟ ಪುಕ್ಕಟೆಯಲ್ಲ. ವ್ಯಕ್ತಿಯ ಹಿನ್ನೆಲೆಯಾಗಲೀ, ವರ್ಚಸ್ಸಿನ ಹಿನ್ನೆಲೆಯಾಗಲೀ ಗೆಲುವಿಗೆ ಕಾರಣವಾಗಿರಲಿಲ್ಲ. ಜನರಿಗೂ ಬದಲಾವಣೆ ಬೇಕಿತ್ತು. ಹೊಸ ಅವಕಾಶ ಕೊಟ್ಟು ನೋಡಲು ಪಕ್ಷವೊಂದು ಇತ್ತು. ಹಾಗಾಗಿ ಹೊಸ ಪಕ್ಷವನ್ನು ಆಯ್ಕೆ ಮಾಡಿದರು. ಮುಂದಿನ ಚುನಾವಣೆಯಲ್ಲಿ ಯಾರೂ ಹೊಸಬರಲಿಲ್ಲವೆಂದಾದರೆ, ಹೊಸ ವೈದ್ಯನಿಗಿಂತ ಹಳೇ ರೋಗಿಯೇ ಮೇಲೆಂದು ಜನ ಬದಲಾವಣೆಗೆ ಸಹಿ ಮಾಡಿದರೆ, ಬಿಜೆಪಿ ಇನ್ನೂ ಐವತ್ತು ವರ್ಷ ಬೇಕಾದೀತು ರಾಜ್ಯದಲ್ಲಿ ಆಡಳಿತ ಗಿಟ್ಟಿಸಲು. 

ಇನ್ನೂ ವಿರೋಧ ಪಕ್ಷದ ಮನಃಸ್ಥಿತಿಯಲ್ಲೇ ಇರುವ ಬಿಜೆಪಿ, ಲೋಕವನ್ನೇ ಗೆದ್ದವೆಂಬ ಸಂಭ್ರಮದಲ್ಲಿದೆ. ಇಂಥ ಸಂದರ್ಭದಲ್ಲಿ ಮತ್ತೆ ಕಳೆದ ಸಾಲಿಗಿಂತ ಹೆಚ್ಚು ಸಂಸದ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾದರೆ ದೊಡ್ಡ ನಷ್ಟ ಜನರಿಗೂ ಮತ್ತು ರಾಜ್ಯಕ್ಕೂ. ಒಂದಷ್ಟು ಒಳ್ಳೆ ಕೆಲಸ ಮಾಡುವಂತೆ ಬದಲಿಸಬಹುದಾದ ಸಾಧ್ಯತೆ (ಸಂಪೂರ್ಣ ಅಧಿಕಾರಕ್ಕೆ ಹತ್ತಿರವಾಗಿ ಒಂದು ವರ್ಷವಷ್ಟೇ ಆಗಿದೆ)ಯೂ ಮುರುಟಿ ಹೋಗುತ್ತದೆ.  ಈಗಾಗಲೇ ಜೆಡಿಎಸ್ ನೊಂದಿಗಿನ ಅವಧಿಯಲ್ಲಿ ತಾವು ಕೊಟ್ಟ ಆಯವ್ಯಯದಿಂದಲೇ ಈಗ ಸಂಪೂರ್ಣ ಅಧಿಕಾರ ಬಂದಿದೆ ಎಂದು ತಿಳಿದಿರುವಂತೆಯೇ, ‘ಒಂಬತ್ತು ತಿಂಗಳ ಸರಕಾರದ ಆಡಳಿತ ಜನರಿಗೆ ಖುಷಿ ನೀಡಿದೆ. ಹಾಗಾಗಿ ಹೆಚ್ಚಿನ ಸ್ಥಾನ ಗೆದ್ದಿದ್ದೇವೆ’ ಎಂದು ಅಂದುಕೊಳ್ಳುವ ಅಪಾಯವಿದೆ. ಅದೂ ಸಂಭವಿಸಿದರೆ, ಮುಂದಿನ ವರ್ಷಗಳಲಿ ಒಂದಿಷ್ಟು ತೀರ್ಥ, ಪ್ರಸಾದ ಸಿಗಬಹುದೇ ಹೊರತು ಮತ್ತೇನೋ ಅಲ್ಲ. 

ಇಷ್ಟೇ ಆಗಿದಿದ್ದರೆ ಏನೋ ಅನ್ನಬಹುದಿತ್ತು. ಆದರೆ ಮತ್ತೊಂದು ಪರ್ಯಾಯ ಪಕ್ಷವೆಂಬುದಿಲ್ಲ. ಜೆಡಿಎಸ್‌ನ ಸ್ಥಿತಿ ಅರಿವಾಗಿದೆ. ಒಂದು ಸರಕಾರ ಮಾಡಬಹುದಾದಷ್ಟು ಸ್ಥಾನಗಳನ್ನು ಗೆಲ್ಲಲು ಬೇಕಾದಷ್ಟೇ ಅಭ್ಯರ್ಥಿಗಳು ಅವರಲ್ಲಿಲ್ಲ. 2004 ರ ಚುನಾವಣೆ ಸಂದರ್ಭದಲ್ಲಿ ನಾಯಕರ ದಂಡೇ ಇದ್ದ ಪಕ್ಷ ಇವತ್ತು ನಾವಿಬ್ಬರು-ನಮಗಿಬ್ಬರು ಎನ್ನುವಂಥ ಪರಿಸ್ಥಿತಿಯಲ್ಲಿದೆ. ಹಾಗಾಗಿ ಏಕಪಕ್ಷದ ಸ್ಥಿತಿ ಪ್ರಜಾತಂತ್ರದ ಆರೋಗ್ಯದ ದೃಷ್ಟಿಯಿಂದಲೇ ಒಳ್ಳೆಯದಲ್ಲ.

ಇದೆಲ್ಲಾ ಒಟ್ಟಾಗಿರಿಸಿಕೊಂಡು ನೋಡಿದರೆ, ಬಿಜೆಪಿ ಈ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಸ್ಥಾನ ಪಡೆದಷ್ಟೂ ಒಳ್ಳೆಯದು. 
ಆಕಾಶದಲ್ಲಿರುವ ಬಿಜೆಪಿ ಮಂದಿ ವಾಸ್ತವದ ಭೂಲೋಕಕ್ಕೆ ಇಳಿದಾರು. ಆ ಶಕ್ತಿ ಇರುವುದು ನಮ್ಮ ಒಂದೊಂದು ಮತಕ್ಕೆ.
(ವಿಜಯ ಕರ್ನಾಟಕದ ಸಂಪಾದಕೀಯ ಪುಟದಲ್ಲಿ ಪ್ರಕಟಿತ ಲೇಖನ)

Tuesday, April 14, 2009

ಸುದ್ದಿ ಮಾಧ್ಯಮಕ್ಕಿಂತ ಮೊದಲು ನಾವು ಎಚ್ಚೆತ್ತುಕೊಳ್ಳೋಣ

ನಮ್ಮಲ್ಲಿ ಸಮೂಹ ಮಾಧ್ಯಮದ ಕಾಲವಿದು. ಹಲವು ತಲೆಮಾರುಗಳನ್ನು ತನ್ನ ದೃಶ್ಯಶಕ್ತಿಯಿಂದಲೇ ಮಣಿಸಲು ಹೊರಟಿರುವ ಸಂದರ್ಭ. ಕೆಲವೊಮ್ಮೆ ರೇಜಿಗೆ ಹುಟ್ಟಿಸುವಂತೆ ಕಂಡು ಬಂದರೂ, ಅಭಿವೃದ್ಧಿಯ ನೆಲೆಯಲ್ಲಿ ತನ್ನದೇ ಪಾತ್ರ ವಹಿಸುತ್ತಾ ಬಂದಿರುವುದನ್ನು ಎಲ್ಲರೂ ಗಮನಿಸಲೇಬೇಕಾದ ವಾಸ್ತವ. 

ಇಂದು ಸಮೂಹ ಮಾಧ್ಯಮಗಳಿಂದ ಪ್ರಭಾವಿತಗೊಳ್ಳದ ವ್ಯಕ್ತಿಯೇ ಇಲ್ಲ. ವಿದ್ಯುತ್ ಸಂಪರ್ಕವಿಲ್ಲದ ಹಳ್ಳಿಗಳನ್ನೂ ಇದು ಬಿಟ್ಟಿಲ್ಲ. ಒಂದಲ್ಲ ಒಂದು ವಿಧಾನದಿಂದ ಅಥವಾ ವಿಧದಿಂದ ಪ್ರತಿಯೊಬ್ಬರನ್ನೂ ತಲುಪತ್ತಲೇ ಇವೆ. 1960-70 ರ ದಶಕದಲ್ಲಿ ಭಾರತದಲ್ಲಿ ಸಮೂಹ ಮಾಧ್ಯಮವೆಂದರೆ ಪತ್ರಿಕೆ ಮತ್ತು ರೇಡಿಯೊ. ದೂರದರ್ಶನ ನಮಗಿನ್ನೂ ಅಷ್ಟೊಂದು ಪರಿಚಯವಾಗಿರಲಿಲ್ಲ. ಅದರಲ್ಲೂ ಪ್ರಾದೇಶಿಕ ನೆಲೆಯಲ್ಲಿ ವಿಸ್ತಾರಗೊಂಡಿರಲಿಲ್ಲ. ನಾಲ್ಕು ತಿಂಗಳಿಗೊಮ್ಮೆ ಸರತಿಯಂತೆ ಬರುವ ಕನ್ನಡ ಸಿನಿಮಾ ಬಿಟ್ಟರೆ ಬೇರೆ ಕನ್ನಡವಿರಲಿಲ್ಲ. ಇನ್ನು,  ಸಿನಿಮಾ ತನ್ನ ನೆಲೆಯಲ್ಲಿ ಕಾರ್‍ಯ ನಿರ್ವಹಿಸುತ್ತಿದ್ದರೂ, ಅದು ಮನರಂಜನೆಯ ನೆಲೆಯಲ್ಲಷ್ಟೇ ಇತ್ತು. ಪತ್ರಿಕೆಯಲ್ಲಿ ಬರುವುದೆಂದರೆ ಸಾವಿರಾರು ಜನರನ್ನು ಏಕಕಾಲದಲ್ಲಿ ಮುಟ್ಟುವ ಪ್ರಯತ್ನವೆಂದೇ. ಸುದ್ದಿಗಷ್ಟೇ ಮುಖ್ಯವಾಗಿದ್ದ ಪತ್ರಿಕೆಗಳು ಎಂದಿನ ಸುದ್ದಿಯನ್ನು ಹಂಚುತ್ತಲೇ, ಗಾಢವಾಗಿ ಆವರಿಸಿಕೊಳ್ಳತೊಡಗಿದವು. 

ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ಪತ್ರಿಕೆಗಳು ಸಾಮೂಹಿಕವಾಗಿ ಜನರ ಮೇಲೆ ಪ್ರಭಾವ ಬೀರಿರುವುದಲ್ಲದೇ, ಚಳವಳಿಗೆ ಶಕ್ತಿ ತುಂಬುವಲ್ಲಿ ಯಶಸ್ವಿಯಾಗಿದ್ದವು. ಕಲ್ಲಚ್ಚಿನಲ್ಲಿ ಸುದ್ದಿಯನ್ನು ಮುದ್ರಿಸಿ ಮಾರಾಟ ಮಾಡುತ್ತಿದ್ದ ದಿನವೂ ಇತ್ತು. ಅವೆಲ್ಲವೂ ಈಗ ಇತಿಹಾಸ. ಅಚ್ಚರಿಯ ಸಂಗತಿಯೆಂದರೆ, ಅಂಥದೊಂದು ಇತಿಹಾಸವನ್ನು ಬೆನ್ನಿಗಿಟ್ಟುಕೊಂಡು ಇಂದಿನ ವರ್ತಮಾನವನ್ನು ನೋಡಿದರೆ  ಅಬ್ಬಾ ಎನಿಸುತ್ತದೆ. ಪತ್ರಿಕೆಯಲ್ಲದೇ, ವಿವಿಧ ಸಮೂಹ ಮಾಧ್ಯಮಗಳು ಬೆಳೆದಿರುವ ಬಗೆ ಮತ್ತು ಜನರನ್ನು ಒಳಗೊಂಡಿರುವ ನೆಲೆ ಕಂಡರೆ ಆಶ್ಚರ್ಯ ಎನಿಸುವುದು ನಿಜ. ಆ ಒಳಗೊಳ್ಳುವ ಬಗೆ ಸಕಾರಾತ್ಮಕವಾಗಿಯೋ, ಋಣಾತ್ಮಕವಾಗಿಯೋ ಎಂಬುದನ್ನು ಬೇರೆಯಾಗಿಯೇ ಚರ್ಚಿಸೋಣ. 

ಮೊದಲೇ ಹೇಳಿದಂತೆ ದೂರದರ್ಶನವೊಂದೇ ಬಿತ್ತರವಾಗುತ್ತಿದ್ದ ಕಾಲ. ಪತ್ರಿಕೆ, ಟಿವಿ, ರೇಡಿಯೋವಷ್ಟೇ ಮಾಧ್ಯಮಗಳಾಗಿದ್ದವು. ಪತ್ರಿಕೆ ಬಿಟ್ಟರೆ, ರೇಡಿಯೋ ಎಲ್ಲರ ಮನೆಯಲ್ಲೂ ಇತ್ತು. ಸರಕಾರಿ ವ್ಯವಸ್ಥೆಯಲ್ಲಿದ್ದರೂ ಸುದ್ದಿ ಸಮಾಚಾರಕ್ಕೇನೋ ಕೊರತೆಯಿರಲಿಲ್ಲ. ಇಡೀ ವಾರ್ತಾ ಸಂಚಯದಲ್ಲಿ ಒಂದರ ಬದಲಿ ಮೂರು ಬಾರಿ ಆಡಳಿತ ಸರಕಾರದ ಪದಾಧಿಕಾರಿಗಳ ಹೇಳಿಕೆಗಳನ್ನು ಕೇಳಬೇಕಿತ್ತು. ಹಾಗೆಯೇ ದೂರದರ್ಶನದಲ್ಲಿ ನೋಡಬೇಕಿತ್ತು. 

1980 ರ ದಶಕದ ಮಧ್ಯಭಾಗದಿಂದಲೇ ಈ ಟಿವಿ ವಾಹಿನಿಗಳ ಶಕೆ ಆರಂಭವಾಯಿತಾದರೂ, ಭರಾಟೆಗೆ ತಲುಪಿದ್ದು ೧೯೯೦ ರ ದಶಕದಲ್ಲೇ. ಅದರಲ್ಲೂ ೧೯೯೫ ರ ನಂತರ ಆಗಿರುವ ಕ್ರಾಂತಿ ಇನ್ನೆಲ್ಲೂ ಆಗಿಲ್ಲ. ಉಪಗ್ರಹ ತಂತ್ರಜ್ಞಾನ ಅಸಾಧ್ಯವಾದ ಕ್ರಾಂತಿಯನ್ನು ಎಸಗಿದ್ದರೆ, ಪತ್ರಿಕೋದ್ಯಮದಲ್ಲಿ ಕಳೆದ ೪೦ ವರ್ಷಗಳಲ್ಲಿ ಹೊಸದೇ ಕ್ರಾಂತಿಯಾಗಿದೆ. ಜತೆಗೆ ಹೊಸ ಬೆಳೆಯನ್ನೂ ತೆಗೆಯಲಾಗಿದೆ. ಏಕ ಅಥವಾ ಸೀಮಿತ ಗುಂಪಿನ ಚಟುವಟಿಕೆಯಾಗಿದ್ದ ಪತ್ರಿಕೋದ್ಯಮ, ಇಂದು ಲಕ್ಷಾಂತರ ಮಂದಿಗೆ ಉದ್ಯೋಗ ಕಲ್ಪಿಸಿರುವ ಉದ್ಯಮ. ಹಾಗೆಯೇ ವಾಹಿನಿಗಳೂ, ಲಕ್ಷಾಂತರ ಮಂದಿಗೆ ನೇರ, ಪರೋಕ್ಷ ಉದ್ಯೋಗ ಕಲ್ಪಿಸಿವೆ. ಇದನ್ನೆಲ್ಲಾ ನೋಡಿದರೆ ಜಾಹೀರಾತು ಜಗತ್ತು ಈ ಸಮೂಹ ಮಾಧ್ಯಮಗಳನ್ನು ಬೆಳೆಸಿರುವುದಲ್ಲದೇ, ತಾವೂ ಬೆಳೆದಿವೆ. ತಮ್ಮ ಕಾರ್‍ಯ ಚಟುವಟಿಕೆಗಳನ್ನು ವಿಸ್ತರಿಸಿಕೊಂಡಿವೆ. 

ಇವತ್ತಿನ ಸ್ಥಿತಿ ಹೇಗಿದೆ, ಊಹಿಸಿಕೊಳ್ಳಿ. ಸಮೂಹ ಮಾಧ್ಯಮಗಳ ಪ್ರಭಾವಲಯದಿಂದ ಒಂದಿನಿಂತೂ ಜಾಗ ಉಳಿದಿಲ್ಲ. ಅದರಲ್ಲೂ ನೀವು ಪ್ರಸಿದ್ಧ ವ್ಯಕ್ತಿ (ಸೆಲೆಬ್ರಿಟಿ)ಗಳಾಗಿದ್ದರೆ ಪ್ರತಿ ಕ್ಷಣವೂ ಸಾರ್ವಜನಿಕರದ್ದೇ ಎಂದಂತಾಗಿದೆ. ಅದಕ್ಕೆ ಹಲವು ಕಾರಣಗಳಿರಬಹುದು. ಜತೆಗೆ ಮಾಧ್ಯಮದ ಸುದ್ದಿ ವಲಯಗಳೂ ವಿಸ್ತರಿಸಿಕೊಂಡ ಪರಿಣಾಮ, ವಿಶಿಷ್ಟತೆ ಎನ್ನುವ ನೆಲೆಯಲ್ಲಿ ಪ್ರತಿಯೊಂದಕ್ಕೂ ಒಂದೊಂದು ಅರ್ಥ ಕಲ್ಪಿಸಿದ್ದೇವೆ. ಒಂದು ಸಂದರ್ಭದಲ್ಲಿ ರಾಜಕೀಯ ಮತ್ತು ಸಾಹಿತ್ಯದ ನೆಲೆಯಲ್ಲೇ ಕ್ರೋಢೀಕೃತಗೊಂಡಿದ್ದ  ಸುದ್ದಿ ಮೌಲ್ಯವೆನ್ನುವ ಆಯಾಮ ಇಂದು ಆರೋಗ್ಯದಿಂದ ಹಿಡಿದು, ಖಾಸಗಿ ಪಾರ್ಟಿವರೆಗೂ ಬಂದಿದೆ. ಇವೆಲ್ಲವನ್ನೂ ಸೃಷ್ಟಿಸಿದ್ದು ಮತ್ತು ಅಂಥದೊಂದು ಮೌಲ್ಯ ತಂದುಕೊಟ್ಟಿದ್ದು ಮಾರುಕಟ್ಟೆಯ ಶಕ್ತಿಗಳೇ. ವಿಪರ್ಯಾಸದ ಸಂಗತಿಯೆಂದರೆ ಸುದ್ದಿಗಳು ಸರಕಾಗಿರುವುದು. ಅಂದರೆ ಮಾರುಕಟ್ಟೆಯಲ್ಲಿ ಸಂಚಲನ ಉಂಟು ಮಾಡಬಲ್ಲಂಥ ಸುದ್ದಿಗಳು ಬೇಕು. ಹಾಗಾಗಿ ಆಯಾ ಆಸಕ್ತಿಯ ವಲಯಗಳಲೆಲ್ಲಾ ಸಮೂಹ ಮಾಧ್ಯಮಗಳು ಕಾಲಿಟ್ಟಿವೆ. 

ಅಂತಾರಾಷ್ಟ್ರೀಯ ಸರಕು ಮಾರುಕಟ್ಟೆಯನ್ನು ದೃಷ್ಟಿಯಲ್ಲಿಟ್ಟುಕೊಂಡ ಸಮೂಹ ಮಾಧ್ಯಮಗಳೂ ಬೇಕಾದಷ್ಟಿವೆ. ಇಲ್ಲಿ ಸಮೂಹ ಮಾಧ್ಯಮಗಳೆಂದರೆ ಬಹಳ ಮುಖ್ಯವಾಗಿ ಟಿವಿ ವಾಹಿನಿಗಳ ಬಗ್ಗೆ ಹೇಳುತ್ತಿದ್ದೇನೆ. ‘ಬ್ರ್ಯಾಂಡಿಂಗ್’ ಪ್ರಪಂಚದ ಅಭಿವೃದ್ಧಿಗಾಗಿಯೇ ಈ ವಾಹಿನಿಗಳು ಇವೆ ಎಂಬಂತೆ ತೋರುತ್ತವೆ. ಇಲ್ಲದಿದ್ದರೆ, ಮನೆಯನ್ನು ಹೇಗೆ ಸ್ವಚ್ಛವಾಗಿಟ್ಟುಕೊಳ್ಳಬೇಕು, ಹೇಗೆ ಕಸ ಗುಡಿಸಬೇಕು ? ಯಾವ ಫ್ಲೋರ್ ಕ್ಲೀನರ್ ಹಾಕಿ ನೆಲ ಒರೆಸಬೇಕು ? ಎಂದೆಲ್ಲಾ ಟಿವಿ ಯಲ್ಲಿ ಹೇಳಿಕೊಡುವಂಥ , ಸಲಹೆ (ಟಿಪ್ಸ್) ನೀಡುವಂಥ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ. ಹಾಗೆಂದು ಪತ್ರಿಕೆಗಳನ್ನೂ ಮಾರುಕಟ್ಟೆಯ ಶಕ್ತಿ ಬಿಟ್ಟಿಲ್ಲ. ಆದರೆ ಪತ್ರಿಕೆಗಳಿಗೆ ದೃಶ್ಯಶಕ್ತಿ ಇಲ್ಲವಾದದ್ದರಿಂದ ಅವುಗಳೇ ಬಚಾವಾಗಿವೆ ಎನ್ನಬೇಕು. 

ಸಿನಿಮಾ ಮಾಧ್ಯಮ ಒಂದು ಸಂದರ್ಭದಲ್ಲಿ ಸಮಾಜದ ಮೌಲ್ಯವನ್ನು ಬಿಂಬಿಸುವ ಮಾಧ್ಯಮವಾಗಿತ್ತು. ಇವತ್ತು ಮಾರ್ಗದರ್ಶಿಸುವ ಕೆಲಸ ಮಾಡುತ್ತಿದೆ. ಅಂದರೆ ಯುವ ಜಗತ್ತನ್ನು ನಡೆಸುವ ಮುಂಚೂಣಿ ಪ್ರಭಾವಿ ಸ್ಥಾನದಲ್ಲಿದೆ. ಹಾಗಾಗಿಯೇ ಒಂದಿಷ್ಟು ಆವೇಶ, ಆಕ್ರೋಶಕ್ಕೆ ಸೀಮಿತವಾಗುತ್ತಿದೆ. ಆದರೆ ಹಿಂದೆ ಹಾಗಲ್ಲ ; ಸಮಾಜದ ಮೇಲೆ ಸಕಾರಾತ್ಮಕವಾಗಿಯೇ ಪರಿಣಾಮ ಬೀರುವಂಥ ಕೆಲಸದಲ್ಲಿ ಸಕ್ರಿಯವಾಗಿತ್ತು. ಇವತ್ತಿಗೂ ಆ ನೆಲೆಯ ಕಾರ್ಯ ನಡೆಯುತ್ತಿದ್ದರೂ, ಸಣ್ಣದೊಂದು ತೊರೆಯ ಹಾಗೆಯೇ.

ಈಗ ಸಮೂಹ ಮಾಧ್ಯಮಗಳ ಬಗ್ಗೆ ಜನರ ಮುಂದೆ ಆಯ್ಕೆಗಳಿವೆ. ಇದನ್ನೇ ಒಪ್ಪಿಕೊಳ್ಳಬೇಕೆಂಬ ಅನಿವಾರ್ಯತೆಯೂ ಇಲ್ಲ, ಆಜ್ಞೆಯೂ ಇಲ್ಲ. ಅಯ್ಕೆಗಳ ಪ್ರಪಂಚದಲ್ಲಿ ಒಂದು ನಿರ್ದಿಷ್ಟ ಗುಂಪಿನ ಮೇಲೆಯೇ ಎಲ್ಲರ ನಂಬಿಕೆ ಮತ್ತು ಆಸಕ್ತಿ. ಆ ಹಂತ ಎಲ್ಲಿಗೆ ಮುಟ್ಟುತ್ತದೆಂದರೆ ಪರಸ್ಪರ ಹಿತಾಸಕ್ತಿಗಳನ್ನು ಕಾದುಕೊಳ್ಳಲು ಏನು ಮಾಡಲೂ ಸಿದ್ಧ ಎನ್ನುವಷ್ಟರಮಟ್ಟಿಗೆ. ಕೊಡು-ಕೊಳ್ಳುವಿಕೆ, ವ್ಯಾಪಾರ-ವ್ಯವಹಾರ ಎಲ್ಲವೂ ಆ ಹಂತದಲ್ಲೇ ನಡೆಯುತ್ತದೆ. ಹಾಗಾಗಿ, ತನ್ನ ನಿರ್ದಿಷ್ಟ ಗುಂಪಿನ ಆಸಕ್ತಿ (ಗಿರಾಕಿಗಳೆಂದು ಕರೆಯಬಹುದು)ಯನ್ನು ಕಾಯಲು ಸತ್ಯವನ್ನೂ ತಿರುಚುವಂಥ ಪ್ರಯತ್ನಗಳೂ ನಡೆಯುತ್ತವೆ. ಸುಳ್ಳನ್ನು ಸತ್ಯವೆಂದು ಬಿಂಬಿಸುವ ಯತ್ನವೂ ಚಾಲ್ತಿಯಲ್ಲಿರುತ್ತದೆ. ಅಂಥ ಉದಾಹರಣೆ ಮೂರ್‍ನಾಲ್ಕು ವರ್ಷಗಳಲ್ಲಿ ಬೇಕಾದಷ್ಟು ನಡೆದಿದೆ. 

ಆ ಗುಂಪಿನ ನಡವಳಿಕೆಯೇ ಸಮಾಜದ ನಡವಳಿಕೆಯಾಗಬೇಕೆಂಬ ಮಟ್ಟಕ್ಕೆ ಬಿಂಬಿಸುವ ಪ್ರಯತ್ನಗಳಿಗೆ ಬೆನ್ನೆಲುಬಾಗಿ, ಅಭಿವ್ಯಕ್ತಿ ಸ್ವಾತಂತ್ರ್ಯ, ಬದುಕುವ ಸ್ವಾತಂತ್ರ್ಯ, ಸಂವಿಧಾನದಲ್ಲಿನ ಮೂಲಭೂತ ಹಕ್ಕುಗಳ ವ್ಯಾಖ್ಯಾನ, ಮಾನವ ಹಕ್ಕುಗಳ ವ್ಯಾಪ್ತಿ ಎಲ್ಲವೂ ಬಂದು ಬಿಡುತ್ತವೆ. ಒಟ್ಟು ನಾಗರಿಕರ ದನಿಯಿದು ಎನ್ನುತ್ತಾ ಇತ್ಯರ್ಥ ಮಾಡುವ ಧಾಟಿಯಲ್ಲಿ ಸಮೂಹ ಮಾಧ್ಯಮಗಳು ಹೊರಟಿವೆ. 
ಇವೆಲ್ಲವನ್ನೂ ನೋಡುವಾಗ ಈ ಸಮೂಹ ಮಾಧ್ಯಮಗಳ ಜಾಲದೊಳಗೆ ನಾವು ಸಿಲುಕಿಕೊಂಡಿದ್ದೇವೆ ಎನಿಸುವುದುಂಟು. ಆದರೆ ನನಗನ್ನಿಸುವುದೊಂದು. ನಾವು ಈಗ ಇದ್ದೂ ಇಲ್ಲದಂತಿರುವುದನ್ನು ಕಲಿಯಬೇಕು. ಅಧ್ಯಾತ್ಮದ ಅರ್ಥದಲ್ಲಿ ಕಮಲದ ಹಾಗೆ. ಕೆಸರಲ್ಲಿದ್ದೂ  ಅದನ್ನು ಅಂಟಿಸಿಕೊಳ್ಳದ ಹಾಗೆ. ಅದು ನಮಗಿನ್ನೂ ರೂಢಿಗತವಾಗಿ ಬಂದಿಲ್ಲ. ಸಮೂಹ ಮಾಧ್ಯಮಗಳ ಪ್ರಭಾವಕ್ಕೆ ಅತೀವವಾಗಿ ಒಳಗಾಗಿರುವ ನಮ್ಮ ಯುವ ತಲೆಮಾರು ಸ್ವಲ್ಪ ಸಂಕಷ್ಟ ಪಡುವುದಿದ್ದೇ ಇದೆ. ಆದರೆ ಅವರ ನಂತರದ ತಲೆಮಾರಿಗೆ ಮೇಲೆ ಹೇಳಿದಂತೆ ಇದ್ದೂ ಇಲ್ಲದವರಂತೆ ಬದುಕುವುದು ರೂಢಿಗತ ಅಭ್ಯಾಸವಾಗಿ ಬರುತ್ತದೆ. ಆಗ ಸಮೂಹ ಮಾಧ್ಯಮಗಳ ಸ್ಥಿತಿಯನ್ನು ನೋಡಬೇಕು.

ಇಂಥದೊಂದು ಮಾತು ಹೇಳುತ್ತಿರುವಾಗಲೇ, ಸಮೂಹ ಮಾಧ್ಯಮಗಳು ಅಭಿವೃದ್ಧಿಯ ನೆಲೆಯಲ್ಲಿ ಕೊಡುಗೆ ನೀಡುತ್ತಿರುವುದನ್ನು ಅಲ್ಲಗೆಳೆಯಲಾಗದು. ಮಾಹಿತಿ ಹಕ್ಕು ಎನ್ನುವಂಥ ಪ್ರಬಲ ಕಾಯ್ದೆ ಜಾರಿಯ ಹಿಂದೆ ಮಾಧ್ಯಮಗಳ ಪಾತ್ರವೂ ಇದ್ದೇ ಇದೆ. ಇದರೊಂದಿಗೆ, ಹಲವು ಅಭಿವೃದ್ಧಿ ಕುರಿತಾದ ಮಾಹಿತಿ ವಿನಿಮಯ, ಸಂವಾದ, ಚರ್ಚೆಯಂಥ ಮಾರ್ಗದ ಮೂಲಕ ಜನರೊಂದಿಗೆ ಸಂಪರ್ಕವಿಟ್ಟುಕೊಳ್ಳುವ ಕೆಲಸಗಳು ನಡೆಯುತ್ತಲೇ ಇವೆ. ಆದರೂ, ನಮ್ಮನ್ನು ಅಥವಾ ನಮ್ಮತ್ತ ಇನ್ನೂ ಸ್ವಲ್ಪ ಜಾಸ್ತಿ ನೋಡಿ ಎಂದು ಮಾಧ್ಯಮಗಳನ್ನು ಕೇಳಿಕೊಳ್ಳುವಂಥ ಸ್ಥಿತಿ ನಮ್ಮದು.  

ಸಮೂಹ ಮಾಧ್ಯಮಗಳಲ್ಲಿ ಅದರಲ್ಲೂ ದೃಶ್ಯ ಮಾಧ್ಯಮಗಳ ಕಾರ್ಯ ನಿರ್ವಹಣೆ ಬಗ್ಗೆ ಈಗಲೇ ಹತಾಶೆಗೊಳ್ಳುವ ಸ್ಥಿತಿಯಿಲ್ಲ. ಅಲ್ಲದೇ, ಹತಾಶೆಗೊಳ್ಳುವ ಸ್ಥಿತಿ ನಿರ್ಮಿಸಿಕೊಳ್ಳದಂತೆ ನಾವೇ ಎಚ್ಚರವಹಿಸಬೇಕು. ಭಾರತದಲ್ಲಿ ದೃಶ್ಯ ಮಾಧ್ಯಮಗಳು ಇನ್ನೂ ತಾರುಣ್ಯವಾಸ್ಥೆಗೆ ಬರುತ್ತಿವೆಯಷ್ಟೇ. ಹದಿನೈದು ವರ್ಷಗಳಲ್ಲಿ ತನ್ನ ಹಾದಿಯನ್ನು ಸ್ಪಷ್ಟಗೊಳಿಸಿಕೊಳ್ಳುತ್ತಿದ್ದರೂ, ಇನ್ನೂ ಸ್ಪಷ್ಟವಾಗಿಲ್ಲ. ಅಂಥದೊಂದು ನಿಖರತೆ ಬರಲು ವೀಕ್ಷಕರ ಪಾತ್ರವೂ ಅವಶ್ಯ. 

‘ಟಿಆರ್‌ಪಿ‘ ರೇಟ್ ಅನ್ನು ನಿಯಂತ್ರಿಸುವ ಶಕ್ತಿ ಇರುವುದೂ ವೀಕ್ಷಕರಲ್ಲೇ. ಆ ರೇಟ್ ಗಾಗಿ ಪೈಪೋಟಿ ನಡೆಸುವ ಸಮೂಹ ಮಾಧ್ಯಮಗಳನ್ನು ನಿಯಂತ್ರಿಸುವ, ಮಾರ್ಗದರ್ಶಿಸುವ ಸೂತ್ರಗಳು ನಮ್ಮ ನಮ್ಮ ಮನೆಗಳಲ್ಲೇ ಇವೆ. ಅದನ್ನು ಕ್ರಿಯಾಶೀಲಗೊಳಿಸಬೇಕಷ್ಟೇ. ಒಂದುವೇಳೆ ಆ ಕಾರ್ಯವನ್ನು ಮಾಡದೇ ಸುಮ್ಮನಿದ್ದರೆ, ಒಂದು ಕ್ರಿಯಾಶೀಲವಾಗಬಲ್ಲ ಮಾಧ್ಯಮಗಳನ್ನು ಹಾಳಾಗಲು ಬಿಟ್ಟ ಅಪರಾಧಿ ಪ್ರಜ್ಞೆಯನ್ನು ನಾವೇ ಹೊತ್ತುಕೊಳ್ಳಬೇಕು. ಆದ ಕಾರಣ ನಾವು ಎಚ್ಚೆತ್ತುಕೊಳ್ಳಬೇಕಾದುದು ಅನಿವಾರ್ಯ.

Wednesday, March 18, 2009

ರಕ್ತದೊತ್ತಡದ ಸಚಿವರನ್ನು ದಯವಿಟ್ಟು ಬಿಟ್ಟು ಬಿಡಿ !

ಬಹಳ ತಮಾಷೆ ಎನಿಸುತ್ತದೆ. ನಮ್ಮ ಸರಕಾರಗಳನ್ನು ನಡೆಸುವ ಮಂದಿ ಇಷ್ಟೊಂದು ತಾಳ್ಮೆ ಕಳೆದುಕೊಂಡರೆ ಹೇಗೆ (ಟೆನ್ಶನ್) ಎಂದು ಅರ್ಥವಾಗುವುದಿಲ್ಲ. ಪ್ರಜೆಗಳೆಲ್ಲಾ ತಾಳ್ಮೆ ಕೆಡಿಸಿಕೊಂಡರೆ ಅವರಿಗೆ ಸಹನೆಯ ಪಾಠ ಹೇಳಬೇಕಾದ ಮಂದಿ ಇವರು. ಆದರೆ ಅವರೇ ಬೊಬ್ಬೆ ಹಾಕುತ್ತಾರೆ, ತೀರಾ ರಕ್ತದೊತ್ತಡಕ್ಕೆ ಒಳಗಾಗುತ್ತಾರೆ. ಊರ ಮಂದಿಯ ಎದುರು ತೀರಾ ತುಚ್ಛವೆನ್ನಿಸಿಬಿಡುತ್ತಾರೆ. 
ಇತ್ತೀಚೆಗಷ್ಟೇ ರಾಷ್ಟ್ರೀಯ ಕಲಾಗಾರದ ಉದ್ಘಾಟನೆ ಸಮಾರಂಭದಲ್ಲಿ ಸಚಿವ ರಾಮಚಂದ್ರಗೌಡರು ನಡೆದುಕೊಂಡ ರೀತಿಯನ್ನು ಉಲ್ಲೇಖಿಸುವುದಾದರೆ ನಿಜಕ್ಕೂ ಬೇಸರ ಎನಿಸುತ್ತದೆ. ಬಹಳಷ್ಟು ಬಾರಿ ಅಪ್ರಬುದ್ಧತೆಯನ್ನು, ಅಜ್ಞಾನವನ್ನು ಕ್ಷಮಿಸಿಬಿಡಬಹುದು. ಆದರೆ ಅಹಂಕಾರದ ಉದ್ಧಟತನವನ್ನು ಸಹಿಸಬಾರದು. ಅಂದಿನ ಸಚಿವರ ವರ್ತನೆ ನಿಜವಾಗಲೂ ಉದ್ಧಟತನವೇ. 

ಕಲಾವಿದರೆಂದಾಗಲೀ, ಅವರ ಸ್ಥಾನಮಾನದಿಂದಾಗಲೀ ಈ ಘಟನೆಯನ್ನು ಖಂಡಿಸುತ್ತಿಲ್ಲ. ಪ್ರಜಾತಂತ್ರದಲ್ಲಿ  ಯಾವುದೇ ಒಬ್ಬ ನಾಗರಿಕನಿಗೆ ತೋರುವಂಥ ಗೌರವವೇ ಅದಲ್ಲ. ಒಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಎದ್ದು ನಿಂತು ಏನೋ ಹೇಳಲು ಪ್ರಯತ್ನಿಸಿದ ನಾಗರಿಕನನ್ನು (ಕಲಾವಿದ ಎಂಬುದನ್ನು ನಂತರ ವ್ಯಾಖ್ಯಾನಿಸೋಣ) ಸಮಾಧಾನಗೊಳಿಸುವ ಪರಿಯೇ ಅದು ಎಂಬುದು ನನ್ನ ಪ್ರಶ್ನೆ.

‘ಗೆಟ್‌ಔಟ್, ಸರಕಾರ ಇಲ್ಲಿ ಮಾತನಾಡುತ್ತಿದೆ’ ಎಂದರೆ ಏನು ಅರ್ಥ ? ಸರಕಾರದ ಮುಖವಾಡ ಹಾಕಿಕೊಂಡು ಇಂಥ ಸಚಿವರು ಹೀಗೆ ಬಾಯಿಗೆ ಬಂದಂತೆ ಮಾತನಾಡುತ್ತಿರುವುದನ್ನು ಯಾರು ಏಕೆ ಸಹಿಸಬೇಕೆಂಬುದು ಅರ್ಥವಾಗದ ಸಂಗತಿ. ರಾಮಚಂದ್ರಗೌಡರ ಇಂಥ ಒತ್ತಡದ ವರ್ತನೆ ಇದೇನೋ ಹೊಸತಲ್ಲ. ಎರಡೂವರೆ ವರ್ಷದ ಹಿಂದೆ ಡೇವಿಡ್ ಸಿಮೆಯೋನ್ ವಿಧಾನಪರಿಷತ್‌ನಲ್ಲಿ ಸಭಾಪತಿಗಳಾಗಿದ್ದರು. ಬೆಳಗ್ಗೆಯಿಂದ ಮಾತನಾಡಲು ಅವಕಾಶ ಕೇಳಿ ಕೇಳಿ ಗೌಡರಿಗೆ ಸಾಕಾಗಿ ಹೋಗಿತ್ತು. ಸುದರ್ಶನ್ ಅವರು ಇನ್ನೂ ಅವಕಾಶ ಕೊಟ್ಟಿರಲಿಲ್ಲ. ಕಲಾಪದ ಮಧ್ಯೆ ಇದ್ದಕ್ಕಿದ್ದಂತೆ ಸಿಡಿದೆದ್ದ ಗೌಡರು, ‘ನನ್ನ ಅವಕಾಶವನ್ನು ಹತ್ತಿಕ್ಕುತ್ತಿದ್ದೀರಿ. ಇದು ಸರಿಯಲ್ಲ. ಇದು ತಾರತಮ್ಯ ವರ್ತನೆ’ ಎಂದು ಉಪ ಸಭಾಪತಿ ವಿರುದ್ಧ ಪ್ರತಿಭಟಿಸಿ ಸಭಾಪತಿಗಳಿಗೆ ದೂರು ನೀಡುವುದಾಗಿ ಬಿರಬಿರನೆ ಹೊರನಡೆದರು. ಕೊನೆಗೆ ಈಗಿನ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವೆ ಶೋಭಾ ಕರಂದ್ಲಾಜೆಯವರೆಲ್ಲಾ ಸಮಾಧಾನ ಪಡಿಸುವಷ್ಟರಲ್ಲಿ ಸಾಕಾಗಿ ಹೋಗಿತ್ತು. ಇದೂ ಸಹ ಸದಸ್ಯರಾಗಿ ಹೀಗೆ ನಡೆದುಕೊಂಡಿದ್ದು ಬಹುಶಃ ಇವರೊಬ್ಬರೇ. ಆ ಸಂದರ್ಭದಲ್ಲಿ ಎಲ್ಲರ ಆತಂಕವಿದ್ದದ್ದು ಅವರ ರಕ್ತದೊತ್ತಡದ ಬಗ್ಗೆ. 

ಇನ್ನು ಕಲಾವಿದರ ವಿಷಯ. ಒಂದಂತೂ ನಿಜ. ಯಡಿಯೂರಪ್ಪ ಸರಕಾರ ಕನ್ನಡ ಮತ್ತು ಸಂಸ್ಕೃತಿ ಬೆಳವಣಿಗೆಯ ಹಿನ್ನೆಲೆಯಲ್ಲಿ ಕೇಳಿದಷ್ಟು ಹಣ ಕೊಟ್ಟಿದ್ದಾರೆ. ಆದರೆ ಅದರ ನಿರ್ವಹಣೆಗೆ ಮಾತ್ರ ದಿಕ್ಕು-ದೆಸೆಯೇ ಇಲ್ಲ. ಸಂಸ್ಕೃತಿ ಇಲಾಖೆ ನಿರ್ವಹಣೆ ಅಧೋಗತಿಗೆ ಇಳಿದಿದೆ. ಸರಕಾರ ಕೊಟ್ಟ ಹಣವನ್ನು ವೆಚ್ಚ ಮಾಡಲೂ ಪುರುಸೊತ್ತಿಲ್ಲ. ಆ ಇಲಾಖೆಯ ನಿರ್ವಹಣೆಯ ಹೊಣೆಯೂ ಅಷ್ಟೇ. ‘ಯಾರು ಖಾಲಿಯಿದ್ದಾರೋ ಅವರು ಆ ಇಲಾಖೆಯ ಕಷ್ಟ ಸುಖ ಕೇಳುವ ಸ್ಥಿತಿ’. ವಾಸ್ತವವಾಗಿ ಮೊದಲ ಬಾರಿಗೆ ಸರಕಾರ ಬಂದು, ಸಚಿವರಾಗಿರುವಾಗ ಯಾರು ತಾನೇ ಖಾಲಿಯಿದ್ದಾರೆ, ಹೇಳಿ ನೋಡೋಣ !

ಹಣ ಕೊಟ್ಟಿದೆ ಎಂಬುದನ್ನು ಬಿಟ್ಟರೆ ಸಂಸ್ಕೃತಿ-ಸಾಹಿತ್ಯದ ಬೆಳವಣಿಗೆಯತ್ತ ಗಮನವನ್ನೇ ಹರಿಸಿಲ್ಲ. ಈ ರೀತಿ ಅನಾಥವಾಗಿರುವುದು ಬಹುಶಃ ಇದೇ ಮೊದಲು. ಈ ಹಿಂದೆಲ್ಲಾ ಇಂಥ ಉದಾಹರಣೆಗಳೇ ಕಡಿಮೆ. ಸಾಹಿತ್ಯ-ಸಂಸ್ಕೃತಿಯ ಗಂಧಗಾಳಿ ಗೊತ್ತಿಲ್ಲದವರೂ ಇಷ್ಟೊಂದು ನಿಷ್ಕಾಳಜಿ ವಹಿಸಿಲ್ಲ. ಜತೆಗೆ ಕಲಾವಿದರೊಂದಿಗೆ ಹೀಗೆ ಅನುಚಿತವಾಗಿ ವರ್ತಿಸುವರಂಥ ಸಚಿವರನ್ನು ಮಂತ್ರಿಮಂಡಳದಲ್ಲಿ ಇಟ್ಟುಕೊಂಡಿಲ್ಲ. 

ಎಸ್. ರಮೇಶ್ ಅವರು ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದಾಗಿನ ಸಂದರ್ಭ. ಧಾರವಾಡಕ್ಕೆ ಹೋದ ಸಚಿವರು ಅತ್ಯಂತ ಉತ್ಸಾಹದಿಂದಲೇ ಇಲಾಖೆ ಅಧಿಕಾರಿಗಳನ್ನು ಕರೆದು, ‘ದ. ರಾ. ಬೇಂದ್ರೆಯವರನ್ನು ಕಂಡು ಹೂಗುಚ್ಛ ಕೊಟ್ಟು ಬರೋಣ’ ಎಂದರಂತೆ. ತಕ್ಷಣವೇ ಅಧಿಕಾರಿಗಳು ಅವಗಢವನ್ನು ನಿರೀಕ್ಷಿಸಿ, ‘ಇಲ್ಲ ಸಾರ್, ಅವರು ಬದುಕಿಲ್ಲ’ ಎಂದರಂತೆ. ಅದಕ್ಕೆ ಸಚಿವರು ಉತ್ಸಾಹ ಕಡಿಮೆಯಾಗಲಿಲ್ಲ. ‘ಹೌದೇ, ಪಾಪ. ಒಂದು ಕೆಲಸ ಮಾಡಿ. ಅವರ ಶ್ರೀಮತಿಗೆ ಹೂಗುಚ್ಛ ಕೊಡೋಣ’ ಎಂದು ಸೂಚಿಸಿದರಂತೆ. ‘ಇಲ್ಲ ಸಾರ್, ಅವರು ಬೇಂದ್ರೆಯವರಿಗಿಂತ ಮೊದಲೇ ಹೋದರು’ ಎಂದಾಗ ‘ಹೌದೇ, ಇರಲಿ ಬಿಡಿ’ ಎಂದು ಸುಮ್ಮನಾದರಂತೆ. ಇದು ಅಜ್ಞಾನದ ಸ್ಥಿತಿ.

ನಮ್ಮ ನಾಡಿನ ಇತಿಹಾಸದಲ್ಲಿ ಯಾವ ಸರಕಾರವೂ, ಸಚಿವರೂ ಸಾಂಸ್ಕತಿಕ ವಲಯದವರೊಂದಿಗೆ ಹೀಗೆ ವರ್ತಿಸಿಲ್ಲ. ಅತ್ಯಂತ ಕಾಳಜಿಯಿಂದ ವರ್ತಿಸಿದ್ದರ ಪರಿಣಾಮವೇ ಬೇರೆ ರಾಜ್ಯಗಳಲ್ಲಿ ಇರಲಾರದಷ್ಟು ಪ್ರಶಸ್ತಿ, ಅಕಾಡೆಮಿಗಳಿವೆ. ದೇವರಾಜು ಅರಸು ಅವರು ಸದಾ ಸಾಹಿತಿಗಳು-ಕಲಾವಿದರೊಂದಿಗೆ ಬೆರೆತಿದ್ದವರೇ. ಗುಂಡೂರಾವ್ ಅವರು ಕಲಾವಿದರನ್ನು ನಡೆಸಿಕೊಳ್ಳುತ್ತಿದ್ದ ಪರಿಯೇ ಭಿನ್ನ. ಪ್ರತಿ ಬಾರಿಯೂ ಮಾಸಾಶನದ ಏರಿಕೆಗೆ ತಡೆ ಹಾಕುತ್ತಿದ್ದ ಐಎಎಸ್ ಬಾಬೂಗಳನ್ನು ತರಾಟೆಗೆ ತೆಗೆದುಕೊಂಡು, ‘ನಿಮ್ಮ ಟಿಎ, ಡಿಎ ಯಷ್ಟೂ ಅವರಿಗೆ ಮಾಸಾಶನ ಸಿಗೋದಿಲ್ಲ. ಯಾಕ್ ತಡೆ ಮಾಡ್ತೀರಾ?’ ಎಂದು ಪ್ರಶ್ನಿಸುತ್ತಿದ್ದರು. 

ಇನ್ನು ರಾಮಕೃಷ್ಣ ಹೆಗಡೆಯವರ ಕಾಲದ ಘಟನೆ ಕೇಳಿ. ಉರ್ದು-ಕನ್ನಡ ಕವಿ ಹಮೀದ್ ಅಲ್ಮಸ್ ಆಗ ಉರ್ದು ಸಾಹಿತ್ಯ ಅಕಾಡೆಮಿ ಸದಸ್ಯರಾಗಿದ್ದರು. ಕಾರ್ಮಿಕ ಇಲಾಖೆಯ ನೌಕರ. ಒಮ್ಮೆ ಕೆ.ಆರ್. ಸರ್ಕಲ್ ನಲ್ಲಿ ನಡೆದುಹೋಗುತ್ತಿದ್ದರಂತೆ. ಅದೇ ಹಾದಿಯಲ್ಲಿ ಹೋಗುತ್ತಿದ್ದ ರಾಮಕೃಷ್ಣ ಹೆಗಡೆ ಕಾರು ಪಕ್ಕದಲ್ಲಿ ನಿಂತಿತು. ಅದರಿಂದಿಳಿದು ಬಂದ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ, ‘ಏನು ಅಲ್ಮಸ್ ಅವರೇ ಹೇಗಿದ್ದೀರಿ. ಏನಾದರೂ ತೊಂದರೆಯಿದೆಯಾ, ಸಮಸ್ಯೆಯಿದೆಯಾ? ’ಎಂದು ಕೇಳಿದರಂತೆ. ಆಗ ಅಲ್ಮಸ್ ಅವರು, ‘ನನಗೇನೂ ಇಲ್ಲ. ನನ್ನ ಮನೆ ಮುಂದೆ ಇರುವ ಸಾರ್ವಜನಿಕ ನಲ್ಲಿ (ನಳ) ಕೆಟ್ಟು ಹೋಗಿ ಬಹಳಷ್ಟು ತಿಂಗಳಾಗಿವೆ. ಜನ ಬಹಳ ಕಷ್ಟ ಪಡುತ್ತಿದ್ದಾರೆ’ ಎಂದರಂತೆ. ತಕ್ಷಣವೇ ಹೆಗಡೆಯವರು, ತಮ್ಮ ಆಪ್ತ ಸಹಾಯಕರಿಗೆ ಸೂಚಿಸಿದರಂತೆ. ಒಂದು ದಿನದೊಳಗೆ ಅದು ಸರಿಯಾಯಿತಂತೆ. 

ಒಂದು ಸಂದರ್ಭವನ್ನು ನಿಭಾಯಿಸಲು ಅನುಭವ ಬೇಕು. ಅನುಭವವಿಲ್ಲದವರು ಅದನ್ನು ಸಾಧಿಸಲು ಶ್ರಮಪಡಬೇಕು. ಅದುಬಿಟ್ಟು ತಮ್ಮ ಅನನುಭವವನ್ನೇ ಸಮರ್ಥಿಸಿಕೊಳ್ಳಲು ಹೊರಟರೆ ನಗೆಪಾಟಲೀಗೀಡಾಗುತ್ತಾರೆ. ಈಗ ರಾಮಚಂದ್ರಗೌಡರು ಆಗಿರುವುದು ಇದೇ. 

ದೇವೇಗೌಡರು ರಾಮಚಂದ್ರಗೌಡರಷ್ಟು ಡಾಕ್ಟರೇಟ್ ಪಡೆದವರಲ್ಲ. ಆದರೆ ಅವರ ಸಂದರ್ಭ ನಿಭಾಯಿಸುವಿಕೆಯ ಜಾಣ್ಮೆ ಬಂದದ್ದು ಅನುಭವವದಿಂದಲೇ. ಅವರು ಮುಖ್ಯಮಂತ್ರಿಯಾಗಿದ್ದಾಗಿನ ಸಂದರ್ಭ. ರವೀಂದ್ರ ಕಲಾಕ್ಷೇತ್ರದಲ್ಲಿ  ವಿವಿಧ ರಾಜ್ಯ ಪ್ರಶಸ್ತಿಗಳ ಪ್ರದಾನ ಕಾರ್‍ಯಕ್ರಮ. ಅವರು ವೇದಿಕೆಗೆ ಆಗಮಿಸುತ್ತಿದ್ದಂತೆ ಸಭೆಯಲ್ಲಿದ್ದ ಒಂದೆರಡು ಮಂದಿ ಸುಮ್ಮನೆ ಬೊಬ್ಬೆ ಹಾಕತೊಡಗಿದರು. ತಕ್ಷಣವೇ ದೇವೇಗೌಡರು ಅವರನ್ನು ಉದ್ದೇಶಿಸಿ ಶಾಂತಚಿತ್ತದಿಂದಲೇ, ‘ನೀವ್ಯಾರು ಅಂತ ನನಗೆ ಗೊತ್ತಿದೆ. ಸುಮ್ನೆ ಕೂತ್ಕೊಳ್ಳಿ. ಕಾರ್‍ಯಕ್ರಮ ಮುಗಿದ ಮೇಲೆ ನಿಮಗೆ ಸಿಗ್ತೀನಿ. ಆಗ ನಿಮ್ದೆಲ್ಲಾ ಹೇಳಿಕೊಳ್ಳಿ. ಈಗ ಕೂತ್ಕೊಳ್ಳಿ’ ಎಂದು ಮೂರು ಸಾರಿ ಹೇಳಿ ಕುಳ್ಳಿರಿಸಿಯೇ ಬಿಟ್ಟರು. ಆ ಕ್ಷಣದಲ್ಲಿ ಒಬ್ಬ ಪೊಲೀಸರನ್ನು ಕರೆದು, ‘ಅವನನ್ನು ಅರೆಸ್ಟ್ ಮಾಡಿ ಒಳಗೆ ಹಾಕಿ’ ಎಂದಿದ್ದರೆ ಏನೂ ಆಗುತ್ತಿರಲಿಲ್ಲ. ಒಂದು ಕ್ಷಣದಲ್ಲಿ ಆ ಕೆಲಸವಾಗುತ್ತಿತ್ತು. ಆದರೆ ಅವನನ್ನು ಸಮಾಧಾನಗೊಳಿಸಲು ತೆಗೆದುಕೊಂಡ ಕ್ಷಣ ನಾಲ್ಕಾರು ಇರಬಹುದು. ಅವರ ಆ ಜಾಣ್ಮೆ ಹತ್ತಿಕ್ಕುವ ಪ್ರವೃತ್ತಿಯನ್ನು ಸಾಯಿಸಿತು. 

ಆ ಸಾಧ್ಯತೆ ಇಲ್ಲೂ ಇತ್ತು. ಅದನ್ನು ರಾಮಚಂದ್ರಗೌಡರು ಕೈಗೊಳ್ಳಲಿಲ್ಲ. ಸುಮ್ಮನೆ ಕಲಾವಿದರ ವಿರುದ್ಧ ಹರಿಹಾಯ್ದು ಜನರ ಬಾಯಿಗೆ ಆಹಾರವಾದರು. ಪ್ರತಿ ಕಾರ್ಯಕ್ರಮಕ್ಕೂ ಒಂದು ಸಂದರ್ಭ, ಔಚಿತ್ಯ ಎಂಬುದು ಇರುತ್ತದೆ. ಅದನ್ನು ನಮ್ಮ ಸಚಿವರಗಳು ಅರ್ಥಮಾಡಿಕೊಳ್ಳಬೇಕು. ಒಂದುವೇಳೆ ಎಂ.ಎಫ್. ಹುಸೇನ್ ಮೇಲೆ ಸಿಟ್ಟಿದ್ದರೆ, ಅದನ್ನು ತೀರಿಸಿಕೊಳ್ಳಲು ಇದು ವೇದಿಕೆಯಲ್ಲ. ಕಲಾಕೃತಿ ರಚಿಸಿದ ಕೂಡಲೇ ಕಲಾವಿದರಾಗಲಾರರು ; ತಮ್ಮೊಳಗಿನ ಸೂಕ್ಷ್ಮ ಸಂವೇದನೆ, ಒಳ ಮನಸ್ಸುಗಳನ್ನು ಸದಾ ಜಾಗೃತದಲ್ಲಿಟ್ಟುಕೊಳ್ಳುವವನು ಕಲಾವಿದ. ಹಾಗಾಗಿ ರಾಮಚಂದ್ರಗೌಡರು ಕಲಾಕೃತಿ ರಚಿಸಿ ಬಹುಮಾನ ಪಡೆದಿರಬಹುದು, ಆದರಿನ್ನೂ ಕಲಾವಿದರಾಗಿಲ್ಲ. 

ಒಬ್ಬ ಸಚಿವನಿಗೂ, ನಾಗರಿಕನಿಗೂ ವ್ಯತ್ಯಾಸಗಳಿರುತ್ತವೆ. ಸಚಿವನ ವರ್ತನೆ ಎಲ್ಲರಿಗೂ ಮಾದರಿಯಾಗಬೇಕು. ಮುಖ್ಯಮಂತ್ರಿಗಳು ತಮ್ಮ ಸಚಿವರಿಗೆ ಇಂಥದೊಂದು ಪಾಠ ಕಲಿಸುವುದು ಸೂಕ್ತ. ಕಲಿಯದವರನ್ನು ಮಂತ್ರಿಮಂಡಳದಿಂದ ಕೈ ಬಿಡುವುದು ಒಳಿತು.  ಇಲ್ಲದಿದ್ದರೆ ಅವರ ಎಲ್ಲ ಶ್ರಮವೂ ಹೊಳೆಯಲ್ಲಿ ಹುಣಸೆಹಣ್ಣು ಕಿವುಚಿದಂತೆಯೇ.

Wednesday, December 5, 2007

ಬದಲಾಗಿದೆ

ಗೆಳೆಯರೇ,

ನನ್ನ ಬ್ಲಾಗ್ ವಿಳಾಸ ಬದಲಾಯಿಸಿದ್ದೇನೆ. ಚೆಂಡೆಮದ್ದಳೆ ಇದ್ದೇ ಇರುತ್ತೆ. ರಂಗಸ್ಥಳ ಬದಲಾಗಿದೆ. (http://chendemaddale.wordpress.com)

ನಾವಡ

Tuesday, November 27, 2007

ಗಣಿತಕ್ಕೆ ಅನ್‌ರೂಲ್ಡ್...

ಅಪ್ಪನಿಗೀಗ ನೋಟು ಬುಕ್ಕು ಹೆಕ್ಕುವ ಹೊಣೆ. ಪ್ರತಿ ಸಂಜೆ ಪೇಟೆಗೆ ಹೊರಟಾಗಲೆಲ್ಲಾ ಅಂಗಡಿ ಮೇಲೆಯೇ ಕಣ್ಣು. ಅಲ್ಲಿ ಪೇರಿಸಿಟ್ಟ ದಂಡಿ ದಂಡಿ ಪುಸ್ತಕ ಕಂಡು ಮನದೊಳಗೆ ಏನೇನೋ ಲೆಕ್ಕ. ಅದರ ದರ, ಕಾಗದದ ಗುಣಮಟ್ಟ ಎಲ್ಲವನ್ನೂ ತಾಳೆ ಹಾಕಿದ ನಂತರವೇ ತೀರ್ಮಾನ.

ಹೊಸ ಶೈಕ್ಷಣಿಕ ವರ್ಷ ಎಂಬುದು ಶಿಕ್ಷಣ ಇಲಾಖೆಯ ತಖ್ತೆಃಯಲ್ಲಿ. ಮನೆಯಲ್ಲಿ ಮಕ್ಕಳು ಮತ್ತೊಂದು ಕ್ಲಾಸು ಪಾಸಾಗಿದ್ದಾರೆ ಎಂದೇ ಅರ್ಥ. ಪುಸ್ತಕದ ಅಂಗಡಿಯಲ್ಲಿ ನೋಟ್ ಪುಸ್ತಕಗಳ ರಾಶಿ. ಓದದವನ ಮನಸ್ಸಿನಲ್ಲೂ ಓದುವ ಹುಚ್ಚು ಹಚ್ಚುವ ಕಿಚ್ಚು.

ತರಹೇವಾರಿ ಪುಸ್ತಕಗಳ ಮುಖಪುಟ ವರ್ಣನೆಗೇ ಒಂದು ಕಿಮ್ಮತ್ತಿದೆ. ಒಂದರ ಮುಖಪುಟ ಬಣ್ಣದ್ದು, ಒಳಗೆ ಹಾಳೆ ಬಹಳ ತೆಳು. ಮತ್ತೊಂದರದ್ದು ಹಾಳೆ ಚೆನ್ನಾಗಿದೆ, ಅದರ ಮೇಲಿನ ಗೆರೆ ಸ್ವಲ್ಪ ವಕ್ರ. ಮತ್ತುಳಿದ ಪುಸ್ತಕದಲ್ಲಿ ಕೆಲವನ್ನು ಕತ್ತರಿಸಿದ್ದೇ ಸರಿಯಿಲ್ಲ.

ತಾನು ಕೊಂಡದ್ದು ಎಲ್ಲರ ಪುಸ್ತಕಕ್ಕಿಂತ ಚೆನ್ನಾಗಿರಬೇಕೆಂಬ ಒಲವು. ದೊಡ್ಡವರಾದ ಮೇಲೆ ಹೇಳುವ ‘ಅನುಪಮದ ಹಾಗೆ. ಅಪ್ಪನ ಹಿಂದೆ ಮಗನೂ ಅಂಗಡಿಗೆ. ಪುಸ್ತಕ ಹುಡುಕುವುದೆಂದರೆ ಆಟಿಕೆ ಲೋಕದಲ್ಲಿದ್ದ ಹಾಗೆ ನನಗೆ. ಜಿಂಕೆ ಮುಖ, ಹುಲಿ, ಸಿಂಹ, ಗಿಳಿ, ಪಕ್ಷಿ ಸ್ಟಿಕ್ಕರ್‌ಗಳಿಂದ ವಿಜೃಂಭಿತ. ಇದು ಕೆಲವೇ ದಿನ. ನಂತರ ಇವೆಲ್ಲದರ ಸ್ಥಾನದಲ್ಲಿ ಮಿಕ್ಕಿ ಮೌಸ್, ಡೊನಾಲ್ಡ್‌ಗಳ ಹಾಜರಿ.
ಬಾತುಕೋಳಿ ನಿಂತ ಹಾಗೆ ಎನಿಸುವ ಡೊನಾಲ್ಡ್ ನಮಗೆ ಹೊಸದೇ. ಡೊನಾಲ್ಡ್‌ನ ಮಾತು ನಮಗೂ ಅರ್ಥವಾಗುತ್ತಲ್ಲ. ಅದಕ್ಕೇ ಕೆರೆಯ ಬಾತುಕೋಳಿಗಿಂತ ಭಿನ್ನ.

ಇದರ ನಡುವೆ ಲೇಖಕ್ ಆಗಮನ. ಎಷ್ಟು ಒಳ್ಳೆ ಪುಸ್ತಕ, ಹಾಳೆ ಬೆಳ್ಳಗೆ ಎನಿಸಿದರೂ ಅಲ್ಪ ನೀಲಿ ಮಿಶ್ರಿತ. ನೀಲಿಬಿಳಿ ಮೋಡದಂತೆ. ಹಾಳೆ ತುಂಬಾ ದಪ್ಪ. ಎಷ್ಟೆಂದರೆ ನನ್ನ ಇಂಕಿನ ಪೆನ್ನಿನ ನಿಬ್ಬು ಕಕ್ಕಿದಾಗಲೆಲ್ಲಾ ಬೇಸರವನ್ನೇ ಮಾಡಿಕೊಂಡದ್ದಿಲ್ಲ. ದರದ ಮಾತಿನಲ್ಲಿ ೫೦ ಪೈಸೆ ಹೆಚ್ಚಿರಬಹುದು. ಅದರ ಉಸ್ತುವಾರಿ ಅಪ್ಪನಿಗಿರಬೇಕು. ಮಗನಿಗೇನಿದ್ದರೂ ಹಾಳೆ, ದಟ್ಟಿಯ ಸುಖ.

ಗಣಿತಕ್ಕೆ ಮಾತ್ರ ಅನ್‌ರೂಲ್ಡ್. ಉಳಿದವಕ್ಕೆಲ್ಲಾ ರೂಲೇ ಇರಬೇಕೆಂಬ ಅಘೋಷಿತ ರೂಲು. ಪುಸ್ತಕದ ಪ್ರತಿ ಹಾಳೆಗೂ ಲೆಕ್ಕ. ಅಮ್ಮನಿಗೆ ಪಾಕ ಪ್ರವೀಣೆಯ ಜತೆ ಹಾಳೆಯ ನಿರ್ವಹಣೆ. ಒಂದು ಹರಿದಿದ್ದರೆ ಎರಡು ಪೆಟ್ಟು . ಜತೆಗೆ ದುಡ್ಡಿನ ಬೆಲೆ ತಿಳಿದಿಲ್ಲವೆಂಬ ಬೈಗುಳ. ಹರಿದು ಹೋದದ್ದಕ್ಕೆ ‘ಕಾನೂನುಕ್ರಮ. ಇಂಥದ್ದರ ಮಧ್ಯೆಯೂ ಅಪ್ಪನಿಗೆ ಪುಸ್ತಕದ ಬಂಡಲ್ ತರುವುದೆಂದರೆ ಹಣ ಕಳೆದುಕೊಂಡೂ ಏನನ್ನೋ ಗಳಿಸಿದ್ದರ ‘ಬಣ್ಣ’ನೆಗೆ ನಿಲುಕದ ಖುಷಿ.

  © Blogger template 'iNY' by Ourblogtemplates.com 2008

Back to TOP